ADVERTISEMENT

ರಾಮಾಯಣ ಭಾರತೀಯ ಸಂಸ್ಕೃತಿಯ ಮೂಲ

ಜಿಲ್ಲಾಡಳಿತದಿಂದ ವಾಲ್ಮೀಕಿ ಜಯಂತಿ; ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ ಅಭಿಮತ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 12:49 IST
Last Updated 31 ಅಕ್ಟೋಬರ್ 2020, 12:49 IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ ಮಾತನಾಡಿದರು
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ ಮಾತನಾಡಿದರು   

ಮಂಡ್ಯ: ‘ವಾಲ್ಮೀಕಿ ರಾಮಾಯಣ ಭಾರತೀಯ ಸಂಸ್ಕೃತಿಯ ಮೂಲವಾಗಿದೆ. ಭವಿಷ್ಯದ ಸಂಸ್ಕೃತಿಯ ಅಲೆಯು ರಾಮಾಯಣದಲ್ಲಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ವಾಲ್ಮೀಕಿ ಇಲ್ಲದೆ ರಾಮಾಯಣ ಇಲ್ಲ, ರಾಮಾಯಣ ಇಲ್ಲದೆ ವಾಲ್ಮೀಕಿ ಇಲ್ಲ. ಹಿರಿಯರು, ಶಿಕ್ಷಕರು ಮಕ್ಕಳಿಗೆ ಆಡು ಭಾಷೆಯಲ್ಲಿನ ಶ್ಲೋಕಗಳನ್ನು ಹೇಳಿಕೊಡುವ ಮೂಲಕ ರಾಮಾಯಣವನ್ನು ಇಂದಿಗೂ ಪ್ರಚಲಿತದಲ್ಲಿ ಇರಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘ಜಗತ್ತಿನ ಹಲವು ಭಾಷೆಗಗಳಲ್ಲಿ ರಾಮಾಯಣ ಗ್ರಂಥ ಪ್ರಕಟವಾಗಿದೆ. ಆರು ಸಾವಿರಕ್ಕೂ ಹೆಚ್ಚು ರಾಮಾಯಣ ಕೃತಿಗಳು ರಚಿತವಾಗಿದೆ. ರಾಮಾಯಣದ ಮೂಲವನ್ನು ಆಧರಿಸಿ ಕುವೆಂಪು ಅವರು ರಾಮಾಯಣ ದರ್ಶನಂ, ವೀರಪ್ಪ ಮೊಯಿಲಿ ಅವರು ರಾಮಾಯಣ ಅನ್ವೇಷಣೆ ಗ್ರಂಥವನ್ನು ಹೊರತಂದಿದ್ದಾರೆ. ಈ ಮಹಾಗ್ರಂಥವು ಹೊಸ ಹೊಸ ರೂಪದಲ್ಲಿ ಜನರ ಮುಂದೆ ದರ್ಶನವಾಗುತ್ತಲೇ ಇದೆ’ ಎಂದು ಹೇಳಿದರು.

‘ಸಂವಿಧಾನದ ಮೂಲ ಆಶಯಗಳಾದ ಸಮಾನತೆ, ಸ್ವಾತಂತ್ರ, ಭ್ರಾತೃತ್ವ ರಾಮಾಯಣದಲ್ಲೂ ಇದೆ. ಎಲ್ಲಾ ತತ್ವಗಳಿಗೂ ರಾಮಾಯಣ ಮೂಲವಾಗಿದೆ. ವಾಲ್ಮೀಕಿ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಯುವಕರು, ಮಕ್ಕಳು ರಾಮಾಯಣವನ್ನು ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ನಾಗಮಂಗಲದ ವಿ ವಿದ್ಯಾರ್ಥಿ ಅನುಷಾಗೆ ₹ 1 ಲಕ್ಷ ಚೆಕ್ ವಿತರಿಸಲಾಯಿತು. ಮಂಡ್ಯ ಉಪ ವಿಭಾಗಾಧಿಕಾರಿ ನೇಹಾ ಜೈನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್, ದಲಿತ ಸಂಘರ್ಷ ಸಮಿತಿ ಸಂಚಾಲಕ ಎಂ.ಬಿ. ಶ್ರೀನಿವಾಸ್, ಮುಖಂಡರಾದ ಕುಮಾರ್, ಚಂದ್ರಶೇಖರ್, ಸಂತೆಕಸಲಗೆರೆ ಬಸವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.