ADVERTISEMENT

₹ 50 ಕೋಟಿ ವಿಶೇಷ ಅನುದಾನ ವಾಪಸ್‌?

ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಿದ್ದ ವಿಶೇಷ ಪ್ಯಾಕೇಜ್‌, ಆರ್ಥಿಕ ಇಲಾಖೆಯಿಂದ ಕಾಮಗಾರಿಗಳಿಗೆ ತಡೆ

ಎಂ.ಎನ್.ಯೋಗೇಶ್‌
Published 18 ನವೆಂಬರ್ 2020, 13:58 IST
Last Updated 18 ನವೆಂಬರ್ 2020, 13:58 IST
ಅಭಿವೃದ್ಧಿ ಕಾಣದ ಕೆಂಪೇಗೌಡ ಉದ್ಯಾನ ತ್ಯಾಜ್ಯ ಸುರಿಯುವ ತಾಣವಾಗಿರುವುದು
ಅಭಿವೃದ್ಧಿ ಕಾಣದ ಕೆಂಪೇಗೌಡ ಉದ್ಯಾನ ತ್ಯಾಜ್ಯ ಸುರಿಯುವ ತಾಣವಾಗಿರುವುದು   

ಮಂಡ್ಯ: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಗರದ ಅಭಿವೃದ್ಧಿಗಾಗಿ ಘೋಷಿಸಿದ್ದ ₹ 50 ಕೋಟಿ ಅನುದಾನ ಸರ್ಕಾರಕ್ಕೆ ವಾಪಸ್‌ ಹೋಗಿದೆ ಎಂಬ ವಿಷಯ ಬೆಳಕಿಗೆ ಬಂದಿದ್ದು ಸ್ಥಳೀಯ ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.

‘ಬೆಂಗಳೂರು–ಮೈಸೂರು ನಡುವೆ ಸಣ್ಣಹಳ್ಳಿಯಂತಿರುವ ಮಂಡ್ಯವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲಾಗುವುದು’ ಎಂಬ ಘೋಷಣೆಯೊಂದಿಗೆ 2018ರ ಬಜೆಟ್‌ನಲ್ಲಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶೇಷ ಪ್ಯಾಕೇಜ್‌ ಘೋಷಿಸಿದ್ದರು. ಇದಾದ ನಂತರ ಜಿಲ್ಲಾಡಳಿತ ನಗರ ಸಂಚಾರ ನಡೆಸಿ ಕಾಮಗಾರಿಗಳ ಪಟ್ಟಿ ಸಿದ್ಧತೆ ಮಾಡಿತ್ತು.

ಟೆಂಡರ್‌ ಪ್ರಕ್ರಿಯೆಯೂ ಪೂರ್ಣಗೊಂಡು ಹಲವು ಕಾಮಗಾರಿಗಳಿಗೆ ಕಾರ್ಯಾದೇಶವನ್ನೂ ನೀಡಲಾಗಿತ್ತು. ವಿವಿಧ ಕಾಮಕಾರಿ ಅನುಷ್ಠಾನ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ ಆರಂಭಿಕವಾಗಿ ಸರ್ಕಾರ ₹ 2.5 ಕೋಟಿ ಹಣ ಬಿಡುಗಡೆ ಮಾಡಿತ್ತು.

ADVERTISEMENT

ಆದರೆ, ಈಚೆಗೆ ಆರ್ಥಿಕ ಇಲಾಖೆಯಿಂದ ಕಾಮಗಾರಿ ಅನುಷ್ಠಾನ ತಡೆ ಹಿಡಿಯುವಂತೆ ಜಿಲ್ಲಾಡಳಿತಕ್ಕೆ ಪತ್ರ ಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೈಗೊಂಡಿದ್ದ ಅಭಿವೃದ್ಧಿಯನ್ನು ತಡೆಯುವ ಉದ್ದೇಶದಿಂದಲೇ ಸರ್ಕಾರ ಅನುದಾನ ವಾಪಸ್ ಪಡೆಯುತ್ತಿದೆ ಎಂದು ಜೆಡಿಎಸ್‌ ಶಾಸಕರು ಆರೋಪಿಸುತ್ತಿದ್ದಾರೆ.

‘ಎಚ್‌.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ಕೈಗೊಂಡಿದ್ದ ಬಹುತೇಕ ಕಾಮಗಾರಿಗಳಿಗೆ ಬಿಜೆಪಿ ಸರ್ಕಾರ ತಡೆಯೊಡ್ಡಿದೆ. ಅಭಿವೃದ್ಧಿಯ ಕೀರ್ತಿ ಜೆಡಿಎಸ್‌ಗೆ ಹೋಗಬಾರದು ಎಂಬ ಉದ್ದೇಶದಿಂದಲೇ ಈ ರೀತಿ ಮಾಡಿದ್ದಾರೆ. ನಗರದ ಅಭಿವೃದ್ಧಿಗಾಗಿ ನೀಡಿದ್ದ ₹ 50 ಕೋಟಿ ವಾಪಸ್‌ ಹೋದರೆ ನಾವು ಸಹಿಸುವುದಿಲ್ಲ, ಟೆಂಡರ್‌ ಆಗಿರುವ ಕಾಮಗಾರಿ ತಡೆಯುವುದು ಸರಿಯಲ್ಲ. ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ’ ಎಂದು ಶಾಸಕ ಎಂ.ಶ್ರೀನಿವಾಸ್‌ ಹೇಳಿದರು.

ಕಾಮಗಾರಿ ಯಾವುವು?: ನಗರದಾದ್ಯಂತ ರಸ್ತೆಗಳಲ್ಲಿ ಗುಂಡಿಗಳ ಕಾರುಬಾರು ವಿಪರೀತವಾಗಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಅನುದಾನದಲ್ಲಿ ನಗರದ ಎಲ್ಲಾ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಬೆಸಗರಹಳ್ಳಿ ರಾಮಣ್ಣ ಸರ್ಕಲ್‌ನಿಂದ ಗುಂಡೂರಾವ್‌ ಪಾರ್ಕ್‌ವರೆಗೆ ಕಾಂಕ್ರೀಟ್‌ ರಸ್ತೆ ಕಾಮಗಾರಿ ನಡೆಸಲು ಚಿಂತನೆ ನಡೆಸಲಾಗಿತ್ತು.

ಗಾಂಧಿನಗರದಲ್ಲಿರುವ ಜಲಮಂಡಳಿ ಪಂಪ್‌ಹೌಸ್‌ ಕೊಳಗಳನ್ನು ಅಭಿವೃದ್ಧಿಗೊಳಿಸಿ ಉದ್ಯಾನ ರೂಪ ನೀಡುವ ಕಾಮಗಾರಿ ಯೋಜನೆಯಲ್ಲಿ ಸೇರಿತ್ತು. ನಗರಸಭೆ ಎದುರಿನ ಗಾಂಧಿ ಉದ್ಯಾನ ಸೇರಿ ನಗರದ ಎಲ್ಲಾ ಉದ್ಯಾನಗಳಿಗೆ ಕಾಯಕಲ್ಪ ನೀಡಲು ಯೋಜನೆ ಸಿದ್ಧಗೊಂಡಿತ್ತು. ಬೀಡಿ ಕಾರ್ಮಿಕರ ಕಾಲೊನಿ ಸೇರಿ ಮಳೆ ನೀರು ನುಗ್ಗುವ ಪ್ರದೇಶಗಳ ಚರಂಡಿ ವ್ಯವಸ್ಥೆಯನ್ನು ಪುನರ್ ನಿರ್ಮಿಸುವ ಯೋಜನೆ ತಯಾರಿಸಲಾಗಿತ್ತು. ಜೊತೆಗೆ ರಾಜಕಾಲುವೆಗಳ ಅಭಿವೃದ್ಧಿ, ನಗರದ ಸುತ್ತಲಿನ ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಟೆಂಡರ್‌ ನೀಡಲಾಗಿತ್ತು.

'ಇಲ್ಲಿಯವರೆಗೂ ನಗರಸಭೆ ಆಡಳಿತ ಇರಲಿಲ್ಲ, ಹೀಗಾಗಿ ವಿಶೇಷ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈಗ ನಗರಸಭೆ ಆಡಳಿತ ಅಸ್ಥಿತ್ವಕ್ಕೆ ಬಂದಿದ್ದು ಅನುದಾನ ವಾಪಸ್‌ ಹೋಗಲು ಬಿಡುವುದಿಲ್ಲ. ವಾಪಸ್‌ ಹೋಗಿದ್ದರೂ ಸರ್ಕಾರದ ಮೇಲೆ ಒತ್ತಡೆ ಹೇರಿ ಮತ್ತೆ ಅನುದಾನ ಪಡೆಯಲಾಗುವುದು’ ಎಂದು ನಗರಸಭಾ ಅಧ್ಯಕ್ಷ ಎಚ್‌.ಎಸ್‌.ಮಂಜು ಹೇಳಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರಿಗೆ ಕರೆ ಮಾಡಿದಾಗ ಅವರ ಮೊಬೈಲ್‌ ಫೋನ್‌ ಸ್ಥಗಿತಗೊಂಡಿತ್ತು.

*****

ತಾತ್ಕಾಲಿಕ ತಡೆಯಷ್ಟೇ: ಜಿಲ್ಲಾಧಿಕಾರಿ

‘₹ 50 ಕೋಟಿ ಅನುದಾನ ಬಳಸದಂತೆ ಸರ್ಕಾರ ತಾತ್ಕಾಲಿಕವಾಗಿ ತಡೆ ನೀಡಿದೆ. ಈಗಾಗಲೇ ಹಲವು ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದ್ದು ಸರ್ಕಾರ ಹಣ ನೀಡಿದರೆ ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

‘ಕೋವಿಡ್‌ ಕಾರಣದಿಂದ ತಡೆ ನೀಡಿರಬಹುದು. ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.