ADVERTISEMENT

ಶ್ರೀರಂಗಪಟ್ಟಣದಲ್ಲಿ ಸರಳ ದಸರಾ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 16:34 IST
Last Updated 12 ಅಕ್ಟೋಬರ್ 2020, 16:34 IST
ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಚಿವ ಕೆ.ಸಿ. ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು
ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಚಿವ ಕೆ.ಸಿ. ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು   

ಶ್ರೀರಂಗಪಟ್ಟಣ: ಕೋವಿಡ್‌ ಕಾರಣದಿಂದ ಈ ಬಾರಿ ಶ್ರೀರಂಗಪಟ್ಟಣ ದಸರಾ ಉತ್ಸವ ಸರಳವಾಗಿ, ಒಂದು ದಿನ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಅ.23ರಂದು ಶುಕ್ರವಾರ ಮಧ್ಶಾಹ್ನ 3 ಗಂಟೆಗೆ ಕಿರಂಗೂರು ವೃತ್ತದ ಬಳಿಯ ಬನ್ನಿ ಮಂಟಪದಲ್ಲಿ ಬನ್ನಿ ಪೂಜೆಯೊಡನೆ ದಸರಾ ಉತ್ಸವ ಆರಂಭವಾಗಲಿದೆ. ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದವರೆಗೆ ಮೆರವಣಿಗೆ ಮೂಲಕ ತರಲಾಗುತ್ತದೆ. ಶ್ರೀರಂಗನಾಥ
ಸ್ವಾಮಿ, ಗಂಜಾಂ ನಿಮಿಷಾಂಬಾ ಮತ್ತು ತಾಲ್ಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ ಎಂದು ಹೇಳಿದರು.

ADVERTISEMENT

ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬನ್ನಿ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದಸರಾ ಮಂಟಪ, ಪಟ್ಟಣದ ಪ್ರಮುಖ ರಸ್ತೆಗಳು, ಸರ್ಕಾರಿ ಕಚೇರಿಗಳಿಗೆ ವಿದ್ಯುತ್‌ ದೀಪಾಲಂಕಾರ ಇರುತ್ತದೆ. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.

ಐವರಿಂದ ಉದ್ಘಾಟನೆ: ಪ್ರತಿ ತಾಲ್ಲೂಕಿನಿಂದ ಒಬ್ಬೊಬ್ಬರು ಪೌರಕಾರ್ಮಿಕ, ಆಶಾ ಕಾರ್ಯಕರ್ತೆ, ಶಿಕ್ಷಕ, ಪೊಲೀಸ್‌, ಲ್ಯಾಬ್‌ ಟೆಕ್ನಿಷಿಯನ್‌ ಹಾಗೂ ವೈದ್ಯರನ್ನು ಆಹ್ವಾನಿಸಿ ಅವರಿಂದ ದಸರಾ ಉತ್ಸವ ಉದ್ಘಾಟನೆ ಮಾಡಿಸಲಾಗುವುದು. ಡಾ.ಭಾನುಪ್ರಕಾಶ್‌ ಶರ್ಮಾ ನೇತೃತ್ವದ ವೈದಿಕರ ತಂಡ ಧಾರ್ಮಿಕ ವಿಧಿ, ವಿಧಾನಗಳನ್ನು ನೆರವೇರಿಸಲಿದೆ. ಇಲ್ಲಿನ ದಸರಾಕ್ಕೆ ಸರ್ಕಾರದ ಹಣ ಬಂದಿಲ್ಲ. ಸ್ಥಳೀಯವಾಗಿ ಸಂಪನ್ಮೂಲ ಕ್ರೋಡೀಕರಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌ ತಿಳಿಸಿದರು.

ಜೋತಿಷಿ ಡಾ.ಭಾನುಪ್ರಕಾಶ್ ಶರ್ಮಾ ಮಾತನಾಡಿ, ದಸರಾ ಮಂಟಪದ ಶುದ್ಧೀಕರಣ, ಮಂಟಪ ಪೂಜೆ ಜತೆಗೆ ಕೋವಿಡ್‌ ನಿವಾರಣೆಗೆ ವಿಶೇಷ ಪೂಜೆಗಳು ನಡೆಯಲಿವೆ. ಮಧ್ಯಾಹ್ನ 3 ಗಂಟೆಗೆ ಪೂಜಾ ವಿಧಿ, ವಿಧಾನಗಳು ಆರಂಭವಾಗಲಿದ್ದು, 4 ಗಂಟೆಗೆ ಪುಷ್ಪಾರ್ಚನೆ ಜರುಗಲಿದೆ. ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿ 108 ತೆಂಗಿನ ಕಾಯಿ ಒಡೆಯುವ ಮೂಲಕ ಚಾಮುಂಡೇಶ್ವರಿದೇವಿಯ ಉತ್ಸವ ಸಮಾಪ್ತಿಯಾಗಲಿದೆ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ದಸರಾ ಮಂಟಪದ ಆವರಣ ಮತ್ತು ಪಕ್ಕದ ಕಲ್ಯಾಣಿಯನ್ನು ಸ್ವಚ್ಛಗೊಳಿಸಲಾಗಿದೆ ಎಂದರು. ಎಸ್ಪಿ ಕೆ. ಪರಶುರಾಂ, ಜಿ.ಪಂ. ಸಿಇಒ ಎಸ್‌.ಎಂ. ಜುಲ್ಫೀಕರ್‌ ಉಲ್ಲಾ, ತಹಶೀಲ್ದಾರ್‌ ಎಂ.ವಿ. ರೂಪಾ, ತಾ.ಪಂ. ಇಒ ಭೈರಪ್ಪ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.‌

ಇದಕ್ಕೂ ಮುನ್ನ ಸಚಿವ ನಾರಾಯಣಗೌಡ ನಿಮಿಷಾಂಬಾ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಸಭೆಯ ಬಳಿಕ ದಸರಾ ಬನ್ನಿ ಮಂಟಪ, ಪಟ್ಟಣದ ಐತಿಹಾಸಿಕ ಬತೇರಿ ಮತ್ತು ಚಂದ್ರವನ ಆಶ್ರಮಕ್ಕೆ ಅವರು ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.