ADVERTISEMENT

ಪ್ರವಾಸಿಗರ ಸುಳಿವಿಲ್ಲ: ಸಂಕಷ್ಟದಲ್ಲಿ ಆಯೋಜಕರು

ಶ್ರೀರಂಗಪಟ್ಟಣದಲ್ಲಿ ಆರನೇ ಬಾರಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಸ್ಥಗಿತ

ಗಣಂಗೂರು ನಂಜೇಗೌಡ
Published 31 ಅಕ್ಟೋಬರ್ 2020, 4:54 IST
Last Updated 31 ಅಕ್ಟೋಬರ್ 2020, 4:54 IST
ಶ್ರೀರಂಗಪಟ್ಟಣದ ಚರಿತ್ರೆಯನ್ನು ಬಿಂಬಿಸಲು ₹3.75 ಕೋಟಿ ವೆಚ್ಚದಲ್ಲಿ ರೂಪಿಸಿದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಪ್ರದರ್ಶನದ ತಾಣ (ಎಡ ಚಿತ್ರ). ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಹುಲ್ಲು ಬೆಳೆದಿರುವುದು
ಶ್ರೀರಂಗಪಟ್ಟಣದ ಚರಿತ್ರೆಯನ್ನು ಬಿಂಬಿಸಲು ₹3.75 ಕೋಟಿ ವೆಚ್ಚದಲ್ಲಿ ರೂಪಿಸಿದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಪ್ರದರ್ಶನದ ತಾಣ (ಎಡ ಚಿತ್ರ). ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಹುಲ್ಲು ಬೆಳೆದಿರುವುದು   

ಶ್ರೀರಂಗಪಟ್ಟಣ: ಪಟ್ಟಣದ ಐತಿಹಾಸಿಕ ಘಟನಾವಳಿಗಳನ್ನು ಬಿಂಬಿಸಲು ಆನೆಕೋಟೆ ಪ್ರದೇಶದಲ್ಲಿ, 2014ರಲ್ಲಿ ರೂಪಿಸಿದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ 6ನೇ ಬಾರಿ ಸ್ಥಗಿತಗೊಂಡಿದೆ.

ಕೋವಿಡ್‌ ಕಾರಣಕ್ಕೆ ಏಳು ತಿಂಗಳುಗಳಿಂದ ಸಂಪೂರ್ಣ ಬಂದ್‌ ಆಗಿದ್ದ ಸ್ಮಾರಕಗಳ ಮಾದರಿಗಳುಳ್ಳ ತಾಣ ಅ.1ರಿಂದ ಪ್ರವಾಸಿಗರಿಗೆ ಮುಕ್ತವಾಗಿತ್ತು. ಆದರೆ, ಅ.1ರಿಂದ ಇದುವರೆಗೂ ಒಂದು ದಿನವೂ ಕಾರ್ಯಕ್ರಮ ಚಾಲೂ ಪಡೆದಿಲ್ಲ. ಸಂಜೆಯ ಪ್ರದರ್ಶನಕ್ಕಿರಲಿ, ಹಗಲು ಹೊತ್ತು ಸ್ಮಾರಕಗಳ ಮಾದರಿ ನೋಡಲೂ ಜನ ಇತ್ತ ಸುಳಿಯುತ್ತಿಲ್ಲ. ಕಾವಲುಗಾರರ ಕೂಲಿಯೂ ಹುಟ್ಟದ ಸ್ಥಿತಿ ಬಂದಿದೆ.
ಸ್ಮಾರಕಗಳ ಮಾದರಿಗಳ ಬಳಿ ಕಳೆ ಗಿಡಗಳು ಬೆಳೆದಿವೆ. ವಿದ್ಯುತ್‌ ದೀಪಗಳು ಹುಲ್ಲಿನಿಂದ ಮುಚ್ಚಿ
ಹೋಗಿವೆ.

ಚಲನಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ ನೇತೃತ್ವದ ತಂಡ ಈ ಕಾರ್ಯಕ್ರಮ ರೂಪಿಸಿತ್ತು. ಒಡೆಯರ್‌, ಹೈದರ್‌ ಮತ್ತು ಟಿಪ್ಪು ಸುಲ್ತಾನ್‌ ಕಾಲದ ಘಟನಾವಳಿಗಳನ್ನು ಚಿತ್ರನಟರ ಹಿನ್ನೆಲೆ ಧ್ವನಿಯಲ್ಲಿ ಬೆಳಕಿನ ಚಿತ್ತಾರ ಮೂಡಿಸಲಾಗುತ್ತಿತ್ತು. ಕಾರ್ಯಕ್ರಮ ವೀಕ್ಷಣೆಗೆ ತಲಾ ₹75 ಶುಲ್ಕ ನಿಗದಿ ಮಾಡಿದೆ. ಸಂಜೆ 7ರಿಂದ 7.45 ಹಾಗೂ 7.45ರಿಂದ 8.30... ಹೀಗೆ ಪ್ರತಿ ದಿನ ಎರಡು ಪ್ರದರ್ಶನಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು.

ADVERTISEMENT

ಹಗಲು ಹೊತ್ತಿನಲ್ಲಿ ದೇಗುಲ ಬುರುಜು, ಡವ್‌ಕಾಟ್‌, ಮಸೀದಿ, ಫಿರಂಗಿ ಮಾದರಿಗಳನ್ನು ನೋಡಲು ಬರುವವರಿಗೆ ₹20 ಶುಲ್ಕ ನಿಗದಿ ಮಾಡಲಾಗಿದೆ. ಮೊದಲು ಕನ್ನಡದಲ್ಲಿದ್ದ ಮಾತ್ರ ಬಿತ್ತರವಾಗುತ್ತಿದ್ದ ಈ ಕಾರ್ಯಕ್ರಮವನ್ನು ಇದೀಗ ಇಂಗ್ಲಿಷ್‌ ಭಾಷೆಯಲ್ಲೂ ಕೇಳುವ ವ್ಯವಸ್ಥೆ ಮಾಡಲಾಗಿದೆ. ಆದರೆ ಪ್ರವಾಸಿಗರಿರಲಿ; ಸ್ಥಳೀಯರೂ ಇತ್ತ ಮುಖ ಮಾಡುತ್ತಿಲ್ಲ.

‘ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಪ್ರದರ್ಶನದ ಜಾಗವನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ. ಆದರೆ ಯಾವಾಗ ಕಾರ್ಯಕ್ರಮ ಆರಂಭವಾಗುತ್ತದೆ ಎಂಬುದನ್ನು ಉಸ್ತುವಾರಿ ಹೊತ್ತಿರುವವರು ತಿಳಿಸಿಲ್ಲ. ಸೂಚನೆ ನೀಡಿದ ಮರು ದಿನವೇ ಕಾರ್ಯಕ್ರಮ ಬಿತ್ತರ ಮಾಡಲಿದ್ದೇವೆ’ ಎಂದು ಪ್ರವೇಶ ಶುಲ್ಕ ಸಂಗ್ರಹಿಸುವ ಇಸ್ಮಾಯಿಲ್‌ ಹೇಳುತ್ತಾರೆ.

‘ನಮ್ಮ ಇನ್ನೊವೇಟಿವ್‌ ಲೈಟಿಂಗ್‌ ಸಿಸ್ಟಂ ಸಂಸ್ಥೆಯ ಉಸ್ತುವಾರಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ವಿದ್ಯುತ್‌ ಬಿಲ್‌, ಸಿಬ್ಬಂದಿಯ ವೇತನವನ್ನು ನಾವೇ ಭರಿಸುತ್ತಿದ್ದೇವೆ. ಕೊರೊನಾ ಭೀತಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಮೇಲೂ ಪರಿಣಾಮ ಬೀರಿದ್ದು, ಜನರೇ ಸುಳಿಯುತ್ತಿಲ್ಲ. ದೀಪಾವಳಿ ಹೊತ್ತಿಗೆ ಈ ಕಾರ್ಯಕ್ರಮಕ್ಕೆ ಹೊಸ ಸ್ಪರ್ಶ ನೀಡುವ ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಇನ್ನೊವೇಟಿವ್‌ ಸಂಸ್ಥೆಯ ಮುಖ್ಯಸ್ಥ ಕೃಷ್ಣಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.