
ಭಾರತೀನಗರ: ಇಲ್ಲಿನ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ಭತ್ತ, ರಾಗಿ, ಸೇರಿದಂತೆ ನವ ಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸಿ ಸಂಕ್ರಾಂತಿ ಸಂಭ್ರಮ ಆಚರಿಸಲಾಯಿತು.
ಶಾಲಾವರಣದಲ್ಲಿ ಗುಡಿಸಲು ನಿರ್ಮಿಸಿ ಅದರ ಮುಂದೆ ವಿದ್ಯಾರ್ಥಿಗಳು ಮನೆಗಳಿಂದ ತಂದಿದ್ದ ನವ ಧಾನ್ಯಗಳನ್ನು ರಾಶಿ ಹಾಕಿ, ಹಿರಿಯರು ಸಮಯ ಕಳೆಯಲು ಆಟವಾಡಲು ಬಳಸುತ್ತಿದ್ದ ಹಳ್ಳು ಮನೆ ಗುಳಿ, ಕಬ್ಬಿನ ಜಲ್ಲೆಗಳು, ಮಡಿಕೆ, ಕುಡಿಕೆಗಳು, ಗೆಡ್ಡೆ-ಗೆಣಸುಗಳನ್ನು ಇಟ್ಟು, ಎತ್ತುಗಳ ಪೂಜೆಗೆ ಅಣಿಗೊಳಿಸಿದ್ದರು. ಶಾಲೆಯ ಸಂಸ್ಥಾಪಕ ಅಧ್ಯಕ್ಷ ಎ.ಟಿ.ಬಲ್ಲೇಗೌಡ, ಕಾರ್ಯದರ್ಶಿ ನಾಗರತ್ನ ಅವರು ಶಿಕ್ಷಕರೊಡನೆ ನವಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸಿದರು.
ಎ.ಟಿ.ಬಲ್ಲೇಗೌಡ ಮಾತನಾಡಿ, ‘ಸಂಕ್ರಾಂತಿ ಹಬ್ಬವನ್ನು ಶತಮಾನಗಳಿಗಿಂತ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಚಳಿಗಾಲದಲ್ಲಿ ರಾಸುಗಳಿಗೆ ಬೆಚ್ಚನೆಯ ವಾತಾವರಣ ಸೃಷ್ಟಿಸಲು ಕಿಚ್ಚು ಹಾಯಿಸುವುದು ವಾಡಿಕೆ. ಸುಗ್ಗಿ ಕಾಲ ಮುಗಿದು ಬೆಳೆಗಳು ರೈತರ ಕೈ ಸೇರಿದ ಖಷಿಯಲ್ಲಿ ಎಲ್ಲರೂ ಸಾಮೂಹಿಕವಾಗಿ ತಮ್ಮ ತಮ್ಮ ಹೊಲ, ಗದ್ದೆಗಳಲ್ಲಿ ನವ ಧಾನ್ಯಗಳನ್ನು ರಾಶಿ ಹಾಕಿ ಪೂಜೆ ಮಾಡುತ್ತಿದ್ದು, ಇದನ್ನು ಯುವ ಪೀಳಿಗೆಗೆ ಪರಿಚಯಿಸಿ ಮುಂದುವರೆಸಿಕೊಂಡು ಹೋಗುವಂತೆ ಪ್ರೇರೇಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.
ಕಾರ್ಯದರ್ಶಿ ನಾಗರತ್ನ ಮಾತನಾಡಿ, ‘ಸಂಕ್ರಾಂತಿ ಎಂದರೆ ಹೆಣ್ಣು ಮಕ್ಕಳಿಗೆ ವಿಶೇಷವಾದ ಹಬ್ಬ. ಈ ಹಬ್ಬದಲ್ಲಿ ಎಳ್ಳು, ಬೆಲ್ಲ, ಕಡಲೆಕಾಯಿ ಬೀಜ, ಹುರಿಗಡಲೆ ಎಲ್ಲವೂ ಮಿಶ್ರಣ ಮಾಡಿದ ಸಿಹಿಯನ್ನು ಹಂಚಿ ಬಂಧುಗಳಿಂದ ಹರಸಿಕೊಳ್ಳುವುದು ವಾಡಿಕೆ. ಅದಕ್ಕೂ ಮುಂಚೆ ಹಿರಿಯರು ತ್ವಚೆಯ ಆರೋಗ್ಯದ ದೃಷ್ಟಿಯಿಂದ ಮನೆಯಲ್ಲಿ ಎಳ್ಳು-ಬೆಲ್ಲ ಸವಿಯುತ್ತಿದ್ದರು’ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ನವೀನ್‌ಕುಮಾರ್, ಶಿಕ್ಷಕರಾದ ಸುದರ್ಶನ್‌ಗೌಡ, ಸಂತೋಷ್‌ಕುಮಾರ್, ಗೌರಮ್ಮ, ನಟರಾಜು, ವಿಶ್ವ, ಕರುಣಾಮೂರ್ತಿ, ತಾರಾ, ಗೌತಮಿ, ಪೋಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.