ADVERTISEMENT

ಮಂಡ್ಯ | ಸೌರ ವಿದ್ಯುತ್‌ ಯೋಜನೆ: 2 ಗ್ರಾಮಗಳು ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 3:09 IST
Last Updated 22 ಆಗಸ್ಟ್ 2025, 3:09 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಮಂಡ್ಯ: ಕೇಂದ್ರ ಸರ್ಕಾರ ‘ಸೌರ ವಿದ್ಯುತ್’ ಉತ್ಪಾದನೆಯ ಪಾಲನ್ನು ಹೆಚ್ಚಿಸುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿ ಮತ್ತು ಕೆಸ್ತೂರು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಮದ್ದೂರು ವಿಭಾಗ ವ್ಯಾಪ್ತಿಯಲ್ಲಿ ಪಿ.ಎಂ.ಎಸ್‌.ಜಿ– ಎಂ.ಬಿ.ವೈ ಮಾದರಿ ಸೋಲಾರ್‌ ಗ್ರಾಮ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸರ್ಕಾರದ ಆದೇಶದನ್ವಯ ಮಾದರಿ ಸೋಲಾರ್ ಗ್ರಾಮ ಯೋಜನೆಯಡಿ ಈ ಗ್ರಾಮಗಳನ್ನು ಆಯ್ಕೆ ಮಾಡಿದೆ. 

ಪ್ರತಿ ಜಿಲ್ಲೆಯಲ್ಲಿ 5 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಹಾಲಿ ವಿದ್ಯುತ್ ಜಾಲದಿಂದ ಸಂಪರ್ಕ ಹೊಂದಿರುವ ಕಂದಾಯ ಗ್ರಾಮಗಳು ಸ್ಪರ್ಧಿಸುವ ಅವಕಾಶ ಇರುವುದರಿಂದ ಈ ಎರಡು ಗ್ರಾಮಗಳನ್ನು ‘ಪೊಟೆನ್ಷಿಯಲ್‌ ಕ್ಯಾಂಡಿಡೇಟ್’ ಗ್ರಾಮಗಳಾಗಿ ಗುರುತಿಸಲಾಗಿದೆ.

ADVERTISEMENT

ಈ ಗ್ರಾಮಗಳಿಗೆ 2025ರ ಜುಲೈ 1ರಿಂದ 6 ತಿಂಗಳ ಅವಧಿ ನೀಡಲಾಗಿದ್ದು, ಈ ಅವಧಿಯಲ್ಲಿ ವಿವಿಧ ಯೋಜನೆಗಳನ್ನು ಗರಿಷ್ಠ ಮಟ್ಟದಲ್ಲಿ ಅನುಷ್ಠಾನಗೊಳಿಸಿ ಹೆಚ್ಚಿನ ನವೀಕರಿಸಬಹುದಾದ ಸೌರವಿದ್ಯುತ್ ಉತ್ಪಾದನೆಯ ಗುರಿಯನ್ನು ಸಾಧಿಸುವ ಗ್ರಾಮವನ್ನು ‘ಮಾದರಿ ಸೌರಗ್ರಾಮ’ ಎಂದು ಆಯ್ಕೆ ಮಾಡಲಾಗುವುದು.

‘ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಸದಸ್ಯರಗಳೊಂದಿಗೆ ಸಮನ್ವಯ ಸಾಧಿಸಿ ಆಯ್ಕೆಯಾಗಿರುವ ಗ್ರಾಮಗಳ ಜನರನ್ನು ಮನ ಒಲಿಸಿ, ಹೆಚ್ಚು ಸೌರ ವಿದ್ಯುತ್‌ ಶಕ್ತಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಗ್ರಾಮಗಳ ನಡುವೆ ಸ್ಪರ್ಧೆ ಏರ್ಪಡಿಸುವಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಪಾಲಿಸಿ ಯೋಜನೆಯನ್ನು ಯಶಸ್ವಿಯಾಗಿಸಬೇಕಾಗಿದೆ’ ಎಂದು ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕ್ರಿಯೆಯಲ್ಲಿ ತಿಳಿಸಿದ್ದಾರೆ.

ಸೌರ ಗ್ರಾಮಕ್ಕೆ ₹1 ಕೋಟಿ ಅನುದಾನ
ಆಯ್ಕೆಯಾಗುವ ಮಾದರಿ ಸೌರ ಗ್ರಾಮಕ್ಕೆ ₹1 ಕೋಟಿ ಕೇಂದ್ರಿಯ ಹಣಕಾಸಿನ ಸಹಾಯ (ಸಿ.ಎಫ್‌.ಎ) ಅನುದಾನ ನೀಡಲಾಗುವುದು. ಈ ಚಟುವಟಿಕೆಗಳನ್ನು ಆಯಾಯ ಪಂಚಾಯಿತಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ಗ್ರಾಮ ಮಟ್ಟದ ಕಾರ್ಯಪಡೆ ಸಮಿತಿ ರಚಿಸಲಾಗುವುದು ಎಂದು ಸೆಸ್ಕ್‌ ಕಾರ್ಯಪಾಲಕ ಎಂಜಿನಿಯರ್‌ ತಿಳಿಸಿದ್ದಾರೆ.  ನಿರೀಕ್ಷಿತ ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಪ್ರಚಾರ ಮಾಡುವುದು ಜನಸಾಮಾನ್ಯರಲ್ಲಿ ಸೌರ ವಿದ್ಯುತ್ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದು ವಿವಿಧ ಯೋಜನೆಗಳ ಸವಲತ್ತುಗಳನ್ನು ಪಡೆದುಕೊಳ್ಳಲು ಉತ್ತೇಜಿಸುವುದು. ಪಂಚಾಯಿತಿಯ ನಿರೀಕ್ಷಿತ ಫಲಾನುಭವಿಗಳು ಬ್ಯಾಂಕ್‌ಗಳು ಅನುಮೋದನೆ ಹೊಂದಿರುವ ಮಾರಾಟಗಾರರ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.