ADVERTISEMENT

ಮೇಲುಕೋಟೆಯಲ್ಲಿ ಸಂಭ್ರಮದ ರಥಸಪ್ತಮಿ

ಸಂಸ್ಕೃತಿಯನ್ನು ಅನಾವರಣಗೊಳಿಸಿದ ಕಲಾತಂಡಗಳು, ವಿವಿಧೆಡೆಯಿಂದ ಬಂದಿದ್ದ ಕಲಾವಿದರ ಸಂಗಮ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 4:13 IST
Last Updated 20 ಫೆಬ್ರುವರಿ 2021, 4:13 IST
ಮೇಲುಕೋಟೆ ಚೆಲುವನಾರಾಯಣನ ರಥಸಪ್ತಮಿ ಉತ್ಸವ ಸ್ವರ್ಣಲೇಪಿತ ನೂತನ ಸೂರ್ಯಮಂಡಲವಾಹನದಲ್ಲಿ ನಡೆಯಿತು
ಮೇಲುಕೋಟೆ ಚೆಲುವನಾರಾಯಣನ ರಥಸಪ್ತಮಿ ಉತ್ಸವ ಸ್ವರ್ಣಲೇಪಿತ ನೂತನ ಸೂರ್ಯಮಂಡಲವಾಹನದಲ್ಲಿ ನಡೆಯಿತು   

ಮೇಲುಕೋಟೆ: ಚೆಲುವನಾರಾಯಣ ಸ್ವಾಮಿಗೆ ಸ್ವರ್ಣಲೇಪಿತ ನೂತನ ಸೂರ್ಯಮಂಡಲ ವಾಹನೋತ್ಸವ ಸಮರ್ಪಣೆಯ ಜತೆಗೆ ಜಾನಪದ ಕಲಾಮೇಳದ ಮೆರುಗಿನೊಂದಿಗೆ ರಥಸಪ್ತಮಿ ಮಹೋತ್ಸವ ಶುಕ್ರವಾರ ನೆರವೇರಿತು.

ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ 22ನೇ ವರ್ಷದ ಅಂತರರಾಜ್ಯಮಟ್ಟದ ಜಾನಪದ ಕಲಾಮೇಳದಲ್ಲಿ ರಾಜ್ಯದ ಪ್ರಮುಖ ಜಾನಪದ ಕಲಾಪ್ರಕಾರಗಳ ತಂಡಗಳು ಭಾಗವಹಿಸಿದ್ದವು. ಕೇಂದ್ರ ಸರ್ಕಾರದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಪ್ರಾಯೋಜನೆಯಲ್ಲಿ ವಿವಿಧ ರಾಜ್ಯಗಳ ಕಲಾತಂಡಗಳೂ ಪಾಲ್ಗೊಂಡಿದ್ದವು.

ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ದಂಪತಿ, ಪತ್ರಕರ್ತ ರವಿಹೆಗಡೆ ಕಲಾಮೇಳವನ್ನು ಉದ್ಘಾಟಿಸಿದರು.

ADVERTISEMENT

ಸಹಸ್ರಾರು ಭಕ್ತರು, ಸತ್ಯಸಾಯಿ ಆಶ್ರಮದ ಮಧುಸೂದನಸಾಯಿ, ಮೈಷುಗರ್ ಅಧ್ಯಕ್ಷ ಶಿವಲಿಂಗೇಗೌಡ, ಅಕ್ಕಸಮ್ಮೇಳನ ಅಧ್ಯಕ್ಷ ಕೀಲಾರ ಶಿವಮೂರ್ತಿ, ಅಘಲೀಯ ಶ್ರೀನಿವಾಸ ಅಯ್ಯಂಗಾರ್, ಶ್ರೀಧರ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ, ತಹಶೀಲ್ದಾರ್ ಪ್ರಮೋದ್ ಪಾಟೀಲ್, ಯತಿರಾಜದಾಸರ್ ಶ್ರೀನಿವಾಸನರಸಿಂಹನ್ ಗುರೂಜಿ, ಡಾ.ಶೆಲ್ವಪ್ಪಿಳ್ಳೆ ಅಯ್ಯಂಗಾರ್ ಭಾಗವಹಿಸಿದ್ದರು.

ನೂತನ ಸೂರ್ಯಮಂಡಲ: ಯತಿರಾಜದಾಸರ್ ಗುರುಪೀಠದ ಆಹ್ವಾನದ ಮೇರೆಗೆ ಚಿಕ್ಕಬಳ್ಳಾಪುರ ಮುದ್ದೇನಹಳ್ಳಿಯ ಸತ್ಯಸಾಯಿ ಆಶ್ರಮದ ವತಿಯಿಂದ ಸುಮಾರು ₹ 18 ಲಕ್ಷ ವೆಚ್ಚದಲ್ಲಿ ಸ್ವಾಮಿಗೆ ನೀಡಿರುವ ಸ್ವರ್ಣಲೇಪಿತ ನೂತನ ಸೂರ್ಯಮಂಡಲ ವಾಹನವನ್ನು ಮುದ್ದೇನಹಳ್ಳಿ ಸತ್ಯಸಾಯಿ ಆಶ್ರಮದ ಸದ್ಗುರು ಮದುಸೂಧಸಾಯಿ ಅವರು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸ್ವಾಮಿಗೆ ಸಮರ್ಪಿಸಿದರು.

ಬೆಳಿಗ್ಗೆ 6.30ಕ್ಕೆ ಆರಂಭವಾದ ಸೂರ್ಯಮಂಡಲ ವಾಹನೋತ್ಸವ ಬೀದಿಗಳಲ್ಲಿ ಸಾಗಿತು.

ಕೇರಳದ ಚೆಂಡೆಮೇಳ, ಪಂಚವಾದ್ಯ ಪಡೆಯಾನಿ, ಕಥಕ್ಕಳಿ, ತಮಿಳುನಾಡಿನ ಕರಗಾಟ್ಟಂ, ಮಯಿಲಾಟ್ಟಂ, ಮಾರೇಹಳ್ಳಿಯ ಚಿಲಿಪಿಲಿಗೊಂಬೆ, ಕೊತ್ತತ್ತಿಯ ಮರಗಾಲುಕುಣಿತ, ಹುಲಿವೇಷ, ಅರಸೀಕೆರೆಯ ಕೀಲುಕುದುರೆ, ಕರಗದನೃತ್ಯ, ಗುತ್ತನಕೆರೆಯ ಚೆಲುವರಾಯ, ದೂತರಾಯ, ಮೈಸೂರು ನಗಾರಿ, ಹುಬ್ಬಳಿಯ ಸಾಂಬಾಳ್ ವಾದ್ಯ, ಲಕ್ಷ್ಮೀಸಾಗರದ ನಾಸಿಕ್‌ಡೋಲು, ಹಾಸನದ ಕರಡಿಮಜಲು, ಮಂಡ್ಯ ಜಿಲ್ಲೆಯ ವಿವಿಧ ಭಾಗಗಳ, ಪಟಕುಣಿತ, ಗಾರುಡಿಗೊಂಬೆ, ಹುಲಿವೇಷ, ವೀರಗಾಸೆ, ಕೋಲಾಟ, ಡೊಳ್ಳುಕುಣಿತ, ಸೋಮನಕುಣಿತ, ಚಕ್ರಾದಿಬಳೆ, ಖಡ್ಗಪವಾಡ, ಕದೀಲು ನೃತ್ಯ, ಜಗ್ಗಲಿಗೆ ಮೇಳ, ಶಾಲಾಮಕ್ಕಳ 101 ಕಳಶ, ವೀರಮಕ್ಕಳಕುಣಿತ, ಕಂಸಾಳೆ, ನಾದಸ್ವರ, ಜಡೆಕೋಲಾಟ, ದಾಸಯ್ಯರದರ್ಶನ, ಯಕ್ಷಗಾನಗೊಂಬೆಗಳು, ತಮಿಳುನಾಡಿನ ಹುಲಿವೇಷ, ಶಾಲಾಮಕ್ಕಳ ಬ್ಯಾಂಡ್, ಕರಡಿಕುಣಿತ ತಂಡಗಳು ಭಾಗವಹಿಸಿದ್ದವು.

ಮೇಲುಕೋಟೆಯ ವಿವಿಧ ಶಾಲೆಯ ಮಕ್ಕಳೂ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.