ADVERTISEMENT

415ನೇ ಶ್ರೀರಂಗಪಟ್ಟಣ ದಸರಾ: ಜಂಬೂಸವಾರಿಗೆ ಅದ್ಧೂರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 12:48 IST
Last Updated 25 ಸೆಪ್ಟೆಂಬರ್ 2025, 12:48 IST
   

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): 415ನೇ ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮಕ್ಕೆ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರಿಂದ ಅದ್ಧೂರಿ ಚಾಲನೆ ಸಿಕ್ಕಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಶ್ರೀರಂಗಪಟ್ಟಣ ದಸರಾ ಅಂಗವಾಗಿ ಜಂಬೂ ಸವಾರಿಯಲ್ಲಿ ವಿರಾಜಮಾನಳಾಗಿದ್ದ ಚಾಮುಂಡೇಶ್ವರಿ ದೇವಿಗೆ ಗಣ್ಯರು ಪುಷ್ಪ ನಮನ ಸಲ್ಲಿಸಿ, ಚಾಲನೆ ನೀಡಿದರು.

ಕಣ್ಮನ ಸೆಳೆದ ಮೆರವಣಿಗೆ

ಜಂಬೂ ಸವಾರಿ ಮೆರವಣಿಗೆಯಲ್ಲಿ ಪೂಜಾಕುಣಿತ, ತಮಟೆ, ನಗಾರಿ, ಪಟ್ಟಕುಣಿತ, ಹುಲಿವೇಷ, ವೀರಗಾಸೆ, ವೀರ ಭದ್ರಕುಣಿತ, ಕಾಳಿ ಕುಣಿತ, ಕಂಸಾಳೆ, ವೀರ ಮಕ್ಕಳ ಕುಣಿತ, ಒನಕೆ ಕುಣಿತ, ಕೋಲಾಟ, ಕರಗಿದ ಕೋಲಾಟ, ಗೊಂಬೆ ಕುಣಿತ, ಡೊಳ್ಳು ಕುಣಿತ, ಬೆಂಕಿ ಭರಾಟೆ, ದೊಣ್ಣೆ ವರಸೆ, ಸೋಮನ ಕುಣಿತ, ಬೇಡರ ವೇಷ, ಹಾಲಕ್ಕಿ ಸುಗ್ಗಿ ಕುಣಿತ, ಗಾರುಡಿಗೊಂಬೆ, ಚಿಲಿಪಿಲಿಗೋಬೆ, ನಾಸಿಕ್ ಡೊಲಾಟಗಳು ನೋಡುಗರ ಗಮನ ಸೆಳೆದವು.

ADVERTISEMENT

ಸ್ತಬ್ಧ ಚಿತ್ರಗಳು

ತೋಟಗಾರಿಕೆ ಇಲಾಖೆಯ ಸ್ತಬ್ಧ ಚಿತ್ರಗಳು, ಕೃಷಿ ಇಲಾಖೆಯ ಸ್ತಬ್ಧಚಿತ್ರ, ಭಾರತೀಯ ಬೌದ್ಧ ಮಹಾಸಭಾ, ಕೃಷಿ ಇಲಾಖೆಯ ಸ್ತಬ್ಧಚಿತ್ರ, ಶಿಕ್ಷಣ ಇಲಾಖೆಯ ಸ್ತಬ್ಧ ಚಿತ್ರ, ರೇಷ್ಮೆ ಇಲಾಖೆಯ ಸ್ತಬ್ಧ ಚಿತ್ರ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆಗಳ ಸ್ತಬ್ಧ ಚಿತ್ರ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳ ಮಾರಾಟ ನಿಷೇಧ ಮತ್ತು ಅಪರಾಧ, ಅರಣ್ಯ ಇಲಾಖೆಯ ಸ್ತಬ್ಧ ಚಿತ್ರಗಳು ನೆರೆದಿದ್ದ ಸಾರ್ವಜನಿಕರ ಚಿತ್ತವನ್ನು ತನ್ನತ್ತ ಸೆಳೆದವು.

ನಾಡದೇವತೆ ಚಾಮುಂಡೇಶ್ವರಿ ಹೊತ್ತ ಅಂಬಾರಿಗೆ ಪೊಲೀಸ್ ಬ್ಯಾಂಡ್ ವತಿಯಿಂದ ವಿಶೇಷ ಗೌರವ ಸಲ್ಲಿಸಲಾಯಿತು.

ಶ್ರೀರಂಗಪಟ್ಟಣ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್, ಚಲುವರಾಯಸ್ವಾಮಿ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿ ಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿಗಳಾದ ಶಿವಮೂರ್ತಿ, ಶ್ರೀನಿವಾಸ್, ಶ್ರೀರಂಗಪಟ್ಟಣ ತಹಶೀಲ್ದಾರ್ ಚೇತನ ಯಾದವ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.