ADVERTISEMENT

ಮಂಡ್ಯ | ಕೈಯೊಳಗೆ ಸೆರೆಸಿಕ್ಕ ಸೂರ್ಯ!

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 10:26 IST
Last Updated 27 ಡಿಸೆಂಬರ್ 2019, 10:26 IST
ಕೈಯೊಳಗೆ ಸೆರೆಸಿಕ್ಕ ಸೂರ್ಯ
ಕೈಯೊಳಗೆ ಸೆರೆಸಿಕ್ಕ ಸೂರ್ಯ   

ಮಂಡ್ಯ: ತಾಲ್ಲೂಕಿನ ದ್ಯಾಪಸಂದ್ರ ಗ್ರಾಮದ ಶಂಕರಲಿಂಗೇಗೌಡ ಅವರ ಮನೆಯೊಳಗೆ ಗುರುವಾರ ಸೂರ್ಯ ಪ್ರವೇಶ ಮಾಡಿದ್ದ. ಮನೆಯೊಳಗೆ ಮಾತ್ರವಲ್ಲ, ಕೈಯೊಳಗೂ ಸರೆ ಸಿಕ್ಕಿದ್ದ!

ಸೂರ್ಯಗ್ರಹಣದ ವೇಳೆ ಗೋಡೆಯ ಮೇಲೆ ನೈಸರ್ಗಿಕವಾಗಿ ಮೂಡಿದ್ದ ಸೂರ್ಯನ ಪ್ರತಿಬಿಂಬ ಮನಸೂರೆಗೊಂಡಿತು. ಶಂಕರಲಿಂಗೇಗೌಡರ ತೊಟ್ಟಿ ಮನೆಯ ಹೆಂಚಿನ ಕಿಂಡಿಯ ಮೂಲಕ ಪ್ರತಿಬಿಂಬ ಮೂಡಿತ್ತು. ಗ್ರಹಣದ ಪ್ರತಿ ಹಂತವೂ ಗೋಡೆಯ ಮೇಲೆ ಮೂಡಿತು. ಇದನ್ನು ಕಂಡ ಗ್ರಾಮಸ್ಥರು ಸೂರ್ಯನನ್ನು ಕೈಯಲ್ಲಿ ಹಿಡಿಯುವ ಪ್ರಯತ್ನ ಮಾಡಿದರು. ಹಸ್ತದ ಮೇಲೂ ಸೂರ್ಯನ ಪ್ರತಿಬಿಂಬ ಮೂಡಿತು. ಈ ಸುಂದರ ದೃಶ್ಯಗಳನ್ನು ನೋಡಲು ಜನರು ತಂಡೋಪತಂಡವಾಗಿ ಮನೆಗೆ ಧಾವಿಸಿದರು. ಮನಮೋಹಕ ದೃಶ್ಯಗಳನ್ನು ಕಣ್ತುಂಬಿಕೊಂಡರು.

ರೋಬೊ ಮಂಜೇಗೌಡ ಸಾಹಸ: ಕೆ.ಆರ್‌.ಪೇಟೆ ತಾಲ್ಲೂಕು ಕೋಮನಹಳ್ಳಿ ಗ್ರಾಮದ ರೈತ ವಿಜ್ಞಾನಿ ರೋಬೊ ಮಂಜೇಗೌಡ ಅವರು ಗ್ರಹಣ ವೀಕ್ಷಣೆಗಾಗಿ ವಿಶೇಷ ಸೌರ ದರ್ಶಕ ಉಪಕರಣ ತಯಾರಿಸಿದ್ದರು. ಅದರ ಮೂಲಕ ಗ್ರಾಮಸ್ಥರಿಗೆ ಸೂರ್ಯಗ್ರಹಣ ತೋರಿಸಿದರು. ಇದೇ ವೇಳೆ ಉಪಾಹಾರ ನೀಡಿ ಮೂಢನಂಬಿಕೆ ತೊರೆಯುವಂತೆ ಸಲಹೆ ನೀಡಿದರು.

ADVERTISEMENT

ಮೌಢ್ಯಕ್ಕೆ ತಿರುಗೇಟು: ಶ್ರೀರಂಗಪಟ್ಟಣದ ಮಹಾಕಾಳಿ ದೇವಾಲಯದಲ್ಲಿ ಸ್ವಾಮೀಜಿ ಗುರುದೇವ್‌ ಅವರು ಗ್ರಹಣ ಸಮಯದಲ್ಲೇ ಪೂಜೆ, ಪುನಸ್ಕಾರ ನೆರವೇರಿಸಿದರು. ‘ಸೂರ್ಯಗ್ರಹಣ ಪ್ರಕೃತಿಯ ವಿಸ್ಮಯ, ಇದರಿಂದ ಯಾರೂ ಆತಂಕಪಡುವ ಅಗತ್ಯವಿಲ್ಲ. ಮೌಢ್ಯಗಳನ್ನು ತ್ಯಜಿಸಬೇಕು’ ಎಂದು ಕರೆ ನೀಡಿದರು.

ಗ್ರಹಣದ ವೇಳೆ ವೈದಿಕರು ಕಾವೇರಿ ನದಿಗೆ ಇಳಿದು ಗಾಯತ್ರಿ ಮಂತ್ರ ಜಪಿಸಿದರು. ಘೋಷಾಯಿ ಘಾಟ್‌, ಸ್ನಾನಘಟ್ಟ, ಸಂಗಮದಲ್ಲೂ ವೈದಿಕರ ತಂಡ ಗಾಯತ್ರಿ ಜಪ, ಸೂರ್ಯಮಂತ್ರ ಜಪಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.