
ಕಿಕ್ಕೇರಿ: ಸೂರ್ಯದೇವನ ಪಥ ಸಂಚಲನದ ಮಕರ ರಾಶಿಯ ಪ್ರವೇಶದ ಪುಣ್ಯದಿನವಾದ ಸಂಕ್ರಾಂತಿ ಹಬ್ಬದ ಸಡಗರವನ್ನು ಹೋಬಳಿಯಾದ್ಯಂತ ಆಚರಣೆ ಮಾಡಿದರು.
ರೈತಾಪಿ ಜನತೆ ತಮ್ಮ ರಾಸುಗಳನ್ನು ಶುಚಿಗೊಳಿಸಿ ಎಣ್ಣೆ ಸವರಿ, ಹುಚ್ಚೆಳ್ಳು ಹೂವು, ಸೇವಂತಿಗೆ ಹೂವಿನ ಹಾರ ಹಾಕಿ, ತಿಲಕವಿಟ್ಟು ಪೂಜಿಸಿದರು. ಮನೆಮುಂದೆ ಮೊಸರು ಗಡಿಗೆ, ಕಬ್ಬಿನ ಜಲ್ಲೆಯ ಬಣ್ಣಬಣ್ಣದ ರಂಗೋಲಿ ಬಿಡಿಸಿ ಅತಿಥಿಗಳನ್ನು ಸ್ವಾಗತಿಸಿದರು. ಮಹಿಳೆಯರು, ಯುವತಿಯರು, ಪುಟಾಣಿ ಮಕ್ಕಳು ಹೊಸ ಬಟ್ಟೆ ಧರಿಸಿ ಮನೆ ಮನೆಗೆ ತೆರಳಿ ಎಳ್ಳು, ಬೆಲ್ಲ ಬೀರಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಹಲವರು ಮಕರ ಸಂಕ್ರಮಣದ ಶುಭದಿನದಂದು ಮಂದಗೆರೆ ಗ್ರಾಮಕ್ಕೆ ಸಾಗಿ ಹೇಮಾವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಮತ್ತೆ ಕೆಲವರು ಸಾಸಲು ಗ್ರಾಮದ ಸೋಮೇಶ್ವರ ಪುಷ್ಕರಿಣಿಯಲ್ಲಿ ಸ್ನಾನ ಮಾಡಿ ಸೋಮೇಶ್ವರ, ಶಂಭುಲಿಂಗೇಶ್ವರ ದೇವರ ದರ್ಶನ ಪಡೆದರು. ಭಕ್ತರು ಮುಂಜಾನೆ ಶಿವ ದೇಗುಲಕ್ಕೆ ತೆರಳಿ ಶಿವನ ಪೂಜಿಸಿ ಸ್ತುತಿಸಿದರು.
ಕಿಕ್ಕೇರಿಯ ಬ್ರಹ್ಮೇಶ್ವರ, ಗದ್ದೆಹೊಸೂರುವಿನ ಜೋಡಿ ಬಸವೇಶ್ವರ, ಚಿಕ್ಕಮಂದಗೆರೆಯ ಅಂಕನಾಥೇಶ್ವರ, ಗೋವಿಂದನಹಳ್ಳಿಯ ಪಂಚಲಿಂಗೇಶ್ವರ, ಅಂಕನಹಳ್ಳಿಯ ಮಲ್ಲೇಶ್ವರ, ಊಗಿನಹಳ್ಳಿಯ ಈಶ್ವರ ದೇಗುಲ, ಮಾದಾಪುರದ ತ್ರಯಂಭಕೇಶ್ವರ, ಹಳೆಮಾದಾಪುರದ ರಾಮೇಶ್ವರ ದೇಗುಲ ಮತ್ತಿತರ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು.
ಗ್ರಾಮದ ಅರುಂಧತಿ ಸಮಾಜದ ಪೌರಕಾರ್ಮಿಕರು ವಿಶೇಷವಾಗಿ ಹೊಸ ಮಡಿಕೆಯಲ್ಲಿ ಪೊಂಗಲ್ ತಯಾರಿಸಿ ದೇವಿಗೆ ನೈವೇದ್ಯ ಅರ್ಪಿಸಿ ಪಿರಿಯಪಟ್ಟಣದಮ್ಮ ದೇವಿಯನ್ನು ಪೂಜಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.