
ನಾಗಮಂಗಲ: ‘ಮುಂಬರುವ ಪೀಳಿಗೆಗೆ ವಿಜ್ಞಾನ ಸಹಜವಾಗುತ್ತದೆ. ತಂತ್ರಜ್ಞಾನ ಆಧುನಿಕ ಬೆಳಕಾಗುತ್ತದೆ. ಜ್ಞಾನ ಅಂತರಂಗದ ಬಾಹ್ಯದ ಬೆಳಕಾಗುತ್ತದೆ. ಎರಡು ಬೆಳಕು ಏಕಕಾಲಕ್ಕೆ ಮೇಳೈಸಿದಾಗ ಬದುಕು ಸುಂದರವಾಗುತ್ತದೆ’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸ್ವಾಮೀಜಿಯವರ 13ನೇ ವರ್ಷದ ಪಟ್ಟಾಭಿಷೇಕದ ಅಂಗವಾಗಿ ಗುರುವಾರ ತಾಲ್ಲೂಕಿನಲ್ಲಿರುವ ಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ಆಯೋಜಿಸಿದ್ದ ವಿಜ್ಞಾತಂ - 2026ರ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
‘ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನ ಒಂದೇ ಶಕ್ತಿಯ ವಿವಿಧ ಮುಖಗಳ ಆವಿರ್ಭಾವಗಳು. ಕೋತಿ ಜನ್ಮದಿಂದ ವಿಕಾಸವಾಗಿ ಮನುಷ್ಯ ಜನ್ಮಕ್ಕೆ ಬಂದಿದ್ದೇವೆ. ಇನ್ನೂ ಮುಂದುವರೆದು ವಿಕಾಸವಾಗುತ್ತಾ ಸಾಗುವುದೇ ಜ್ಞಾನ ವಿಜ್ಞಾನ ತಂತ್ರಜ್ಞಾನದ ಉದ್ದೇಶ. ಬೇರು ಮರೆತ ಕಾಂಡಕ್ಕೆ ಅಸ್ತಿತ್ವ ಇಲ್ಲ. ಕಾಂಡ ಇರದ ರೆಂಬೆ ಕೊಂಬೆಗಳಿಗೆ ಉಳಿವಿಲ್ಲ. ಬೇರು ಕಾಂಡ ರೆಂಬೆ ಕೊಂಬೆಗಳಿರದ ಮರದಲ್ಲಿ ಹೂವಿಲ್ಲ, ಎಲೆಗಳಿಲ್ಲ, ಹಣ್ಣುಗಳಿರುವುದಿಲ್ಲ. ಯಾರಾದರೂ ವಿಜ್ಞಾನ ಧರ್ಮ ಏಕೆ ಬೇಕು ಎಂದು ಕೇಳಿದರೆ ಹಣ್ಣು ಹೂವು ಬೇಕು; ಆದರೆ ಬೇರು ಏಕೆ ಬೇಕು ಎಂದು ಕೇಳಿದಂತಾಗುತ್ತದೆ. ಹಾಗಾಗಿ ವಿಜ್ಞಾನ, ಜ್ಞಾನ, ತಂತ್ರಜ್ಞಾನ ಮನುಕುಲಕ್ಕೆ ಅತ್ಯವಶ್ಯ’ ಎಂದರು.
‘ಮನುಷ್ಯನ ತಪ್ಪುಗಳನ್ನು ರೋಬೋಟ್‌ಗಳು ಪ್ರಶ್ನಿಸುವ ಕಾಲ ಸನ್ನಿಹಿತವಾಗಿದೆ. ನಿಮ್ಮ ಕೆಲಸಗಳನ್ನು ಮಾಡಿಕೊಡಲು ನಮ್ಮನ್ನು ಸೃಷ್ಟಿಸಿದ್ದೀರಾ. ನಿಮ್ಮನ್ನು ಕೂಡ ಮತ್ಯಾರೋ ಸೃಷ್ಟಿಸಿದ್ದಾರೆ. ನೀವು ಕೂಡ ನಿಮ್ಮ ಧರ್ಮಕರ್ಮದ ಅನುಸಾರ ಜೀವಿಸಬೇಕು. ಮನುಷ್ಯನಾಗಿ ಹುಟ್ಟಿ ಮನುಷ್ಯರಾಗಿಯೇ ಬಾಳಬೇಕು. ಸಾರ್ಥಕತೆಯತ್ತ ಸಾಗುವುದೇ ಪರಮ ಗುರಿಯಾಗಬೇಕು’ ಎಂದರು.
‘ಬಿಜಿಎಸ್ ಕಾಲಾವಧಿಯಲ್ಲಿ ಯಾವುದೇ ಎಐ ತಂತ್ರಜ್ಞಾನ ಇರಲಿಲ್ಲ. ಗುರೂಜೀ ಆಸೆಯಂತೆ ವಿಜ್ಞಾನ ಜ್ಞಾನ ತಂತ್ರಜ್ಞಾನ ಉತ್ಸವ ಆಯೋಜನೆಗೊಂಡಿದೆ. ನಮ್ಮೆಲ್ಲರೊಳಗೂ ಒಬ್ಬ ಬುದ್ಧನಿದ್ದಾನೆ. ಅವನನ್ನು ಎಚ್ಚರಿಸುವ ಕೆಲಸ ಆಗಬೇಕು. ಅದೇ ವಿಜ್ಞಾತಂನ ಆಶಯ’ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ‘ನಿರ್ಮಲಾನಂದನಾಥ ಸ್ವಾಮೀಜಿಯವರ ಆಧ್ಯಾತ್ಮಿಕ ನಾಯಕತ್ವ ನಾಡಿಗೆ ಹೊಸ ಆಲೋಚನಾ ಕ್ರಮ, ಯುವ ಸಮೂಹಕ್ಕೆ ತಂತ್ರಜ್ಞಾನದ ನಾವೀನ್ಯತೆಯನ್ನು ಮೂಡಿಸುವುದಾಗಿದೆ’ ಎಂದರು.
ಮಲೆ ಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನ ವಿಜ್ಞಾನಿ ಕೆ.ಮುನಿಯಪ್ಪ, ಮಾಜಿ ಶಾಸಕ ಸುರೇಶ್ ಗೌಡ, ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿದರು.
ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಕಾರ್ಯದರ್ಶಿಗಳಾದ ಹಾಸನ ಶಾಖಾ ಮಠದ ಶಂಭೂನಾಥ ಸ್ವಾಮೀಜಿ, ಬೆಂಗಳೂರು ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಭಕ್ತರು ಹಾಗೂ ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮೂಲ ವಿಜ್ಞಾನಕ್ಕೆ ಆದ್ಯತೆ ನೀಡಿ
‘ತಂತ್ರಜ್ಞಾನದ ಆದ್ಯತೆ ಹೆಚ್ಚಾಗುತ್ತಿದ್ದಂತೆ ಮೂಲ ವಿಜ್ಞಾನ ಕಡೆಗಣಿಸಲ್ಪಡುತ್ತಿದೆ. ಜಗತ್ತಿನ ಉದ್ಧಾರಕ್ಕೆ ಮೂಲ ವಿಜ್ಞಾನಕ್ಕೆ ಆದ್ಯತೆ ನೀಡಬೇಕು’ ಎಂದು ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು. ‘ಯಾವ ಜ್ಞಾನ ಮನುಕುಲಕ್ಕೆ ಪೂರಕ ಎಂದು ವೈಜ್ಞಾನಿಕವಾಗಿ ಚಿಂತಿಸಬೇಕು. ಮನುಷ್ಯನ ಬದುಕನ್ನು ಹಸನು ಮಾಡುವ ಜ್ಞಾನವೇ ಮುಖ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.