ADVERTISEMENT

ಕನಗನಮರಡಿ ಬಳಿ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸಿ: ಶಾಸಕ ಪುಟ್ಟರಾಜು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 2:36 IST
Last Updated 25 ಸೆಪ್ಟೆಂಬರ್ 2020, 2:36 IST
ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಸಿ.ಎಸ್.ಪುಟ್ಟರಾಜು ಗಣಿಗಾರಿಕೆ ನಿಲ್ಲಿಸುವಂತೆ ಗಣಿಮಾಲೀಕ ಸಾಂಬಶಿವ ಅವರಿಗೆ ತಾಕೀತು ಮಾಡಿದರು
ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಸಿ.ಎಸ್.ಪುಟ್ಟರಾಜು ಗಣಿಗಾರಿಕೆ ನಿಲ್ಲಿಸುವಂತೆ ಗಣಿಮಾಲೀಕ ಸಾಂಬಶಿವ ಅವರಿಗೆ ತಾಕೀತು ಮಾಡಿದರು   

ಪಾಂಡವಪುರ: 'ತಾ‌ಲ್ಲೂಕಿನ ಕನಗನಮರಡಿ ಬಳಿ ನಡೆಯುತ್ತಿರುವ ಗಣಿಗಾರಿಕೆಯಿಂದ ಗ್ರಾಮಕ್ಕೆ, ವಿ.ಸಿ.ನಾಲೆಯ ಮೇಲ್ಗಾಲುವೆ ಸೇತುವೆಗೆ ತೊಂದರೆಯಾಗಲಿದ್ದು, ಕೂಡಲೇ ಇಲ್ಲಿನ ಗಣಿಗಾರಿಕೆ ಸ್ಥಗಿತಗೊಳಿಸಬೇಕು" ಎಂದು ಶಾಸಕ ಸಿ.ಎಸ್.ಪುಟ್ಟರಾಜು ಅವರು ತಹಶೀಲ್ದಾರ ಪ್ರಮೋದ ಎಲ್‌.ಪಾಟೀಲ್ ಅವರಿಗೆ ತಾಕೀತು ಮಾಡಿದರು.

ಕನಗನರಮರಡಿ ಗ್ರಾಮಸ್ಥರ ಮನವಿ ಮೇರೆಗೆ ತಹಶೀಲ್ದಾರ್‌ ಪ್ರಮೋದ್‌ ಎಲ್‌. ಪಾಟೀಲ್‌ ಹಾಗೂ ಕಾವೇರಿ ನೀರಾವರಿ ನಿಗಮದ ಎಇಇ ಜಯರಾಮಯ್ಯ ಅವರೊಂದಿಗೆ ಶಾಸಕ ಪುಟ್ಟರಾಜು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಜನರ ಮನವಿಯನ್ನು ಆಲಿಸಿದರು.

ಗಣಿ ಮಾಲೀಕರು ಗಣಿಗಾರಿಕೆಗಾಗಿ ನಡೆಸುv ಭಾರಿ ಬ್ಲಾಸ್ಟಿಂಗ್‌ನಿಂದಾಗಿ ಮನೆಗಳ ಚಾವಣಿ ಕುಸಿಯುತ್ತಿವೆ. ಗೋಡೆಗಳು ಬಿರುಕು ಬಿಡುತ್ತಿವೆ. ಗಣಿಗಾರಿಕೆಯ ಧೂಳು ತುಂಬಿಕೊಂಡು ಜನರ ಆರೋಗ್ಯ ಕೆಡುತ್ತಿದೆ. ಇಲ್ಲಿನ ಗಣಿಗಾರಿಕೆಯನ್ನು ನಿಲ್ಲಿಸಿ ಎಂದು ಗ್ರಾಮದ ಕೆಲ ಜನರು ಮನವಿ ಮಾಡಿಕೊಂಡರು.

ADVERTISEMENT

ಗಣಿಗಾರಿಕೆ ನಡೆಸುತ್ತಿರುವ ದಿಲೀಪ್ ಬಿಲ್ಡ್‌ಕಾನ್‌ ಲಿಮಿಟೆಡ್‌ ಕಂಪನಿಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಮೈಸೂರು–ಬೆಂಗಳೂರು ಹೆದ್ದಾರಿ ಕಾಮಗಾರಿಗೆ ಕಲ್ಲಿನ ಕಚ್ಚಾ ವಸ್ತುಗಳನ್ನು ಪೂರೈಕೆ ಮಾಡುವ ನೆಪದಲ್ಲಿ ಗಣಿಗಾರಿಕೆ ನಡೆಸುತ್ತಿದ್ದೀರಿ, ರಸ್ತೆ ಕಾಮಗಾರಿಗೆ ಶ್ರೀರಂಗಪಟ್ಟಣದ ಬಳಿ ನಡೆಯುತ್ತಿರುವ ಗಣಿಗಾರಿಕೆಯಿಂದಲೇ ಕಲ್ಲು ಕಚ್ಚು ವಸ್ತುಗಳನ್ನು ಪಡೆದುಕೊಳ್ಳಿ. ಆದರೆ ಇಲ್ಲಿ ಗಣಿಗಾರಿಕೆ ನಡೆಸುವುದು ಬೇಡ ಎಂದು ತಾಕೀತು ಮಾಡಿದರು.

ಇಲ್ಲಿನ ಗಣಿಗಾರಿಕೆಯಿಂದ ಕನಗರಮರಡಿ ಗ್ರಾಮಕ್ಕೆ ತೊಂದರೆಯಾಗುತ್ತಿದೆ. ಈ ಭಾಗದಲ್ಲಿ ವಿ.ಸಿ.ನಾಲೆಯು ಮೇಲುಸೇತುವೆ (ಮೇಲ್ಗಾಲುವೆ) ಮೂಲಕ ಹಾದುಹೋಗಿ ಮಂಡ್ಯ ಮತ್ತು ಮದ್ದೂರು ತಾಲ್ಲೂಕಿನ ನೂರಾರು ಎಕರೆ ಕೃಷಿ ಪ್ರದೇಶಕ್ಕೆ ನೀರು ಹರಿಯುತ್ತಿದೆ. ಗಣಿಗಾರಿಕೆಯಿಂದಾಗಿ ಈ ಮೇಲ್ಗಾಲುವೆಗೆ ತೊಂದರೆಯಾಗಲಿದೆ. ಹಾಗಾಗಿ ಗಣಿಗಾರಿಕೆ ಸ್ಥಗಿತಗೊಳಿಸುವ ಕ್ರಮವಹಿಸಿ ಎಂದು ತಹಶೀಲ್ದಾರ್‌ ಅವರಿಗೆ ಸೂಚಿಸಿದರು.

ಇಲ್ಲಿನ ಗಣಿಗಾರಿಕೆಯಿಂದ ಉಂಟಾಗುತ್ತಿರುವ ತೊಂದರೆ ಹಾಗೂ ಸಂಭವಿಸಬಹುದಾದ ಅನಾಹುತದ ಬಗ್ಗೆ ಸರ್ಕಾರ ಮುಖ್ಯ ಕಾರ್ಯದರ್ಶಿ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಲಾಗಿದೆ. ಗಣಿಗಾರಿಕೆಗೆ ನೀಡಿರುವ ಅನಮತಿಯನ್ನು ರದ್ದುಪಡಿಸಬೇಕು ಎಂದು ಸೂಚಿಸಿದ್ದೇನೆ ಎಂದು ತಿಳಿಸಿದ ಶಾಸಕರು, ಒಂದು ವೇಳೆ ಸ್ಥಗಿತಗೊಳ್ಳದಿದ್ದರೆ ಗಣಿಗಾರಿಕೆಯಿಂದ ಸಂಭವಿಸಬಹುದಾದ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆಗಾರರಬೇಕಾತ್ತದೆ ಎಂದು ಎಚ್ಚರಿಸಿದರು.

ಗ್ರಾಮದ ಮುಖಂಡರಾದ ಜಯರಾಮು, ಕೃಷ್ಣ, ಹೇಮಣ್ಣ, ಕೃಷ್ಣಮೂರ್ತಿ, ರಾಜ, ಶಿವಕುಮಾರ್, ಗುಣ, ಅಂಕೇಗೌಡ, ಮಂಜು, ಕೆ.ಉಮೇಶ್, ಸ್ವಾಮಿಗೌಡ, ಸ್ವಾಮಿ, ಅವಿನಾಶ್‌ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.