ADVERTISEMENT

ಹುಟ್ಟೂರು ಸೋಮನಹಳ್ಳಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಎಸ್‌.ಎಂ.ಕೃಷ್ಣ ಅಂತ್ಯಕ್ರಿಯೆ

ಎಸ್‌.ಎಂ. ಕೃಷ್ಣ ಪಂಚಭೂತಗಳಲ್ಲಿ ಲೀನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 14:48 IST
Last Updated 11 ಡಿಸೆಂಬರ್ 2024, 14:48 IST
   

ಸೋಮನಹಳ್ಳಿ (ಮಂಡ್ಯ): ದಿನವೆಲ್ಲ ಬೆಳಗಿದ ಸೂರ್ಯ ಪಡುವಣ ದಿಕ್ಕಿನಲ್ಲಿ ಮುಳುಗುವ ಹೊತ್ತಿಗೆ, ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಬುಧವಾರ ಸಂಜೆ 5.33ಕ್ಕೆ ಗೋಧೂಳಿ ಸಮಯದಲ್ಲಿ ಪಂಚಭೂತಗಳಲ್ಲಿ ಲೀನರಾದರು.

ಮದ್ದೂರು ತಾಲ್ಲೂಕಿನ ಸ್ವಗ್ರಾಮ ಸೋಮನಹಳ್ಳಿಯ ಹೊರವಲಯದ ಕೃಷ್ಣ ಅವರ ಪ್ರೀತಿಯ ತಾಣವಾದ ‘ಕೆಫೆ ಕಾಫಿ ಡೇ’ ಆವರಣದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಸರ್ಕಾರಿ ಗೌರವದೊಂದಿಗೆ, ಒಕ್ಕಲಿಗ ಸಂಪ್ರದಾಯದ ಪ್ರಕಾರ ವಿಧಿವಿಧಾನ ನೆರವೇರಿಸಿ, ಪಾರ್ಥಿವ ಶರೀರಕ್ಕೆ ಅವರ ಮೊಮ್ಮಗ ಅಮರ್ತ್ಯ ಹೆಗ್ಡೆ ಅಗ್ನಿಸ್ಪರ್ಶ ಮಾಡಿದರು.

ಬೆಂಗಳೂರಿನ ಸದಾಶಿವನಗರ ಮನೆಯಿಂದ ಹೊರಟ ಎಸ್‌.ಎಂ.ಕೃಷ್ಣ ಅವರ ಪಾರ್ಥಿವ ಶರೀರದ ಮೆರವಣಿಗೆಯು ರಾಮನಗರ, ಚನ್ನಪಟ್ಟಣ ಮುಖಾಂತರ ಮಧ್ಯಾಹ್ನ 2 ಗಂಟೆಗೆ ಹುಟ್ಟೂರು ಸೋಮನಹಳ್ಳಿ ತಲುಪಿತು. ಮಧ್ಯಾಹ್ನ 3.15ರವರೆಗೆ ಗಣ್ಯರಿಗೆ ಮತ್ತು ಸಾರ್ವಜನಿಕರಿಗೆ ಅಂತಿಮ ದರ್ಶನ ಮಾಡಲು ಅವಕಾಶ ಕಲ್ಪಿಸಲಾಯಿತು.

ADVERTISEMENT

ಸೋಮನಹಳ್ಳಿ, ನಿಡಘಟ್ಟ, ಕೆಸ್ತೂರು ಸೇರಿದಂತೆ ಮಂಡ್ಯ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿದ್ದ ಸಾವಿರಾರು ಜನ ಸರದಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆದರು. ಊರಿನ ಮಗನನ್ನು ನೋಡಿದ ಮಂಡ್ಯ ಜಿಲ್ಲೆಯ ಜನರು ನಮಸ್ಕಾರ ಮಾಡುತ್ತಾ ಬಿಕ್ಕಿ ಬಿಕ್ಕಿ ಅತ್ತರು.

ಬುಧವಾರ ಮಧಾಹ್ಯ 3.35ಕ್ಕೆ ಪೊಲೀಸ್‌ ಬ್ಯಾಂಡ್‌ನವರು ರಾಷ್ಟ್ರಗೀತೆ ನುಡಿಸಿದರು. ಮಧ್ಯಾಹ್ನ 3.35ರಿಂದ 4.30ರವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಕುಟುಂಬಸ್ಥರು ಪುಷ್ಪಗುಚ್ಛ ಇರಿಸಿ ನಮನ ಸಲ್ಲಿಸಿದರು.

ಸಂಜೆ 4.32ಕ್ಕೆ ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ, ಗೌರವ ಸಲ್ಲಿಸಿದರು. ಸಂಜೆ 4.37ಕ್ಕೆ ಪೊಲೀಸ್‌ ಬ್ಯಾಂಡ್‌ ಸಿಬ್ಬಂದಿ ಗೌರವ ವಂದನೆ ಸಲ್ಲಿಸಿದರು. ಸಂಜೆ 4.40ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಎಸ್‌.ಎಂ.ಕೃಷ್ಣ ಅವರ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಕೃಷ್ಣ ಅವರ ಪತ್ನಿ ಪ್ರೇಮಾ ಅವರಿಗೆ ಹಸ್ತಾಂತರಿಸಿದರು.

ಸಂಜೆ 4.45ಕ್ಕೆ ಅಮರ್ತ್ಯ ಹೆಗ್ಡೆ ನೇತೃತ್ವದಲ್ಲಿ ಕುಟುಂಬಸ್ಥರು ಪಾರ್ಥಿವ ಶರೀರವನ್ನು ಶವಪೆಟ್ಟಿಗೆಯಿಂದ ಹೂಗಳಿಂದ ಅಲಂಕೃತಗೊಂಡ ಚಟ್ಟಕ್ಕೆ ಕೂರಿಸಿದರು. ತದನಂತರ ಅಂತ್ಯಸಂಸ್ಕಾರ ಸ್ಥಳಕ್ಕೆ ತಂದು ಶ್ರೀಗಂಧದಿಂದ ಸಜ್ಜುಗೊಂಡಿದ್ದ ಚಿತೆಯ ಮೇಲೆ ಮಲಗಿಸಿದರು.

ಇದಕ್ಕೂ ಮುನ್ನ ಶ್ರೀಗಂಧದ ತುಂಡುಗಳ ಮೇಲೆ ಬಾಳೆ ಎಲೆ ಹರಡಿ, ಚಿತೆಯ ಸುತ್ತ ವೈದಿಕರು ತುಪ್ಪ ಸುರಿದಿದ್ದರು. ತಮಟೆಯ ವಾದನ, ವೇದಘೋಷಗಳೊಂದಿಗೆ ಕುಟುಂಬಸ್ಥರು ಅಕ್ಕಿ ಹಾಕಿ, ಗಂಧದ ಚಕ್ಕೆಯನ್ನು ಇಟ್ಟರು. ಕೊನೆಯ ಬಾರಿಗೆ ಎಸ್‌.ಎಂ.ಕೃಷ್ಣ ಅವರಿಗೆ ಆರತಿ ಬೆಳಗಿ, ಮುಖವನ್ನು ನೋಡಿ ಕಣ್ತುಂಬಿಕೊಂಡ ಪತ್ನಿ ಪ್ರೇಮಾ ಮತ್ತು ಮಕ್ಕಳಾದ ಮಾಳವಿಕಾ, ಶಾಂಭವಿ ಭಾವುಕರಾದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರು ಗಂಧದ ಚಕ್ಕೆ ಇಟ್ಟು ಅಂತಿಮ ನಮನ ಸಲ್ಲಿಸಿದರು.

ಕೃಷ್ಣ ಅವರ ಮೊಮ್ಮಗ ಅಮರ್ತ್ಯ ಹೆಗ್ಡೆ ಭುಜದ ಮೇಲೆ ಮಡಕೆಯನ್ನು ಹೊತ್ತು, ಕೈಯಲ್ಲಿ ಅಗ್ನಿಕಟ್ಟಿಗೆಯನ್ನು ಹಿಡಿದು ಚಿತೆಯ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದರು. ನಂತರ ಮಡಕೆಯಲ್ಲಿದ್ದ ಬೂದಿಯನ್ನು ಚಿತೆಯ ಮೇಲೆ ಸುರಿದರು. ಸಂಜೆ 5.23ಕ್ಕೆ ಅಗ್ನಿಸ್ಪರ್ಶ ಮಾಡಿದರು.

ಬಿಕ್ಕಿ ಬಿಕ್ಕಿ ಅತ್ತ ಡಿ.ಕೆ. ಶಿವಕುಮಾರ್‌

ಎಸ್‌.ಎಂ.ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸುವ ವೇಳೆ ಉಪಮುಖ್ಯಮಂತ್ರಿ ಮತ್ತು ಸಂಬಂಧಿಯೂ ಆದ ಡಿ.ಕೆ. ಶಿವಕುಮಾರ್‌ ಬಿಕ್ಕಿ ಬಿಕ್ಕಿ ಅತ್ತರು.

ಚಟ್ಟಕ್ಕೆ ಹೆಗಲು ಕೊಟ್ಟು ನಡೆದ ಡಿ.ಕೆ. ಶಿವಕುಮಾರ್‌ ಅವರು ನಂತರ ಚಿತೆಯ ಮೇಲೆ ಶ್ರೀಗಂಧದ ತುಂಡುಗಳನ್ನು ಇಟ್ಟು ನಮಿಸಿ ಭಾವುಕರಾದರು.

ಅಗ್ನಿಸ್ಪರ್ಶ ಮಾಡಲು ಸಮಯ ಮೀರುತ್ತಿದ್ದ ಕಾರಣ, ಪ್ರಧಾನ ವೈದಿಕ ಭಾನುಪ್ರಕಾಶ್‌ ಹೊರತುಪಡಿಸಿ, ಚಿತೆ ಕಟ್ಟೆಯ ಮೇಲೆ ನಿಂತಿದ್ದ ಸಂಬಂಧಿಕರು ಮತ್ತು ಪುರೋಹಿತರು ಕೂಡಲೇ ಕೆಳಗಿಳಿಯುವಂತೆ ತಾಕೀತು ಮಾಡಿದರು. ಇನ್ನೂ ಕೆಲವು ಪುರೋಹಿತರು ಅಲ್ಲೇ ನಿಂತಿದ್ದರು. ಆಗ ’ಎಲ್ಲ ವಿಧಿವಿಧಾನ ನನಗೆ ಗೊತ್ತಿದೆ, ಕಟ್ಟೆಯಿಂದ ಕೆಳಗಿಳಿಯಿರಿ‘ ಎಂದು ಗರಂ ಆದರು.

ಡಿ.ಕೆ.ಶಿವಕುಮಾರ್‌ ತಾವೇ ಮೈಕ್‌ ಹಿಡಿದು, ಸೂಚನೆ ಕೊಡುತ್ತಾ ಆರಂಭದಿಂದ ಕೊನೆಯವರೆಗೆ ಜನರನ್ನು ನಿಯಂತ್ರಿಸಿದರು. ಕಾಲ ಕಾಲಕ್ಕೆ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆಯುವಂತೆ ನೋಡಿಕೊಂಡರು. ಜನರು ಗದ್ದಲ ಮಾಡಿದಾಗ ಗದರಿ ನಿಯಂತ್ರಿಸಿದರು.

ಒಂದು ಟನ್‌ ಶ್ರೀಗಂಧ ಬಳಕೆ

ಭಾನುಪ್ರಕಾಶ್‌ ಶರ್ಮಾ ನೇತೃತ್ವದಲ್ಲಿ 15 ವೈದಿಕರ ತಂಡ ಪಂಚಗವ್ಯ, ಪುಣ್ಯಾಹ, ಸಬಲ (ಸ್ಥಾನ), ಚತುರ್ವೇದ ಪಾರಾಯಣ ವಿಷ್ಣು ಸಹಸ್ರನಾಮ ಪರಾಯಣ ಇತರ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಎಸ್‌.ಎಂ.ಕೃಷ್ಣ ಅವರ ಅಂತ್ಯಕ್ರಿಯೆಗೆ ಒಂದು ಟನ್‌ ಶ್ರೀಗಂಧ ಬಳಸಲಾಯಿತು.

ಅಗ್ನಿಸ್ಪರ್ಶದ ಬಳಿಕ ತಿಲೋದಕ ಗೋದಾನ, ದಶ ದಾನ, ತಿಲಪಾತ್ರ ದಾನಾದಿಗಳನ್ನು ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.