ADVERTISEMENT

ಪೊಲೀಸರ ಶಕ್ತಿ ಸಾಮರ್ಥ್ಯಕ್ಕೆ ಕ್ರೀಡಾಕೂಟ ಸಹಕಾರಿ

ವಾರ್ಷಿಕ ಕ್ರೀಡಾ ಕೂಟದಲ್ಲಿ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 4:10 IST
Last Updated 5 ಮಾರ್ಚ್ 2021, 4:10 IST
ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಗುರುವಾರ ಮಂಡ್ಯ ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಹಗ್ಗ ಜಗ್ಗಾಟದಲ್ಲಿ ಪೊಲೀಸ್‌ ಸಿಬ್ಬಂದಿ ಪಾಲ್ಗೊಂಡಿದ್ದರು.
ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಗುರುವಾರ ಮಂಡ್ಯ ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಹಗ್ಗ ಜಗ್ಗಾಟದಲ್ಲಿ ಪೊಲೀಸ್‌ ಸಿಬ್ಬಂದಿ ಪಾಲ್ಗೊಂಡಿದ್ದರು.   

ಮಂಡ್ಯ: ಪೊಲೀಸರ ಪ‍್ರಾವಿಣ್ಯತೆ, ಶಕ್ತಿ ಸಾಮರ್ಥ್ಯ, ಚಾತುರ್ಯತೆ ಪ್ರದರ್ಶಿಸಲು ಕ್ರೀಡಾಕೂಡಗಳು ಸಹಕಾರಿಯಾಗಿದ್ದು, ಚಟಗಳಿಂದ ದೂರವಿದ್ದು ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಒಳ್ಳೆಯ ಆಟ, ಹವ್ಯಾಸ ಹಾಗೂ ಆಹಾರ ಪದ್ಧತಿಗಳನ್ನು ರೂಢಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಹೇಳಿದರು. ‌

ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಗುರುವಾರ ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರು ರಾತ್ರಿ ಹೊತ್ತು ನೆಮ್ಮದಿಯಾಗಿ ನಿದ್ರೆ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಪೊಲೀಸ್ ಇಲಾಖೆಯವರೇ ಮುಖ್ಯ ಕಾರಣ. ಪೊಲೀಸ್ ಇಲಾಖೆಯ ಎಲ್ಲರೂ ಕ್ರೀಡಾ ಮನೋಭಾವದಿಂದ ಭಾಗವಹಿಸಿ, ಸೊಲು ಗೆಲುವು ಮುಖ್ಯವಲ್ಲ. ಆಟಗಳಿಂದ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಇದರಿಂದ ಮನಸ್ಸು, ಒಳ್ಳೆಯ ವಿಚಾರಗಳು ಬೆಳವಣಿಗೆಯಾಗುತ್ತದೆ. ಒಳ್ಳೆಯ ವಿಚಾರಗಳು ಬೆಳವಣಿಗೆಯಾದರೆ, ಒಳ್ಳೆಯ ಸಂಸ್ಕøತಿ ಬೆಳೆಯುತ್ತದೆ. ಇದರಿಂದ ಒಳ್ಳೆಯ ಪರಿಸರ ನಿರ್ಮಾಣವಾಗಿ ಉತ್ತಮ ಸಮಾಜ ರೂಪುಗೊಳ್ಳುತ್ತದೆ ಎಂದು ಹೇಳಿದರು.

ADVERTISEMENT

ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಮಾತನಾಡಿ, ಪೊಲೀಸ್ ಇಲಾಖೆ ಸೇವೆಯು ಅತ್ಯಂತ ಒತ್ತಡಕರವಾಗಿರುವುದರಿಂದ ದೈಹಿಕವಾಗಿ ಸದೃಢರಾಗಿರಬೇಕು. ಮಾನಸಿಕ ಹಾಗೂ ದೈಹಿಕ ಆರೋಗ್ಯ ಕ್ಷಮತೆಗೆ ಕ್ರೀಡಾಕೂಟಗಳು ಸಹಾಯಕಾರಿಯಾಗಿವೆ. ಇಡೀ ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಪೊಲೀಸ್ ಇಲಾಖೆಯವರು ಮುಖ್ಯ ಪಾತ್ರವಹಿಸುತ್ತಾರೆ. ದೇಶದ ಯಾವುದೇ ರಾಜ್ಯದಲ್ಲಾಗಲೀ ತುರ್ತು ಪರಿಸ್ಥಿತಿ ಬಂದಾಗ ಪೊಲೀಸ್ ಇಲಾಖೆ ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತದೆ. ಅವರ ಸೇವೆ ಆರಂಭವಾದ ದಿನದಿಂದ ಹಗಲು ರಾತ್ರಿ ಎನ್ನದೇ ಎಂತಹ ಸಂದರ್ಭದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಾರೆ ಎಂದರು.

ಸಾರ್ವಜನಿಕರು ಯಾವುದೇ ಆತಂಕ, ಭಯವಿಲ್ಲದೇ ಸಮಾಜದಲ್ಲಿ ಶಾಂತಿಯಿಂದ ಬದುಕಲು ಪೊಲೀಸ್ ಇಲಾಖೆಯ ನಿಷ್ಠೆ ಕಾರಣ ಕೆಲಸದ ಒತ್ತಡವನ್ನು ಪಕ್ಕಕ್ಕಿಟ್ಟು ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು ಎಂದು ಸಲಹೆ ನೀಡಿದರು.

ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿರವರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ.ಧನಂಜಯ ಇದ್ದರು.

ಪಿಯು ಕ್ರೀಡಾ ಕೂಟ: ಮಂಡ್ಯ ನಗರದ ಸರ್‌ ಎಂ.ವಿ ಕ್ರೀಡಾಂಗಣದಲ್ಲಿ ಗುರುವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಲಕ್ಷ್ಮಿ ಜನಾರ್ಧನ ಮಹಿಳಾ ಪದವಿ ಪೂರ್ವ ಕಾಲೇಜು ವತಿಯಿಂದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು.

ಕ್ರೀಡಾಕೂಟ ಉದ್ಘಾಟಿಸಿದ ಶಸ್ತ್ರಚಿಕಿತ್ಸ ತಜ್ಞ ಡಾ.ಬಿ.ಕೆ. ಸುರೇಶ್, ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ವಿಕಾಸಕ್ಕೆ ಅತ್ಯವಶ್ಯಕವಾಗಿದ್ದು, ಶೈಕ್ಷಣಿಕ ಪ್ರಗತಿಗೆ ಪೂರಕವಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಡಾ ಸಾಮಥ್ಯವನ್ನು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.

ಡಿಡಿಪಿಯು ಕೆ.ಜಿ. ಗುರುಸ್ವಾಮಿ, ಲಕ್ಷ್ಮಿ ಜನಾರ್ಧನ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಸರ್ಕಾರಿ ನೌಕರರ ಪರಿಷತ್‌ ಸದಸ್ಯ ನಾಗೇಶ್, ಪದವಿಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕ ವಿಜಯ್‍ಕುಮಾರ್, ಪ್ರಾಂಶುಪಾಲರ ಸಂಘದ ಅಧ್ಯಕ್ಷ ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.