
ಮಳವಳ್ಳಿ: ‘ಪ್ರತಿನಿತ್ಯದ ಜೀವನದಲ್ಲಿ ಸತ್ಯ ಗೊತ್ತಿದ್ದರೂ ಮರೆಮಾಚಿ ಬದುಕು ನಡೆಸುತ್ತಿರುವ ಪ್ರಸುತ ಸಂದರ್ಭದಲ್ಲಿ ಮೇಲು ಕೀಳೆಂಬ ಸಂಸ್ಕೃತಿ ಹೋಗುವವರೆಗೂ ಮನುಕುಲ ಒಂದಾಗಲು ಸಾಧ್ಯವಿಲ್ಲ’ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಭಕ್ತ ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರು, ಬಸವಣ್ಣ ಮೂಢನಂಬಿಕೆಯ ವಿರೋಧಿಯಾಗಿದ್ದರು. ಆದರೆ ಇಂದು ಅವರ ಅನುಯಾಯಿಗಳು ಮೂಢನಂಬಿಕೆ ಪರವಾಗಿದ್ದಾರೆ. ಎಲ್ಲವೂ ನಮ್ಮ ನಂಬಿಕೆ ಮೇಲೆ ನಿಂತಿದೆ. ನೆಲ, ಜಲ, ಪ್ರಾಣಿ, ಪಕ್ಷಿ, ಜೀವ, ರಕ್ತಕ್ಕೆ ಇಲ್ಲದ ಜಾತಿ ಮನುಷ್ಯನಿಗೆ ಏಕೆ ಎನ್ನುವ ಸತ್ಯವನ್ನು ಕನಕದಾಸರು ಪ್ರತಿಪಾದಿಸಿದ್ದಾರೆ. 12ನೇ ಶತಮಾನದಲ್ಲಿ ಬಸವ ಸಾಹಿತ್ಯ ಹಾಗೂ ಕನಕದಾಸರ ಕಾಲದಲ್ಲಿ ದಾಸ ಸಾಹಿತ್ಯದ ಮೂಲಕ ಸತ್ಯದ ವಿಚಾರ ಸಮಾಜಕ್ಕೆ ತಿಳಿಸಿಕೊಟ್ಟು ಬೆಳಕಾಗಿದ್ದಾರೆ ಎಂದು ತಿಳಿಸಿದರು.
ಭಕ್ತ ಕನಕದಾಸರು ಕೀರ್ತನೆ ಮೂಲಕ ಶ್ರೀಕೃಷ್ಣನನ್ನೇ ತನ್ನ ಕಡೆಗೆ ತಿರುಗುವಂತೆ ಮಾಡುವುದರ ಮೂಲಕ ಸರ್ವರೂ ಸಮಾನರು ಎನ್ನುವುದಕ್ಕೆ ಕನಕನ ಕಿಂಡಿಯೇ ಸಾಕ್ಷಿ. ಭಗವಂತನಿಗೆ ಭಕ್ತರೆಲ್ಲರೂ ಸಮಾನರು ಎನ್ನುವುದನ್ನು ಕನಕದಾಸರು ಅವರ ಕಾಲದಲ್ಲಿಯೇ ತೋರಿಸಿಕೊಟ್ಟಿದ್ದಾರೆ ಎಂದರು.
ಪ್ರಾಂಶುಪಾಲೆ ಸಿ.ಅನಿತಾ ಮಾತನಾಡಿ, ‘ಕನಕದಾಸರು ಕಾಲಜ್ಞಾನಿಯಾಗಿದ್ದರು. ಪ್ರಸ್ತುತ ವ್ಯವಸ್ಥೆಯಲ್ಲಿ ಅವರ ಮಾತು ಇಂದಿಗೂ ಸೂಕ್ತವಾಗಿದೆ. ತಮ್ಮ ತಾಳ ತಂಬೂರಿಯ ಮೂಲಕ ಕೀರ್ತನೆಗಳನ್ನು ಬೀದಿ ಬೀದಿಯಲ್ಲಿ ಹಾಡಿ ಅನಿಷ್ಟ ಪದ್ಧತಿಗಳಿಂದ ದೂರವಿದ್ದು, ಮನಷ್ಯರಾಗಿ ಬದುಕಬೇಕೆಂಬ ಸಂದೇಶ ಸಾರಿದ್ದರು ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ತಾಲ್ಲೂಕು ಕಚೇರಿಯಿಂದ ಬೆಳ್ಳಿ ರಥದಲ್ಲಿ ಕನಕದಾಸರ ಭಾವಚಿತ್ರ ಪ್ರತಿಷ್ಠಾಪಿಸಿ ಪೂರ್ಣಕುಂಭದೊಂದಿಗೆ ಜಾನಪದ ಕಲಾತಂಡಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಪೂಜಾ ಕುಣಿತ, ಡೊಳ್ಳು ಕುಣಿತ, ಬಂಡೂರು ಕುರಿ ಪ್ರದರ್ಶನ, ಹಳ್ಳಿಕಾರ್ ದನಗಳು, ಬಸವಪ್ಪನ ಮೆರವಣಿಗೆ ಮತ್ತು ವೀರ ಮಕ್ಕಳ ಕುಣಿತ ಗಮನ ಸೆಳೆಯಿತು. ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಅಭಿನಂದಿಸಲಾಯಿತು.
ತಹಶೀಲ್ದಾರ್ ಎಸ್.ವಿ.ಲೋಕೇಶ್, ತಾ.ಪಂ ಇಒ ಎಚ್.ಜಿ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಮನ್ ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ತಾಲ್ಲೂಕು ಅಧ್ಯಕ್ಷ ಪಿ.ಮಾದೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ದೊಡ್ಡಯ್ಯ, ಮುಖಂಡರಾದ ಬಿ.ಎಸ್.ರಾಮಚಂದ್ರಯ್ಯ, ಕೆ.ಜೆ.ದೇವರಾಜು, ಬಿ.ಪುಟ್ಟಬಸವಯ್ಯ, ನಾಗರಾಜು, ಜಯಣ್ಣ, ಸುಷ್ಮಾ ರಾಜು, ಎಚ್.ನಾಗೇಶ್, ಪುಟ್ಟಸ್ವಾಮಿ, ದಿಲೀಪ್ ಕುಮಾರ್, ಜಗದೀಶ್, ಶಿವಮಾದೇಗೌಡ, ಮಂಜುನಾಥ್, ಶಶಿರಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.