ADVERTISEMENT

ಶ್ರೀರಂಗಪಟ್ಟಣ: ಕಾವೇರಿ ತೀರದ ಶ್ರದ್ಧಾ, ಭಕ್ತಿಯ ಕೇಂದ್ರ ಸಾಯಿಧಾಮ!

ಗಣಂಗೂರು ನಂಜೇಗೌಡ
Published 21 ಜುಲೈ 2024, 4:50 IST
Last Updated 21 ಜುಲೈ 2024, 4:50 IST
ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಬಳಿ, ಕಾವೇರಿ ನದಿ ತೀರದಲ್ಲಿರುವ ಸಾಯಿಧಾಮದಲ್ಲಿರುವ ಶಿರಡಿ ಸಾಯಿಬಾಬಾ ಮಂದಿರ ಮತ್ತು ಓಂಕಾರೇಶ್ವರ ದೇಗುಲ
ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಬಳಿ, ಕಾವೇರಿ ನದಿ ತೀರದಲ್ಲಿರುವ ಸಾಯಿಧಾಮದಲ್ಲಿರುವ ಶಿರಡಿ ಸಾಯಿಬಾಬಾ ಮಂದಿರ ಮತ್ತು ಓಂಕಾರೇಶ್ವರ ದೇಗುಲ   

ಶ್ರೀರಂಗಪಟ್ಟಣ: ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಬಳಿಯ ಕಾವೇರಿ ಸಾಯಿಧಾಮ ಪ್ರಸಿದ್ಧ ಶ್ರದ್ಧಾ, ಭಕ್ತಿಯ ಕೇಂದ್ರವಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ.

ಕಾವೇರಿ ನದಿ ತೀರದಲ್ಲಿರುವ ಈ ಮಂದಿರದಕ್ಕೆ ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಿದ್ದಾರೆ. ಗುರು ಪೂರ್ಣಿಮೆಯಂದು ಈ ತಾಣದಲ್ಲಿ ಜನರ ಭಕ್ತಿ ಪರಾಕಾಷ್ಠೆ ಮುಗಿಲು ಮುಟ್ಟುತ್ತದೆ. ಸಹಸ್ರಾರು ಮಂದಿ ಇಲ್ಲಿಗೆ ಬಂದು ಶಿರಡಿ ಸಾಯಿಬಾಬಾ ಮೂರ್ತಿಯ ಎದುರು ಧ್ಯಾನ ಮಾಡುತ್ತಾರೆ. ಭಜನೆ, ಕೀರ್ತನೆಗಳೂ ನಡೆಯುತ್ತವೆ. ನಿರಂತರವಾಗಿ ಉರಿಯುವ ‘ಧುನಿ’ (ಅಗ್ನಿ ಕುಂಡ)ಗೆ ನಮನ ಸಲ್ಲಿಸುತ್ತಾರೆ. ಪಕ್ಕದಲ್ಲೇ ಇರುವ ಐತಿಹಾಸಿಕ ಓಂಕಾರೇಶ್ವರ ಮತ್ತು ವನ ದೇವತೆಗೂ ಪೂಜೆ, ಪುನಸ್ಕಾರಗಳು ನಡೆಯುತ್ತದೆ.

ಹಿನ್ನೆಲೆ:

ADVERTISEMENT

ಶಿರಡಿ ಸಾಯಿಬಾಬಾ ಅವರ ಪರಮ ಭಕ್ತರು ಹಾಗೂ ನಿವೃತ್ತ ಕೆಎಟಿ ನ್ಯಾಯಾಧೀಶರೂ ಆದ ಜಯದೇವ್‌ 2006ರಲ್ಲಿ,  ₹1.25 ಕೋಟಿ ವೆಚ್ಚದಲ್ಲಿ ಸಾಯಿಬಾಬಾ ಮಂದಿರವನ್ನು ಇಲ್ಲಿ ನಿರ್ಮಿಸಿದ್ದಾರೆ. ಮಂದಿರದ ಒಳಗೆ ಶ್ವೇತ ವರ್ಣದ, ಅಮೃತ ಶಿಲೆಯಲ್ಲಿ ಕಡೆದಿರುವ ಆಕರ್ಷಕ ಸಾಯಿಬಾಬಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಮೂರ್ತಿಯನ್ನು ನೋಡುತ್ತಿದ್ದರೆ ಎಂಥಹವರಲ್ಲೂ ಭಕ್ತಿ, ಭಾವ ಮೂಡಿಸುತ್ತದೆ.

ಶಿರಡಿಯಿಂದ ಬಂದ ಅಗ್ನಿಯ ಕಿಡಿ:

ಈ ಮಂದಿರದ ಬಲ ಪಾರ್ಶ್ವದಲ್ಲಿ ಮಹಾರಾಷ್ಟ್ರದ ಶಿರಡಿಯಿಂದ ತಂದ ಬೆಂಕಿಯ ಕಿಡಿಯಿಂದ ಧುನಿಯನ್ನು ಸ್ಥಾಪಿಸಲಾಗಿದೆ. ಇದು ದಿನದ ಇಪ್ಪತ್ನಾಲ್ಕು ಗಂಟೆ ಉರಿಯುತ್ತಲೇ ಇರುತ್ತದೆ. ಮಂದಿರದ ಪ್ರವೇಶ ದ್ವಾರದ ಎಡ ಭಾಗದಲ್ಲಿ ಜೋಳಿಗೆ ಹಿಡಿದು ನಿಂತಿರುವ ಮತ್ತು ಬಲ ಭಾಗದ ಮರದ ಕೆಳಗೆ ಪವಡಿಸಿರುವ ಸಾಯಿಬಾಬಾ ಪ್ರತಿಮೆಗಳು ಗಮನ ಸೆಳೆಯಯತ್ತವೆ. ಮಲಗಿರುವ ಬಾಬಾನ ಮೂರ್ತಿಯನ್ನು ನೋಡಿದರೆ ತಕ್ಷಣಕ್ಕೆ ಜೀವಂತ ಬಾಬಾ ಮಲಗಿರುವಂತೆಯೇ ಭಾಸವಾಗುತ್ತದೆ.

ಓಂಕಾರೇಶ್ವರ:

ಸಾಯಿಬಾಬಾ ಮಂದಿರದ ಎಡ ಭಾಗದ ಓಂಕಾರೇಶ್ವರ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಕಾಶಿಯ ಗಂಗಾ ನದಿಯಲ್ಲಿ ದೊರೆತ ಶಿವಲಿಂಗವನ್ನು ತಂದು ಇಲ್ಲಿ ಸ್ಥಾಪಿಸಲಾಗಿದೆ. ತಾಯಮ್ಮ ಎಂಬ ಪರಮ ಶಿವಭಕ್ತೆಯ ಕೋರಿಕೆಯ ಮೇರೆಗೆ ಬ್ರಹ್ಮಾನಂದ ಸ್ವಾಮೀಜಿ ಎಂಬವರು ಈ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ. ತೀರಾ ಶಿಥಿಲವಾಗಿದ್ದ ಓಂಕಾರೇಶ್ವರ ದೇಗುಲವನ್ನು ಈಚಿನ ವರ್ಷಗಳಲ್ಲಿ ಜಯದೇವ್‌ ಜೀರ್ಣೋದ್ಧಾರ ಮಾಡಿದ್ದಾರೆ.

ಗಣ್ಯರ ಭೇಟಿ:

ಕಾವೇರಿ ಸಾಯಿಧಾಮಕ್ಕೆ ಉತ್ತರ ಪ್ರದೇಶದ ಮಥುರಾ ಮೂಲಕ ಪ್ರಸಿದ್ಧ ಸಂತ ಜೈ ಗುರುದೇವ್‌, ಉಡುಪಿಯ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ಸಚಿವರು, ಶಾಸಕರು ಇಲ್ಲಿ ಭೇಟಿ ನೀಡಿದ್ದಾರೆ. ಪ್ರತಿ ಹುಣ್ಣಿಮೆ ಮತ್ತು ಗುರುವಾರದಂದು ನಡೆಯುವ ವಿಶೇಷ ಪೂಜೆಗೆ ಸಹಸ್ರಾರು ಭಕ್ತರು ಸೇರುತ್ತಾರೆ.

ಆರೋಗ್ಯ ಶಿಬಿರ: ಗುರು ಪೂರ್ಣಿಮೆ ನಿಮಿತ್ತ ಜು.21ರಂದು ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಜಿಸಿ ಸ್ಪೋರ್ಟ್ಸ್‌ ಮೆಡಿಸಿನ್ ಸೆಂಟರ್‌ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ರಕ್ತದೊತ್ತಡ, ಮಧುಮೇಹ, ಮೂಳೆ ಮತ್ತು ಕೀಲು, ಪ್ರಸೂತಿ ಮತ್ತು ಸ್ತ್ರೀ ರೋಗ ಮತ್ತು ಕಣ್ಣಿನ ಪೊರೆ ತಪಾಸಣೆ ನಡೆಸಿ ಉಚಿತವಾಗಿ ಔಷಧಗಳನ್ನು ವಿತರಿಸಲಾಗುತ್ತದೆ.

ಗುರು ಪೂರ್ಣಿಮೆ ಇಂದು

ಕಾವೇರಿ ಸಾಯಿಧಾಮದಲ್ಲಿ ಜುಲೈ 21ರ ಭಾನುವಾರ ಗುರುಪೂರ್ಣಿಮೆ ನಿಮಿತ್ತ ಬೆಳಿಗ್ಗೆಯಿಂದ ಸಂಜೆ ವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಗುರು ವಂದನಾ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರನ್ನು ಗೌರವಿಸಲಾಗುತ್ತದೆ ಎಂದು ಸಾಯಿಧಾಮದ ಸಂಸ್ಥಾಪಕ ಜಯದೇವ್‌ ತಿಳಿಸಿದ್ದಾರೆ.

ಮಾರ್ಗ: ಕಾವೇರಿ ಸಾಯಿಧಾಮವು ಶ್ರೀರಂಗಪಟ್ಟಣದಿಂದ 5 ಕಿ.ಮೀ. ದೂರದ ದೊಡ್ಡೇಗೌಡನಕೊಪ್ಪಲು ಗ್ರಾಮದ ಹತ್ತಿರವಿದೆ. ಪಾಂಡವಪುರ ರೈಲ್ವೆ ನಿಲ್ದಾಣದಿಂದಲೂ ಇಲ್ಲಿಗೆ ಬರಬಹುದು. ಮಾಹಿತಿಗೆ ಮೊ:9449825051, 9148825051 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.