ADVERTISEMENT

ಧಾರ್ಮಿಕ ಸೇವೆಗಳಿಂದ ಮಠಕ್ಕೆ ಘನತೆ:ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 5:01 IST
Last Updated 14 ಆಗಸ್ಟ್ 2025, 5:01 IST
ಪಾಂಡವಪುರ ತಾಲ್ಲೂಕು ಬೇಬಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಸ್.ದಯಾಶಂಕರ್ ಅವರಿಗೆ ‘ಶ್ರೀ ಮರಿದೇವರು ಶಿವಯೋಗಿ ಜೀವನದಿ’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತ್ರಿನೇತ್ರ ಸ್ವಾಮೀಜಿ, ವಿನಯ್ ಗುರೂಜಿ, ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯಸ್ವಾಮೀಜಿ, ಡಾ.ಎನ್.ಎಸ್.ಇಂದ್ರೇಶ್ ಪಾಲ್ಗೊಂಡರು
ಪಾಂಡವಪುರ ತಾಲ್ಲೂಕು ಬೇಬಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಸ್.ದಯಾಶಂಕರ್ ಅವರಿಗೆ ‘ಶ್ರೀ ಮರಿದೇವರು ಶಿವಯೋಗಿ ಜೀವನದಿ’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತ್ರಿನೇತ್ರ ಸ್ವಾಮೀಜಿ, ವಿನಯ್ ಗುರೂಜಿ, ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯಸ್ವಾಮೀಜಿ, ಡಾ.ಎನ್.ಎಸ್.ಇಂದ್ರೇಶ್ ಪಾಲ್ಗೊಂಡರು   

ಪಾಂಡವಪುರ: ಮಠಗಳು ತಾವು ನಡೆಸುವ ಧಾರ್ಮಿಕ ಸೇವಾ ಕಾರ್ಯಗಳಿಂದಾಗಿ ಘನತೆ ಮತ್ತು ಗೌರವವನ್ನು ಹೆಚ್ಚಿಸಿಕೊಂಡಿವೆ ಎಂದು ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು.

ತಾಲ್ಲೂಕಿನ ಬೇಬಿ ‌ಗ್ರಾಮದ ದುರ್ದಂಡೇಶ್ವರ ಮಠದ ವತಿಯಿಂದ ಬುಧವಾರ ನಡೆದ ಶತಾಯುಷಿ ಲಿಂಗೈಕ್ಯ  ಮರಿದೇವರು ಶಿವಯೋಗಿ ಸ್ವಾಮೀಜಿಗಳ 17ನೇ ಪುಣ್ಯಸ್ಮರಣೆ ಹಾಗೂ 9ನೇ ಮಹಾರಥೋತ್ಸವ ಸಮಾರಂಭವನ್ನು ಉದ್ಫಾಟಿಸಿ ಅವರು ಮಾತನಾಡಿದರು.

‘ದುರ್ದಂಡೇಶ್ವರ ಮಠದ ಪೀಠಾಧ್ಯಕ್ಷ ತ್ರಿನೇತ್ರ ಸ್ವಾಮೀಜಿ ಅವರು ಮಠವನ್ನು ಸನ್ಮಾರ್ಗದಲ್ಲಿ ಮುನ್ನೆಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮಠದಿಂದ ಶಾಲೆ ತೆರೆದು ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಹಿರಿಯ ಶ್ರೀಗಳ ಬಗ್ಗೆ ಅಪಾರವಾದ ಗುರುಭಕ್ತಿ ಗೌರವವನ್ನು ಹೊಂದಿದ್ದಾರೆ ಎನ್ನುವುದಕ್ಕೆ ಪ್ರತಿ ವರ್ಷ ನಡೆಸುವ ಪುಣ್ಯಸ್ಮರಣೆ ಹಾಗೂ ರಥೋತ್ಸವವೇ ಸಾಕ್ಷಿಯಾಗಿದೆ’ ಎಂದು ಹೇಳಿದರು.

ADVERTISEMENT

ಬೆಂಗಳೂರಿನ ವಿನಯ್ ಗುರೂಜಿ ಮಾತನಾಡಿ, ‘ಮಠಗಳು ವಿದ್ಯೆ, ಆಶ್ರಯ, ದಾಸೋಹ ನೀಡುತ್ತಾ ಬರುತ್ತಿವೆ. ಪ್ರಶಸ್ತಿ ಪುರಸ್ಕಾರಗಳು ವ್ಯಕ್ತಿಗೆ ಗೌರವ ತಂದುಕೊಡುತ್ತವೆ. ಇಂದು ಮಠದಿಂದ ನಿವೃತ್ತ ಐಎಎಸ್‌ ಅಧಿಕಾರಿಗೆ ನೀಡುತ್ತಿರುವ ಗೌರವ ಪ್ರಶಸ್ತಿಯು ತುಂಬಾ ಮೌಲ್ಯದ್ದಾಗಿದೆ’ ಎಂದರು.

‘ಶ್ರೀ ಮರಿದೇವರು ಶಿವಯೋಗಿ ಜೀವನದಿ’ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ನಿವೃತ್ತ ಐಎಎಸ್ ಅಧಿಕಾರಿ ಎಸ್.ದಯಾಶಂಕರ್ ಮಾತನಾಡಿ, ‘ಸಮಾಜದ ಶ್ರೇಯೋಭಿವೃದ್ದಿಗಾಗಿ ತ್ರಿನೇತ್ರ ಸ್ವಾಮೀಜಿ ಅವರು ಪ್ರತಿ ವರ್ಷವು ನವರಾತ್ರಿಯ ದಿವಸ ಮೌನಾಚರಣೆ ನಡೆಸುತ್ತಾರೆ. ಅಲ್ಲದೆ ಹೆಣ್ಣುಮಕ್ಕಳಿಗೆ ಮಡಿಲು ಅಕ್ಕಿ ವಿತರಣೆ ಮಾಡುತ್ತಾರೆ, ಇದಕ್ಕಾಗಿ ಈ ಮಠವನ್ನು ಹೆಣ್ಣುಮಕ್ಕಳ ತವರು ಮಠವೆಂದು ಕರೆಯುತ್ತಾರೆ’ ಎಂದು ಹೇಳಿದರು.

ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಶಿವಗಂಗಾದ ಕ್ಷೇತ್ರದ ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯಸ್ವಾಮೀಜಿ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎನ್.ಎಸ್.ಇಂದ್ರೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಧನಂಜಯ, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಮಠದ ಕಾರ್ಯದರ್ಶಿ ಟಿ.ಪಿ. ಶಿವಕುಮಾರ್, ವೀರಶೈವ ಲಿಂಗಾಯತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಆನಂದ್, ತಾಲ್ಲೂಕು ಅಧ್ಯಕ್ಷ ಎಂ.ಶಿವಕುಮಾರ್, ಗ್ರಾ.ಪಂ.ಅಧ್ಯಕ್ಷ ಪುಟ್ಟಲಿಂಗಮ್ಮ, ಮುಖಂಡ ಅಮೃತಿ ರಾಜಶೇಖರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.