ADVERTISEMENT

ರಾಮ ಮಂದಿರ ಪುನರ್ ಸ್ಥಾಪನೆ ಮಾಡಿರುವುದು ನಮ್ಮೆಲ್ಲರ ಪುಣ್ಯ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 6:20 IST
Last Updated 2 ಆಗಸ್ಟ್ 2025, 6:20 IST
ಮಳವಳ್ಳಿ ತಾಲ್ಲೂಕಿನ ಹಿಟ್ಟನಹಳ್ಳಿಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ರಾಮಮಂದಿರ ಉದ್ಘಾಟನೆ ಮತ್ತು ನವಗ್ರಹ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಿದರು 
ಮಳವಳ್ಳಿ ತಾಲ್ಲೂಕಿನ ಹಿಟ್ಟನಹಳ್ಳಿಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ರಾಮಮಂದಿರ ಉದ್ಘಾಟನೆ ಮತ್ತು ನವಗ್ರಹ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಿದರು    

ಮಳವಳ್ಳಿ: ‘ರಾಮನ ಜನ್ಮಸ್ಥಳದಲ್ಲಿ 500 ವರ್ಷಗಳ ಹಿಂದೆ ದುಷ್ಟವ್ಯಕ್ತಿಗಳು ಕೆಡವಿದ್ದ ರಾಮ ಮಂದಿರವನ್ನು ಕಾನೂನಿನ ಪ್ರಕಾರ ಪುನರ್ ಸ್ಥಾಪನೆ ಮಾಡಿರುವುದು ನಮ್ಮೆಲ್ಲರ ಪುಣ್ಯ’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ತಾಲ್ಲೂಕಿನ ಹಿಟ್ಟನಹಳ್ಳಿಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ರಾಮಮಂದಿರ ಮತ್ತು ನವಗ್ರಹ ದೇವರ ಪ್ರತಿಷ್ಠಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶ್ರೀರಾಮ ಜನ್ಮಸ್ಥಳದಲ್ಲಿ ದೇವಸ್ಥಾನ ಕೆಡವಿ ವಿಗ್ರಹವನ್ನು ದುಷ್ಟ ವ್ಯಕ್ತಿಗಳು ಎತ್ತಿಕೊಂಡು ಹೋಗಿ ಬಿಸಾಕಿದ್ದರು. ಇದೀಗ ನಮಗೆ ಕಾನೂನಿನ ಪ್ರಕಾರ ನ್ಯಾಯ ಸಿಕ್ಕಿದೆ’ ಎಂದು ಹೇಳಿದರು.

ADVERTISEMENT

‘ಸಮಾಜದಲ್ಲಿ ಕಷ್ಟ ಸಹಿಸಿಕೊಂಡು, ಉತ್ತಮ ಜೀವನ ನಡೆಸಿಕೊಂಡು ಹೋಗುತ್ತಿರುವವರಿಂದ ಇಂದಿಗೂ ನಾಡಿನಲ್ಲಿ ಮಾನವೀಯ ಮೌಲ್ಯಗಳು ಜೀವಂತವಾಗಿವೆ. ಎಲ್ಲರೂ ಒಂದೇ ಎನ್ನುವ ರೀತಿಯಲ್ಲಿ ಗ್ರಾಮದಲ್ಲಿ ಶ್ರೀರಾಮನ ಮಂದಿರ ನಿರ್ಮಿಸಿ, ದೇವರ ಪ್ರೇರಣೆಯಿಂದ ಮಾದರಿ ಬದುಕು ನಡೆಸಲಾಗುತ್ತಿದೆ. ಮಾಜಿ ಶಾಸಕ ದಿ.ವೀರೇಗೌಡ ಅವರ ಕಾಲದಿಂದಲೂ ಹಿಟ್ಟನಹಳ್ಳಿಕೊಪ್ಪಲು ಬಹಳ ಹೆಸರು ಮಾಡಿದೆ’ ಎಂದು ಶ್ಲಾಘಿಸಿದರು.

ಮಾಜಿ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ‘ನಾನು ಮಳವಳ್ಳಿಯ ಹುಚ್ಚೇಗೌಡರ ಸೊಸೆ, ಈ ಜಿಲ್ಲೆಯ ಋಣ ನಮ್ಮ ಕುಟುಂಬದ ಮೇಲಿದೆ. ಗ್ರಾಮದಲ್ಲಿ ಅಂಬರೀಶ್ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಅವರ ಅಭಿವೃದ್ಧಿ ಕೆಲಸಗಳು ಇಂದಿಗೂ ಜೀವಂತವಾಗಿವೆ’ ಎಂದರು.

ಮಾಜಿ ಶಾಸಕ ಕೆ.ಅನ್ನದಾನಿ ಮಾತನಾಡಿ, ‘ಗ್ರಾಮಸ್ಥರ ಒಗ್ಗಟ್ಟು ಹೀಗೆ ಇರಲಿ. ಗ್ರಾಮದ ಅಭಿವೃದ್ಧಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಈಗಾಗಲೇ ₹20 ಲಕ್ಷ ಅನುದಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಉದ್ಯಾನ ಅಭಿವೃದ್ಧಿಗೆ ₹10 ಲಕ್ಷ ಅನುದಾನ ಕೊಡಿಸಲಾಗುವುದು’ ಎಂದು ಭರವಸೆ ನೀಡಿದರು.

ರಾಮಮಂದಿರ ಮತ್ತು ನವಗ್ರಹ ದೇವರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಾಮನಗರ ಬೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಎಚ್.ಎಂ.ನಾಗರಾಜು, ಗ್ರಾಮದ ಪಟೇಲ್ ಚಿಕ್ಕಮೂಗೇಗೌಡ, ಕೃಷ್ಣಕುಮಾರ್, ಎಚ್.ಕೆ.ಪುಟ್ಟಯ್ಯ, ಕುಮಾರಸ್ವಾಮಿ ಅವರನ್ನು ಅಭಿನಂದಿಸಲಾಯಿತು.

ರಾಮಮಂದಿರ ಸೇವಾ ಸಮಿತಿಯ ಅಧ್ಯಕ್ಷ ಎಚ್.ಎಂ.ಮಂಚಯ್ಯ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಮು, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಲಕ್ಷ್ಮಿಅಶ್ವಿನ್ ಗೌಡ, ಮುಖಂಡರಾದ ಎಚ್.ಸಿ.ಮಂಜುನಾಥ್, ಎಚ್.ಬಿ.ಬಸವೇಶ್, ವೀರೇಶ್ ಗೌಡ, ಬೇಲೂರು ಸೋಮಶೇಖರ್, ಎಚ್.ಆರ್.ಅಶೋಕ್ ಕುಮಾರ್, ಎಂ.ಎನ್.ಕೃಷ್ಣ, ಆನಕೆರೆ ಶಶಿ, ಬಾಲರಾಜು, ಪ್ರಮೋದ್ ಪಾಲ್ಗೊಂಡಿದ್ದರು.

ದೇಗುಲಗಳು ನೆಮ್ಮದಿ ತಾಣಗಳು

ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ ಕೆಂಗೇರಿಯ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ದೇವಸ್ಥಾನಗಳು ಜನರಿಗೆ ನೆಮ್ಮದಿ ನೀಡುವ ತಾಣಗಳಾಗಿವೆ ಎಂದರು. ಗ್ರಾಮದ ಜನರಿನಲ್ಲಿನ ಒಗ್ಗಟ್ಟು ಇತರರಿಗೆ ಮಾದರಿಯಾಗಿದೆ. ಜಾತಿ ಪಕ್ಷ ಭೇದ ಮರೆತು ಒಂದೆಡೆ ಸೇರಿ ದೇವಸ್ಥಾನ ನಿರ್ಮಿಸಲಾಗಿದೆ. ಅನೇಕ ದಾನಿಗಳು ನೆರವು ನೀಡಿದ್ದಾರೆ. ಮುಂದಿನ ದಿನಗಳಲ್ಲೂ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಂದಾಗಿ ಸೇರಿ ಕೆಲಸ ಮಾಡುವಂತಾಗಲಿದೆ ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.