ಕೆ.ಆರ್. ಪೇಟೆ (ಮಂಡ್ಯ ಜಿಲ್ಲೆ) : ‘ಮಗನಿಗೆ ಹೆಣ್ಣು ನೋಡಿದ್ದೆವು, ಇನ್ನೇನು ಮದುವೆ ನಿಶ್ಚಯವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ನಮ್ಮನ್ನೆಲ್ಲಾ ಸಲಹಬೇಕಿದ್ದ ಮಗ ನಮ್ಮನ್ನು ಬಿಟ್ಟು ಹೋಗಿರುವುದನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಸೂಕ್ತ ಮುಂಜಾಗರೂಕತೆ ವಹಿಸಿದ್ದರೆ ಅವನು ಬೀದಿ ಹೆಣವಾಗುತ್ತಿರಲಿಲ್ಲ..’
ಬೆಂಗಳೂರಿನಲ್ಲಿ ಬುಧವಾರ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಮಗ ಪೂರ್ಣಚಂದ್ರನ (25) ಅಂತ್ಯಕ್ರಿಯೆಯು ಗುರುವಾರ ತಾಲ್ಲೂಕಿನ ರಾಯಸಮುದ್ರದಲ್ಲಿ ನಡೆದ ವೇಳೆ, ಪೋಷಕರಾದ ಗ್ರಾಮದ ಶಿಕ್ಷಕ ಆರ್.ಬಿ. ಚಂದ್ರು ಮತ್ತು ಕಾಂತಾಮಣಿ ದಂಪತಿ ಹೀಗೆ ಹೇಳುತ್ತಾ ಕಣ್ಣೀರು ಸುರಿಸಿದರು.
ಮಂಗಳವಾರ ರಾತ್ರಿ ಆರ್‌ಸಿಬಿ ಗೆಲುವಿನ ಸಂಭ್ರಮವನ್ನು ಊರಿನ ಯುವಕರೊಂದಿಗೆ ಆಚರಿಸಿದ್ದ ಪೂರ್ಣಚಂದ್ರ, ಬುಧವಾರ ಬೆಳಿಗ್ಗೆ ಪೋಷಕರೊಂದಿಗೆ ವಧು ನೋಡಲು ಪಾಂಡವಪುರಕ್ಕೆ ತೆರಳಿದ್ದರು. ನಂತರ ಪೋಷಕರು ರಾಯಸಮುದ್ರಕ್ಕೆ ಹಿಂತಿರುಗಿದರೆ, ಅವರು ಕೆಲಸಕ್ಕೆಂದು ಮೈಸೂರಿಗೆ ಹೋದರು. ಅಲ್ಲಿಂದ ಸ್ನೇಹಿತರೊಂದಿಗೆ ಬೆಂಗಳೂರಿಗೆ ತೆರಳಿದ್ದರು.
ಇಡೀ ಗ್ರಾಮದಲ್ಲಿ ದುಃಖ ಮಡುಗಟ್ಟಿತ್ತು. ‘ಸಂಭ್ರಮಾಚರಣೆ ನೋಡಲು ಹೋದವನು ಶವವಾಗಿ ಬರುತ್ತಾನೆಂದು ಯಾರೂ ಅಂದುಕೊಂಡಿರಲಿಲ್ಲ’ ಎಂದು ಸಂಬಂಧಿಕರು ರೋದಿಸಿದರು. ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿಯೂ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಶಾಸಕ ಎಚ್.ಟಿ. ಮಂಜು, ತಾಲ್ಲೂಕು ಆಡಳಿತ ಸೇರಿದಂತೆ ಹಲವು ಗಣ್ಯರು ಕುಟುಂಬದವರಿಗೆ ಸಾಂತ್ವನ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.