
ಪಾಂಡವಪುರ: ‘ಕಟ್ಟುಪಾಡುಗಳನ್ನು ಬದಿಗೊತ್ತಿ ಸಂಪ್ರದಾಯ ರಹಿತವಾಗಿ ಸರಳವಾಗಿ ಮದುವೆಯಾಗಿರುವ ನಾಡಿನ ಹಲವು ಸಾಮಾಜಿಕ ಹೋರಾಟಗಾರರ ಮತ್ತು ಚಿಂತಕರ ಜೀವನ ಉತ್ತಮ ಮಟ್ಟದಲ್ಲಿಯೇ ಇದೆ. ಇದನ್ನು ಅರ್ಥಮಾಡಿಕೊಂಡು ಪ್ರತಿಯೊಬ್ಬ ಹೆಣ್ಣು–ಗಂಡುಗಳು ಸರಳ ಮದುವೆ ಮಾಡಿಕೊಳ್ಳಬೇಕು’ ಎಂದು ರೈತ ಹೋರಾಟಗಾರ್ತಿ ನಂದಿನಿ ಜಯರಾಮ್ ಹೇಳಿದರು.
ತಾಲ್ಲೂಕಿನ ಬೇಬಿಬೆಟ್ಟದ ಭಾರಿ ದನಗಳ ಜಾತ್ರಾಮಹೋತ್ಸವದಲ್ಲಿ ಮಹದೇಶ್ವರಸ್ವಾಮಿ–ಸಿದ್ದಲಿಂಗಸ್ವಾಮಿ ವೇದಿಕೆಯಲ್ಲಿ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಗುರುವಾರ ನಡೆದ 29 ಜೋಡಿಗಳ ಸರಳ ಸಾಮೂಹಿಕ ಮದುವೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮದುವೆ ಎನ್ನುವುದು ಜೀವನದಲ್ಲಿ ನಾವಿಡುವ ಗಟ್ಟಿ ಹೆಜ್ಜೆ. ಒಳ್ಳೆಯ ಆಲೋಚನೆ ಮನಸ್ಥಿತಿ ಮುಖ್ಯ. ಕಂಕಣ ಎನ್ನುವುದು ಗಂಡುಹೆಣ್ಣಿನ ಸಂಬಂಧದ ದೀಕ್ಷೆ. ಯಾವುದೇ ಕಷ್ಟ ಸುಖ ಬಂದರೂ ಸಮಾನವಾಗಿ ಹಂಚಿಕೊಂಡು ಸಾಗುವುದು’ ಎಂದರು.
ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ‘ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ನೇತೃತ್ವದ ರೈತ ಸಂಘದಿಂದ ಸುಮಾರು 1 ಲಕ್ಷಕ್ಕೂ ಅಧಿಕ ಸರಳ ಸಾಮೂಹಿಕ ಮದುವೆಗಳಾಗಿವೆ. ಅದರ ಮುಂದುವರಿದ ಭಾಗವೇ ಬೇಬಿಬೆಟ್ಟದ ದನಗಳ ಜಾತ್ರೆಯಲ್ಲಿ ನಡೆಯುತ್ತಿರುವ ಮದುವೆ. ಇಲ್ಲಿನ ಮದುವೆಯ ವಧು–ವರರಿಗೆ ನಮ್ಮ ಕುಟುಂಬದಿಂದಲೇ ತಾಳಿ, ಸೀರೆ, ಬಟ್ಟೆ ನೀಡಲಾಗಿದೆ’ ಎಂದು ಹೇಳಿದರು.
ಬೇಬಿಬೆಟ್ಟದ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಮಾತನಾಡಿ, ‘ದನಗಳ ಜಾತ್ರೆಗೆ ಸರಳ ಮದುವೆ ಮೆರುಗು ನೀಡಿದೆ. ರೈತರು ತಮ್ಮ ಮಕ್ಕಳಿಗೆ ಅದ್ದೂರಿ ಮದುವೆ ಮಾಡುವ ಮೂಲಕ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಈ ಸಮಸ್ಯೆಗೆ ಸರಳ ಮದುವೆಯೇ ಪರಿಹಾರ. ಸಂಸಾರದಲ್ಲಿ ಕಷ್ಟ–ಸುಖ ಸಮಾನವಾಗಿ ಸ್ವೀಕರಿಸಬೇಕು. ಅತ್ತೆ–ಸೊಸೆ ಸಂಬಂಧ ತಾಯಿ–ಮಗಳಂತೆ ಎಂಬುದನ್ನು ಅರಿತರೆ ಕುಟುಂಬ ಚನ್ನಾಗಿರುತ್ತದೆ. ಹಾಗಾಗಿ ಸರಳ ಮದುವೆ ಹೆಚ್ಚಿನ ಪ್ರೋತ್ಸಾಹ ಬೇಕಿದೆ’ ಎಂದರು.
ಶಿಲ್ಪ ದರ್ಶನ್ ಪುಟ್ಟಣ್ಣಯ್ಯ, ಸ್ಮಿತಾ ಪುಟ್ಟಣ್ಣಯ್ಯ, ಷಣ್ಮುಖ ಸ್ವಾಮೀಜಿ, ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ, ಪತ್ನಿ ಜಯಶ್ರೀ, ತಾ.ಪಂ.ಇಒ ವೀಣಾ, ಸಿಡಿಪಿಒ ಪೂರ್ಣಿಮಾ, ಪಿಎಸ್‌ಐ ಲಿಂಗರಾಜು, ಉಮೇಶ್, ಜಿ.ಪಂ.ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಸರ್ವೋದಯ ಕರ್ನಾಟಕ ಪಕ್ಷದ ತಾಲ್ಲೂಕು ಅಧ್ಯಕ್ಷ ಎಸ್.ದಯಾನಂದ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಕಾರ್ಯದರ್ಶಿ ವೈ.ಪಿ.ಮಂಜುನಾಥ್, ಪುರಸಭೆ ಸದಸ್ಯ ಎಚ್.ಎಲ್.ಮುರುಳೀಧರ್, ಮುಖಂಡರಾದ ಮಂದಗೆರೆ ಜಯರಾಮ್ , ರಾಘವ ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.