ADVERTISEMENT

ಮಂಡ್ಯ: ಮತ್ತೆ ಅಧಿಕಾರ ಕಳೆದುಕೊಂಡ ಸದಸ್ಯರು

ನಗರಸಭೆ ಸೇರಿ 6 ಪುರಸಭೆ, 1 ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ರದ್ದು, ಜನಪ್ರತಿನಿಧಿಗಳಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 12:25 IST
Last Updated 20 ನವೆಂಬರ್ 2020, 12:25 IST
ಮಂಡ್ಯ ನಗರಸಭೆ ಕಟ್ಟಡ (ಸಂಗ್ರಹ ಚಿತ್ರ)
ಮಂಡ್ಯ ನಗರಸಭೆ ಕಟ್ಟಡ (ಸಂಗ್ರಹ ಚಿತ್ರ)   

ಮಂಡ್ಯ: ಈಚೆಗೆ ಸರ್ಕಾರ ನಿಗದಿ ಮಾಡಿದ್ದ ಅಧ್ಯಕ್ಷ– ಉಪಾಧ್ಯಕ್ಷರ ಮೀಸಲಾತಿ ಅಧಿಸೂಚನೆಯನ್ನು ಹೈಕೋರ್ಟ್‌ ರದ್ದು ಮಾಡಿರುವ ಹಿನ್ನೆಲೆಯಲ್ಲಿ ನಗರಸಭೆ ಸೇರಿ ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಅಧಿಕಾರ ಕಳೆದುಕೊಂಡಿದ್ದಾರೆ.

ಮೀಸಲಾತಿ ಗೊಂದಲದಿಂದಾಗಿ ಚುನಾವಣೆಯಲ್ಲಿ ಆಯ್ಕೆಯಾಗಿ 2 ವರ್ಷ ಕಳೆದರೂ ಸದಸ್ಯರಿಗೆ ಅಧಿಕಾರ ಭಾಗ್ಯ ದೊರೆತಿರಲಿಲ್ಲ. ಅ.8ರಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ಮೀಸಲಾತಿಯಿಂದಾಗಿ ಅಧ್ಯಕ್ಷ–ಉಪಾಧ್ಯಕ್ಷರು ಆಯ್ಕೆಯಾಗಿ ಸದಸ್ಯರಿಗೂ ಅಧಿಕಾರ ಭಾಗ್ಯ ಲಭಿಸಿತ್ತು. 2 ವರ್ಷಗಳಿಂದ ಅಧಿಕಾರವಿಲ್ಲದೇ ಕಂಗಾಲಾಗಿದ್ದ ಸದಸ್ಯರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ಹೈಕೋರ್ಟ್‌ ಆ ಮೀಸಲಾತಿ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಮತ್ತೆ ಎಲ್ಲರೂ ಅಧಿಕಾರ ಕಳೆದುಕೊಂಡಂತಾಗಿದೆ.

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ– ಉಪಾಧ್ಯಕ್ಷರು ಅಧಿಕಾರ ಸ್ವೀಕಾರ ಮಾಡಿದ ದಿನದಿಂದ ಸದಸ್ಯರ ಅವಧಿ 5 ವರ್ಷಗಳವರೆಗೆ ನಿಗದಿಯಾಗುತ್ತದೆ. ನ.2ರಂದು ನಗರಸಭೆ ಅಧ್ಯಕ್ಷ– ಉಪಾಧ್ಯಕ್ಷರು ಅಧಿಕಾರ ವಹಿಸಿಕೊಂಡಿದ್ದರು. ಅಧ್ಯಕ್ಷ ಹುದ್ದೆ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಹುದ್ದೆ ಹಿಂದುಳಿದ ವರ್ಗಕ್ಕೆ ನಿಗದಿಯಾಗಿತ್ತು. ಅದರಂತೆ ಎಚ್‌.ಎಸ್‌.ಮಂಜು ಅಧ್ಯಕ್ಷರಾಗಿ, ಇಸ್ರತ್‌ ಫಾತಿಮಾ ಉಪಾಧ್ಯಕ್ಷೆಯಾಗಿದ್ದರು. ಅಂದಿನಿಂದ ಎಲ್ಲಾ ಸದಸ್ಯರ ಅಧಿಕಾರಾವಧಿ ಆರಂಭಗೊಂಡಿತ್ತು.

ADVERTISEMENT

ಆದರೆ ಈಗ ಮೀಸಲಾತಿ ರದ್ದಾಗಿರುವ ಹಿನ್ನೆಲೆಯಲ್ಲಿ ಸದಸ್ಯರಿಗೆ ಅಧಿಕಾರ ಭಾಗ್ಯ ಇಲ್ಲವಾಗಿದೆ. ಮತ್ತೆ ಮೀಸಲಾತಿ ನಿಗದಿಯಾಗಿ, ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ನಡೆದು ಅಧಿಕಾರ ವಹಿಸಿಕೊಂಡ ದಿನದಿಂದ ಸದಸ್ಯರು ಅಧಿಕಾರ ಪಡೆಯಲಿದ್ದಾರೆ. ಮತ್ತೆ ಅಧಿಕಾರ ದೂರವಾಗಿರುವುದಕ್ಕೆ ಸದಸ್ಯರು ನಿರಾಸೆ ವ್ಯಕ್ತಪಡಿಸಿದ್ದಾರೆ.

‘ಕಳೆದೆರಡು ವರ್ಷಗಳಿಂದ ಮಂಡ್ಯ ನಗರದ ಅಭಿವೃದ್ಧಿ ಕುಂಠಿತಗೊಂಡಿದೆ. ಈಗಷ್ಟೇ ಅಧಿಕಾರ ಪಡೆದಿದ್ದ ಸದಸ್ಯರಿಗೆ ಮತ್ತೆ ನಿರಾಸೆಯುಂಟಾಗಿದೆ. ನ್ಯಾಯಾಲಯ ಆದಷ್ಟು ಬೇಗ ಮೀಸಲಾತಿ ಗೊಂದಲ ಪರಿಹರಿಸಬೇಕು. ಸರ್ಕಾರ ಈ ವಿಷಯದಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಬೇಕು’ ಎಂದು 1ನೇ ವಾರ್ಡ್‌ ನಗರಸಸಭೆ ಸದಸ್ಯ ನಾಗೇಶ್‌ ಒತ್ತಾಯಿಸಿದರು.

6 ಪುರಸಭೆ, 1 ಪ.ಪಂ: ಹೈಕೋರ್ಟ್‌ ಆದೇಶದಿಂದಾಗಿ ಮದ್ದೂರು, ಮಳವಳ್ಳಿ, ಕೆ.ಆರ್‌.ಪೇಟೆ, ನಾಗಮಂಗಲ, ಶ್ರೀರಂಗಪಟ್ಟಣ, ಪಾಂಡವಪುರ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಗಳು ರದ್ದಾಗಿವೆ. ಬಹುತೇಕ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷೀಯ ಚುನಾವಣೆ ಇತ್ತೀಚೆಗಷ್ಟೇ ನಡೆದಿತ್ತು. ಹಲವು ಪುರಸಭೆಗಳಲ್ಲಿ ಸಾಕಷ್ಟು ಗೊಂದಲಗಳ ನಡುವೆ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ನಗರಸಭೆ ಅಧಿಕಾರ ಹಿಡಿಯಲು ಜೆಡಿಎಸ್‌ ಸದಸ್ಯರು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. 10 ತಿಂಗಳ ಅಧಿಕಾರ ಸೂತ್ರದೊಂದಿಗೆ ಅಧ್ಯಕ್ಷ ಪಟ್ಟ ಕಟ್ಟಲಾಗಿತ್ತು. ಈಗ ಎಲ್ಲಾ ಪ್ರಯತ್ನಗಳಿಗೆ ಎಳ್ಳುನೀರು ಬಿಟ್ಟಂತಾಗಿದ್ದು ಮೀಸಲಾತಿ ಗೊಂದಲಕ್ಕೆ ಪರಿಹಾರ ಸಿಗುವವರೆಗೂ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಮತ್ತೆ ಅಧಿಕಾರಿಗಳ ಅಧಿಕಾರ ಮುಂದುವರಿಯಲಿದೆ.

‘ಸರ್ಕಾರದ ನಿರ್ದೇಶನದಂತೆ ಕ್ರಮ ವಹಿಸಲಾಗುವುದು. ನೂತನ ಆಡಳತ ಮಂಡಳಿ ರಚನೆಯಾಗುವವರೆಗೂ ಸ್ಥಳೀಯ ಸಂಸ್ಥೆಗಳ ಆಡಳಿತಗಳ ಉಸ್ತುವಾರಿ ನೋಡಿಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ಅಧಿಕಾರ ಕಳೆದ ಸ್ಥಳೀಯ ಸಂಸ್ಥೆಗಳು

* ಮಂಡ್ಯ ನಗರಸಭೆ
* ಮದ್ದೂರು ಪುರಸಭೆ
* ಮಳವಳ್ಳಿ ಪುರಸಭೆ
* ಶ್ರೀರಂಗಪಟ್ಟಣ ಪುರಸಭೆ
* ಪಾಂಡವಪುರ ಪುರಸಭೆ
* ನಾಗಮಂಗಲ ಪುರಸಭೆ
* ಕೆ.ಆರ್‌.ಪೇಟೆ ಪುರಸಭೆ
* ಬೆಳ್ಳೂರು ಪಟ್ಟಣ ಪಂಚಾಯಿತಿ

ಅಧ್ಯಕ್ಷರಿಂದಲೇ ಮೇಲ್ಮನವಿ

‘ಮೀಸಲಾತಿ ರದ್ದು ಮಾಡಿರುವ ಹೈಕೋರ್ಟ್‌ ಆದೇಶದ ವಿರುದ್ಧ ಸರ್ಕಾರ ಮೇಲ್ಮನವಿ ಸಲ್ಲಿಸುವ ನಿರೀಕ್ಷೆ ಇದೆ. 10 ದಿನದೊಳಗೆ ಸರ್ಕಾರ ಹೈಕೋರ್ಟ್‌ನ ಇನ್ನೊಂದು ಪೀಠಕ್ಕೆ ಮೇಲ್ಮನವಿ ಸಲ್ಲಿಕೆ ಮಾಡದಿದ್ದರೆ ರಾಜ್ಯದ ಎಲ್ಲಾ ನಗರಸಭೆ ಅಧ್ಯಕ್ಷರು ಸೇರಿ ಮೇಲ್ಮನವಿ ಸಲ್ಲಿಸಲಾಗುವುದು. ಹೊಸದಾಗಿ ಅಧಿಕಾರ ಪಡೆದಿರುವ ಸ್ಥಳೀಯ ಸಂಸ್ಥೆಗಳ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂಬ ವಿಶ್ವಾಸವಿದೆ’ ಎಂದು ನಗರಸಭೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಎಚ್‌.ಎಸ್‌.ಮಂಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.