ADVERTISEMENT

ರೌಡಿಶೀಟರ್‌ ಕೊಲೆ: ಐವರು ಆರೋಪಿಗಳ ಬಂಧನ

ಮಂಡ್ಯ ಜಿಲ್ಲೆಯಲ್ಲಿ ಮೂವರ ಮೇಲೆ ‘ರೌಡಿಶೀಟರ್‌’ ತೆರೆದಿದ್ದೇವೆ: ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 4:47 IST
Last Updated 18 ಡಿಸೆಂಬರ್ 2025, 4:47 IST
ಅಪರಾಧ ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ ತಂಡ 
ಅಪರಾಧ ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ ತಂಡ    

ಮಂಡ್ಯ: ಪಾಂಡವಪುರ ತಾಲ್ಲೂಕು ಮೇಲುಕೋಟೆ ಹೋಬಳಿಯ ಲಕ್ಷ್ಮೀಸಾಗರ ಗ್ರಾಮದ ರೌಡಿಶೀಟರ್‌ ಮಹೇಶ ಎಲ್‌.ಆರ್‌. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ವಿಶೇಷ ಪೊಲೀಸ್‌ ತಂಡ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು. 

ಮಾಣಿಕ್ಯನಹಳ್ಳಿಯ ಭೀಮ, ಆಲಕೆರೆಯ ಬಸವರಾಜು ಎಸ್‌., ಬೇವಿನಕುಪ್ಪೆ ಗ್ರಾಮದ ಶಶಾಂಕ್‌ ಬಿ.ಆರ್‌., ಹೇಮಂತ್‌ಕುಮಾರ್‌, ಮಲ್ಲಯ್ಯನದೊಡ್ಡಿಯ ಸುಮಂತ ಎಂ.ಆರ್‌. ಬಂಧಿತ ಆರೋಪಿಗಳು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಮಹೇಶ ಅವರು ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಹೋಗುವಾಗ ಅಮೃತಿ ಗ್ರಾಮದ ಬಳಿ ಕಾರದ ಪುಡಿ ಮತ್ತು ಮಾರಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಈ ಬಗ್ಗೆ ಮೃತನ ಅಣ್ಣ ಶಿವಣ್ಣ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಇನ್‌ಸ್ಪೆಕ್ಟರ್‌ ಶರತ್‌ಕುಮಾರ್‌ ಮತ್ತು ಅಶೋಕ್‌ಕುಮಾರ್‌ ನೇತೃತ್ವದ ತಂಡ ಬಂಧಿಸಿದೆ ಎಂದರು.

ADVERTISEMENT

ಹಳೇ ದ್ವೇಷದಿಂದ ಕೊಲೆ ಮಾಡಿರುವುದಾಗಿ ಆರೋಪಿಗಳು ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಮಹೇಶ ಮತ್ತು ಆರೋಪಿಗಳು ಈ ಮುಂಚೆ ಬಾರ್‌ನಲ್ಲಿ ಹೊಡೆದೊಡಿಕಾಂಡಿದ್ದರು. ರೌಡಿಶೀಟರ್‌ ಮಹೇಶನ ಮೇಲೆ ವಿವಿಧ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು. 2023ರಲ್ಲಿ ಬೀದರ್‌ಗೆ ಗಡೀಪಾರು ಮಾಡಲಾಗಿತ್ತು. ಅವಧಿ ಮುಗಿದ ನಂತರ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಹೀಗಾಗಿ ಮತ್ತೆ ಗಡೀಪಾರು ಮಾಡಲು ಪ್ರಕ್ರಿಯೆ ಕೈಗೊಂಡಿದ್ದೆವು. ಅಷ್ಟರೊಳಗೆ ಕೊಲೆಗೀಡಾಗಿದ್ದಾನೆ ಎಂದು ಎಸ್ಪಿ ತಿಳಿಸಿದರು. 

ರೌಡಿಗಳ ಮೇಲೆ ನಿಗಾ: 

ಮಂಡ್ಯ ಜಿಲ್ಲೆಯಲ್ಲಿ ಇಬ್ಬರು ರೌಡಿಗಳನ್ನು ಬಳ್ಳಾರಿ ಜೈಲಿಗೆ ಮತ್ತು ಮತ್ತೊಬ್ಬನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದೇವೆ. ಒಂದು ವರ್ಷ ಜಾಮೀನು ಸಿಗದಂತೆ ಕ್ರಮವಹಿಸಿದ್ದೇವೆ. ಇದರಿಂದ ರೌಡಿಸಂ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಎಚ್ಚೆತ್ತುಕೊಂಡಿದ್ದಾರೆ. ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಇನ್‌ಸ್ಪೆಕ್ಟರ್‌ ಮತ್ತು ಸಬ್‌ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಿದ್ದೇನೆ ಎಂದು ಎಸ್ಪಿ ಬಾಲದಂಡಿ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.  

ಬೆಸಗರಹಳ್ಳಿಯ ಮನೆಯೊಂದರಲ್ಲಿ ರಕ್ತ ಕಾಣಿಸಿಕೊಂಡ ಬಗ್ಗೆ ದೂರು ಬಂದಿತ್ತು. ತನಿಖೆ ನಡೆಸಿ, ರಕ್ತವನ್ನು ಎಫ್‌.ಎಸ್‌.ಎಲ್‌.ಗೆ ಕಳುಹಿಸಿದ್ದೆವು. ದೂರು ನೀಡಿದ್ದ ಸತೀಶನದ್ದೇ ರಕ್ತ ಎಂಬ ಬಗ್ಗೆ ವರದಿ ಬಂದಿದೆ. ಆತನಿಗೆ ಅನಾರೋಗ್ಯ ಸಮಸ್ಯೆಯಿದ್ದು, ಕಾಲಿನಲ್ಲಿ ಗಾಯವಾಗಿ ಮನೆ ತುಂಬ ರಕ್ತ ಸೋರಿತ್ತು. ಇದರಿಂದ ಆತಂಕಗೊಂಡು ದೂರು ನೀಡಿದ್ದರು ಎಂದು ಪ್ರಶ್ನೆಯೊಂದಕ್ಕೆ ಎಸ್ಪಿ ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿಗಳಾದ ಸಿ.ತಿಮ್ಮಯ್ಯ, ಗಂಗಾಧರಸ್ವಾಮಿ, ಶ್ರೀರಂಗಪಟ್ಟಣ ಡಿವೈಎಸ್ಪಿ ಶಾಂತಮಲ್ಲಪ್ಪ ಇದ್ದರು. 

‘ನೀರು ಕೇಳುವ ನೆಪದಲ್ಲಿ ಸರಗಳ್ಳತನ’

ಪಾಂಡವಪುರ ತಾಲ್ಲೂಕು ಕಡಬ ಗ್ರಾಮದ ಮನೆಯೊಂದರ ಸಮೀಪ ಸ್ಕೂಟರ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕುಡಿಯಲು ನೀರು ಕೇಳುವ ನೆಪದಲ್ಲಿ ಮಹಿಳೆಯಿಂದ 7 ಗ್ರಾಂ ತೂಕದ ಚಿನ್ನದ ಗುಂಡು 3 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಡಿ.7ರಂದು ಪರಾರಿಯಾಗಿದ್ದ.  ಎಚ್‌.ಡಿ.ಕೋಟೆ ತಾಲ್ಲೂಕು ಚಕ್ಕೂರು ಗ್ರಾಮದ ದರ್ಶನ್‌ ಎಂ. (19) ಎಂಬ ಸರಗಳ್ಳನನ್ನು ಪೊಲೀಸರು ಬಂಧಿಸಿ ₹5.60 ಲಕ್ಷದ ಬೆಲೆ ಬಾಳುವ 47 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.  ಆರೋಪಿಯ ವಿರುದ್ಧ ಪಾಂಡವಪುರ ಪೊಲೀಸ್‌ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿವೆ. ಈತ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಎಂದು ಹೇಳಿದರು. 

ಬಸ್‌ಗಳಲ್ಲಿ ಸರಗಳ್ಳತನ: ತಂಡ ರಚನೆ  ಬಸ್‌ ನಿಲ್ದಾಣ ಮತ್ತು ಬಸ್‌ಗಳಲ್ಲಿ ಪ್ರಯಾಣ ಮಾಡುವ ವೇಳೆ ಸರಗಳ್ಳತನವಾಗುತ್ತಿರುವ ಬಗ್ಗೆ 10 ಪ್ರಕರಣಗಳು ದಾಖಲಾಗಿದ್ದು ಒಂದು ಪ್ರಕರಣದಲ್ಲಿ ತಮಿಳುನಾಡು ಮೂಲಕ ಮಹಿಳೆಯರನ್ನು ಬಂಧಿಸಿದ್ದೇವೆ. ಉಳಿದ ಪ್ರಕರಣಗಳನ್ನು ಭೇದಿಸಲು ತಂಡ ರಚನೆ ಮಾಡಲಾಗಿದೆ ಎಂದು ಎಸ್ಪಿ ಬಾಲದಂಡಿ ತಿಳಿಸಿದರು.  ಬಸ್‌ ನಿಲ್ದಾಣ ಪ್ರಮುಖ ವೃತ್ತ ಮತ್ತು ಮುಖ್ಯರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕೊರತೆಯಿಂದ ಕಳ್ಳರನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿದೆ. ಕೆಲವು ಕಡೆ ಕ್ಯಾಮೆರಾಗಳು ಇದ್ದರೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇನ್ನೂ ಕೆಲವು ಕ್ಯಾಮೆರಾಗಳು ಉತ್ತಮ ರೆಸಲ್ಯೂಷನ್‌ ಹೊಂದಿಲ್ಲದ ಕಾರಣ ಅಸ್ಪಷ್ಟ ದೃಶ್ಯಗಳಿಂದ ಆರೋಪಿಗಳನ್ನು ಗುರುತಿಸುವುದು ಸಮಸ್ಯೆಯಾಗಿದೆ ಎಂದು ಹೇಳಿದರು.