ADVERTISEMENT

ಶಿಂಷಾಗೆ ಜೀವಕಳೆ: ರೈತರ ಹರ್ಷ

ಮಳೆಯಿಂದ ಮೈದುಂಬಿ ಹರಿಯುತ್ತಿರುವ ನದಿ, ಕೆಲ ವರ್ಷಗಳ ನಂತರ ನೀರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 14:02 IST
Last Updated 28 ಸೆಪ್ಟೆಂಬರ್ 2019, 14:02 IST
ಧಾರಾಕಾರ ಮಳೆಯಿಂದಾಗಿ ಮದ್ದೂರು ತಾಲ್ಲೂಕಿನ ಶಿಂಷಾ ನದಿ ಮೈದುಂಬಿ ಹರಿಯುತ್ತಿದೆ
ಧಾರಾಕಾರ ಮಳೆಯಿಂದಾಗಿ ಮದ್ದೂರು ತಾಲ್ಲೂಕಿನ ಶಿಂಷಾ ನದಿ ಮೈದುಂಬಿ ಹರಿಯುತ್ತಿದೆ   

ಮದ್ದೂರು: ಮಂಡ್ಯ ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿಯುತ್ತಿದ್ದು, ತಾಲ್ಲೂಕಿನಲ್ಲಿ ಹರಿಯುವ ಶಿಂಷಾ ನದಿಗೆ ಜೀವಕಳೆ ಬಂದಿದೆ. ಹಲವು ವರ್ಷಗಳ ನಂತರ ಶಿಂಷೆಯ ಒಡಲಲ್ಲಿ ನೀರು ಹರಿಯುತ್ತಿರುವ ಕಾರಣ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಆತಗೂರು ಹೋಬಳಿ ನವಿಲೆ ಹಾಗೂ ತೊರೆಶೆಟ್ಟಹಳ್ಳಿ ಬಳಿ ಶಿಂಷಾ ನದಿಗೆ ನಿರ್ಮಿಸಲಾಗಿರುವ ಚೆಕ್ ಡ್ಯಾಂಗಳಲ್ಲಿಯೂ ನೀರಿನ ಸಂಗ್ರಹದ ಪ್ರಮಾಣ ಹೆಚ್ಚಾಗಿದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದಿದ್ದ ಶಿಂಷಾ ಎಡದಂಡೆ ಏತ ನೀರಾವರಿ ಯೋಜನೆ ಮೂಲಕ ಕೆಸ್ತೂರು ಕೆರೆ, ನವಿಲೆ, ಹೆಬ್ಬೆರಳು, ಕದಲೂರು ಸೇರಿ 16ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬುವ ವಿಶ್ವಾಸ ಮೂಡಿದೆ.

ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಕಾರಣ ಏತ ನೀರಾವರಿ ಯಿಂದ ನೀರು ತುಂಬಿಸುವ ಕೆಲಸವೂ ಸುಗಮವಾಗಿದೆ. ನಿರ್ವಹಣಾ ಕೊರತೆಯಿಂದ ಕುಂಟುತ್ತಾ ಸಾಗಿದ್ದ ಈ ಏತ ನೀರಾವರಿ ಯೋಜನೆಗೆ ಕಳೆದ ವರ್ಷ ಪುನಶ್ಚೇತನ ನೀಡಲಾಗಿತ್ತು. ಹಾಳಾಗಿರುವ ಪೈಪ್‌ಲೈನ್‌ ತೆಗೆಸಿ ಹೊಸದಾಗಿ ಅಳವಡಿಸಲು ಶಾಸಕ ಡಿ.ಸಿ.ತಮ್ಮಣ್ಣ ಕ್ರಮ ಕೈಗೊಂಡಿದ್ದರು.

ADVERTISEMENT

ಶಿಂಷಾ ನದಿಗೆ ಮಾರ್ಕೋನಹಳ್ಳಿ ಜಲಾಶಯದಿಂದ ಹೆಚ್ಚುವರಿ ನೀರು ಹರಿಸುತ್ತಿರುವ ಕಾರಣ ನದಿಗೆ ನೀರು ಬರುತ್ತಿದೆ. ಜೊತೆಗೆ ಮದ್ದೂರು ತಾಲ್ಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವಾರು ಕೆರೆಗಳ ಕೋಡಿ ಹರಿದು ಅದು ಶಿಂಷಾ ನದಿ ಸೇರುತ್ತಿದೆ. ನದಿಯಲ್ಲಿ ನೀರು ಹರಿಯುತ್ತಿರುವ ಕಾರಣ ಈ ಭಾಗಗಳಲ್ಲಿ ಬರುವ ಹಲವಾರು ಗ್ರಾಮಗಳ ರೈತರು ಈಗಾಗಲೇ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಅಂತರ್ಜಲವೂ ಹೆಚ್ಚಾಗಿದ್ದು, ರೈತರ ಕೊಳವೆಬಾವಿಗಳು ಕೂಡ ಪುನಶ್ಚೇತನಗೊಂಡಿವೆ.

ಕಳೆಗುಂದಿದ್ದ ಶಿಂಷೆ: ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಶಿಂಷಾ ನದಿಯು ಕಳೆದ 3–4 ವರ್ಷಗಳಿಂದ ನದಿಯ ಒಡಲು ಬತ್ತಿ ಹೋಗಿತ್ತು. ಜೊತೆಗೆ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಕಾರಣ ನದಿಗೆ ನೀರಿನ ಕೊರತೆ ಎದುರಾಗಿತ್ತು. ಆದರೆ, ನಂತರ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ನಂತರ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಬಂದಿತ್ತು.

‘ಮುಂದಿನ ದಿನಗಳಲ್ಲಿ ಮಾರ್ಕೋನಹಳ್ಳಿ ಜಲಾಶಯದಿಂದ ಇನ್ನೂ ಅಧಿಕ ನೀರು ಹರಿಯುವ ಸಾಧ್ಯತೆ ಇದೆ. ಹೀಗಾಗಿ ಮರಳು ಅಕ್ರಮ ಸಾಗಣೆಗೆ ಕಡಿವಾಣ ಬೀಳಲಿದೆ. ವರ್ಷಧಾರೆಯಿಂದ ನದಿ ತುಂಬಿರುವುದನ್ನು ನೋಡುತ್ತಿದ್ದೇವೆ’ ಎಂದು ರೈತ ನಾಗರಾಜ್‌ ತಿಳಿಸಿದರು.

ಕೆರೆಗಳಿಗೆ ನೀರು ತುಂಬಿಸಿ

‘ಮಳೆ ಕೊರತೆಯಿಂದಾಗಿ ಶಿಂಷಾ ನದಿಯಲ್ಲಿ ನೀರು ನೋಡಲು ಸಾಧ್ಯವಾಗಿ ರಲಿಲ್ಲ. ಈಗ ಕೆಆರ್‌ಎಸ್‌ ಜಲಾಶಯ ತುಂಬಿದೆ. ಉತ್ತಮ ಮಳೆಯೂ ಆಗುತ್ತಿದೆ. ಹೀಗಾಗಿ ಶಿಂಷಾ ನದಿ ಒಡಲಿನಲ್ಲಿ ನೀರು ನೋಡುವಂತಾಗಿದೆ. ಈ ಭಾಗದ ರೈತರಾದ ನಮಗೆ ಸಂತಸ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಏತ ನೀರಾವರಿ ಮೂಲಕ ಕೆರೆ ತುಂಬಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ತೊರೆಶೆಟ್ಟಹಳ್ಳಿ ಗ್ರಾಮದ ರೈತ ಮುಖಂಡ ನಾಗಣ್ಣಗೌಡ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.