
ಪಾಂಡವಪುರ: ಇಲ್ಲಿನ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ (ಪಿಎಸ್‌ಎಸ್‌ಕೆ) ಕಾರ್ಮಿಕರ ಬ್ಯಾಂಕ್ ಅನ್ನು ಮುಚ್ಚದಂತೆ ಒತ್ತಾಯಿಸಿ ಕಾರ್ಖಾನೆಯ ನಿವೃತ್ತ ನೌಕರರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಎದುರು ಜಮಾಯಿಸಿದ ನಿವೃತ್ತ ನೌಕರರು, ನಿರಾಣಿ ಶುಗರ್ಸ್ ಕಂಪನಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪಿಎಸ್‌ಎಸ್‌ಕೆ ಕಾರ್ಖಾನೆಯ ಹಿಂದಿನ ಆಡಳಿತ ಮಂಡಳಿಯೂ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರರ ಹಣಕಾಸು ವ್ಯವಹಾರ ನಡೆಸಲು ಪಿಎಸ್‌ಎಸ್‌ಕೆ ಕಾರ್ಮಿಕರ ಬ್ಯಾಂಕ್ ಆರಂಭಿಸಿತ್ತು. ಅಂದಿನಿಂದಲೂ ಕಾರ್ಮಿಕರು, ನಿವೃತ್ತ ಕಾರ್ಮಿಕರು ಬ್ಯಾಂಕ್‌ನಲ್ಲಿ ವ್ಯಹರಿಸಿಕೊಂಡು ಬಂದಿದ್ದಾರೆ. ಆದರೆ, ಇದೀಗ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ನಿರಾಣಿ ಶುಗರ್ಸ್ ನವರು ಕಾರ್ಮಿಕರ ಬ್ಯಾಂಕ್ ಸಮರ್ಪಕವಾಗಿ ನಿರ್ವಹಣೆ ಮಾಡದೆ ಬ್ಯಾಂಕ್ ಮುಚ್ಚುವ ಹಂತಕ್ಕೆ ತಂದಿದ್ದಾರೆ ಎಂದರು ಆರೋಪಿಸಿದರು.
ಬ್ಯಾಂಕ್ ಮುಚ್ಚಿದರೆ ಮೊದಲಿನಿಂದಲೂ ವ್ಯವಹರಿಸಿಕೊಂಡು ಬಂದಿರುವ ಕಾರ್ಮಿಕರಿಗೆ ಅನಾನುಕೂಲ ಉಂಟಾಗಲಿದೆ. ಹಾಗಾಗಿ ಈಗಿನ ಆಡಳಿತ ಮಂಡಳಿಯೂ ಯಾವುದೇ ಕಾರಣಕ್ಕೂ ಕಾರ್ಮಿಕರ ಬ್ಯಾಂಕ್ ಮುಚ್ಚಬಾರದು. ಒಂದು ವೇಳೆ ಬ್ಯಾಂಕ್ ಮುಚ್ಚಲು ಮುಂದಾದರೆ, ತೀವ್ರವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಳಿಕ ಕಾರ್ಖಾನೆಯ ನಿವೃತ್ತ ನೌಕರರು ಗ್ರೇಡ್2–ತಹಶೀಲ್ದಾರ್ ಎಸ್.ಸಂತೋಷ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನಿವೃತ್ತ ನೌಕರರಾದ ಎಂ.ನಂಜೇಗೌಡ, ಬೋರೇಗೌಡ, ಸರೋಜಮ್ಮ, ಜಯಮ್ಮ, ನಿಂಗೇಗೌಡ, ಕರೀಗೌಡ, ಕೆಂಪೇಗೌಡ, ಎಚ್.ನಿಂಗೇಗೌಡ, ಭಾಗ್ಯಮ್ಮ, ಶಿವಮ್ಮ, ಲಕ್ಷ್ಮಮ್ಮ, ಚಿಕ್ಕತಾಯಮ್ಮ, ಗಂಗಾಧರ್, ನರಸಿಂಹೇಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.