ಶ್ರೀರಂಗಪಟ್ಟಣದಲ್ಲಿ ಗುರುವಾರ ದಸರಾ ಮಹೋತ್ಸವದ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು.
ಶ್ರೀರಂಗಪಟ್ಟಣ: ‘ಈ ಶ್ರೀರಂಗಪಟ್ಟಣ ಮೈಸೂರು ಅರಸರ ಮೊದಲ ರಾಜಧಾನಿ ಎಂಬುದು ಮತ್ತು ಮೈಸೂರಿಗಿಂತಲೂ ಮೊದಲು ಶ್ರೀರಂಗಪಟ್ಟಣದಲ್ಲಿ ನಾಡಹಬ್ಬ ದಸರಾ ನಡೆಸಲಾಗುತಿತ್ತು ಎಂಬುದು ನಮ್ಮೆಲ್ಲರ ಹೆಮ್ಮೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಭಿಪ್ರಾಯಪಟ್ಟರು.
ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದ ಶ್ರೀರಂಗ ವೇದಿಕೆಯಲ್ಲಿ ದಸರಾ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಮೈಸೂರು ಮತ್ತು ಮಂಡ್ಯ ಒಂದೇ ಜಿಲ್ಲೆಯಗಿತ್ತು. ಅಭಿವೃದ್ಧಿಯ ಉದ್ದೇಶದಿಂದ ಮಂಡ್ಯವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಲಾಯಿತು ಎಂದು ತಿಳಿಸಿದರು.
‘ಕಾವೇರಿ ಆರತಿ’ಯನ್ನು ಸೆ.26ರಿಂದ 30ರವರೆಗೆ ಸಾಂಕೇತಿಕವಾಗಿ ನಡೆಸಲಾಗುತ್ತಿದೆ. ಕಾವೇರಿ ಆರತಿ ಸಮಾರಂಭಕ್ಕೆ ಆಗಮಿಸಲು ಕಾವೇರಿ ನೀರಾವರಿ ನಿಗಮದಿಂದ ಮಂಡ್ಯ, ಪಾಂಡವಪುರ ಮತ್ತು ಶ್ರೀರಂಗಪಟ್ಟಣದ ಸ್ಥಳೀಯರಿಗಾಗಿ ಸೆ.26ರಂದು ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಸೆ.28ರಂದು ಕೆ.ಆರ್. ಪೇಟೆ, ನಾಗಮಂಗಲ ಮತ್ತು ಸೆ.29ರಂದು ಮದ್ದೂರು, ಸೆ.30ರಂದು ಮಳವಳ್ಳಿಯ ಸಾರ್ವಜನಿಕರಿಗಾಗಿ ಕಾವೇರಿ ಆರತಿಗಾಗಿ ಬಸ್ ಅನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, 415ನೇ ಶ್ರೀರಂಗಪಟ್ಟಣ ದಸರಾವನ್ನು ಇಂದು ಆಚರಿಸಿದ್ದು, ಶ್ರೀರಂಗಪಟ್ಟಣ ದಸರಾ ಪ್ರಾರಂಭದಿಂದ ಇಲ್ಲಿಯವರೆಗೂ ಯಾವುದೇ ವ್ಯತ್ಯಾಸವಿಲ್ಲದ ರೀತಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಮಾತನಾಡಿ, ಹಬ್ಬದವೆಂಬುದು ಕುಟುಂಬ, ಸಮಾಜ, ಸಮೂಹ ಮತ್ತು ರಾಷ್ಟ್ರವನ್ನು ಒಗ್ಗೂಡಿಸುವ ದಿನವಾಗಿದ್ದು, ಅದರಲ್ಲಿ ದಸರಾ ಎಂಬುದು ರಾಜ್ಯದ ಸಂಸ್ಕೃತಿ ಮತ್ತು ಅಚರಣೆಯನ್ನು ಸಾರಿ ಹೇಳುವಂಥದ್ದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.