ADVERTISEMENT

ಶ್ರೀರಂಗಪಟ್ಟಣ ದಸರಾ ಆರಂಭ: ಜಂಬೂ ಸವಾರಿಗೆ ಚಾಲನೆ ನೀಡಿದ ಎಸ್‌.ಎಂ.ಕೃಷ್ಣ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 13:23 IST
Last Updated 3 ಅಕ್ಟೋಬರ್ 2019, 13:23 IST
ಶ್ರೀರಂಗಪಟ್ಟಣ ದಸರಾ ಅಂಗವಾಗಿ ಗುರುವಾರ ಕಿರಂಗೂರು ಬಳಿಯ ಬನ್ನಿ ಮಂಟಪದಿಂದ ಅಂಬಾರಿ ಹೊತ್ತು ಸಾಗಿದ ಜಂಬೂಸವಾರಿಗೆ ಸಾವಿರಾರು ಜನರು ಸಾಕ್ಷಿಯಾದರು
ಶ್ರೀರಂಗಪಟ್ಟಣ ದಸರಾ ಅಂಗವಾಗಿ ಗುರುವಾರ ಕಿರಂಗೂರು ಬಳಿಯ ಬನ್ನಿ ಮಂಟಪದಿಂದ ಅಂಬಾರಿ ಹೊತ್ತು ಸಾಗಿದ ಜಂಬೂಸವಾರಿಗೆ ಸಾವಿರಾರು ಜನರು ಸಾಕ್ಷಿಯಾದರು   

ಶ್ರೀರಂಗಪಟ್ಟಣ: ದ್ವೀಪ ನಾಡು, ಪಾರಂಪರಿಕ ನಗರಿ ಶ್ರೀರಂಗಪಟ್ಟಣದಲ್ಲಿ ಮೂರು ದಿನಗಳ ದಸರಾ ಉತ್ಸವಕ್ಕೆ ಗುರುವಾರ ವಿಧ್ಯುಕ್ತ ಚಾಲನೆ ದೊರೆಯಿತು. ಬನ್ನಿ ಮಂಟಪದ ಬಳಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಬಿಜೆಪಿಯ ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದರು.

ಅಂಬಾರಿ ಹೊತ್ತ ಆನೆ ಅಭಿಮನ್ಯು ರಾಜ ಗಾಂಭೀರ್ಯದಿಂದ ಮುಂದೆ ಸಾಗಿದರೆ ವಿಜಯ ಮತ್ತು ಕಾವೇರಿ ಜತೆಯಲ್ಲಿ ಹೆಜ್ಜೆ ಹಾಕಿದವು. ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಅಶೋಕ್‌ ಬನ್ನಿ ಪೂಜೆ ನೆರವೇರಿಸಿದರು. ಡಾ.ಭಾನುಪ್ರಕಾಶ್‌ ಶರ್ಮಾ ನೇತೃತ್ವದ ವೈದಿಕರ ತಂಡ ಕೂಷ್ಮಾಂಡ ಛೇದನ, ಕದಳಿ ಪೂಜೆ, ಶಮೀ ಪೂಜೆ ಹಾಗೂ ಇತರ ವಿಧಿ, ವಿಧಾನಗಳನ್ನು ನೆರವೇರಿಸಿತು.

ಬನ್ನಿ ಮಂಟಪದಿಂದ ಕಿರಂಗೂರು, ಬಾಬುರಾಯನಕೊಪ್ಪಲು, ಕುವೆಂಪು ವೃತ್ತ, ಪುರಸಭೆ ವೃತ್ತ, ರಾಜ ಬೀದಿ, ಅಂಚೆ ಕಚೇರಿ ವೃತ್ತದ ಮೂಲಕ ಪಟ್ಟಣದವರೆಗೆ ಸುಮಾರು 4 ಕಿ.ಮೀ.ವರೆಗೆ ಜಂಬೂ ಸವಾರಿ ಸಾಗಿತು. ದಾರಿಯುದ್ದಕ್ಕೂ ಜನರು ಉತ್ಸವವನ್ನು ಕಣ್ತುಂಬಿಕೊಂಡರು. ವಿವಿಧ ಇಲಾಖೆಗಳ 20ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು, ಡೊಳ್ಳು, ವೀರಗಾಸೆ, ನಂದಿ ಧ್ವಜ, ಪಟದ ಕುಣಿತ, ಹುಲಿ ವೇಶ, ಚಂಡೆ, ಗೊರವರ ಕುಣಿತ, ಮರಗಾಲು ಇತರ ಜಾನಪದ ಕಲಾ ತಂಡಗಳು ಉತ್ಸವಕ್ಕೆ ಮೆರಗು ನೀಡಿದವು.

ADVERTISEMENT

ಕಿರಂಗೂರು ವೃತ್ತ, ಕುವೆಂಪು ವೃತ್ತ, ದೊಡ್ಡ ಮಸೀದಿ, ಪೊಲೀಸ್‌ ಠಾಣೆ ವೃತ್ತಗಳಲ್ಲಿ ಜನರು ದಸರಾ ವೀಕ್ಷಿಸಲು ಆಸನ ವ್ಯವಸ್ಥೆ ಮಾಡಲಾಗಿತ್ತು. ಬನ್ನಿ ಮಂಪಟದ ಬಳಿ ಸಹಸ್ರಾರು ಜನ ಸೇರಿದ್ದರು. ಸಂಜೆ ವೇಳೆಗೆ ಉತ್ಸವ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನ ತಲುಪಿತು. ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ್‌, ಎಸ್ಪಿ ಪರಶುರಾಂ, ಎಸಿ ಶೈಲಜಾ ಇದ್ದರು.

ಶಾಸಕರು, ಸಂಸದೆ ಗೈರು: ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿ ಜೆಡಿಎಸ್‌ನ ಎಲ್ಲಾ ಶಾಸಕರು ಉತ್ಸವಕ್ಕೆ ಗೈರು ಹಾಜರಾಗಿದ್ದರು. ಸಂಸದೆ ಎ.ಸುಮಲತಾ ಕೂಡ ಪಾಲ್ಗೊಳ್ಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.