
ಶ್ರೀರಂಗಪಟ್ಟಣ: ತಾಲ್ಲೂಕಿನ ಕಿರಂಗೂರು– ಬಾಬುರಾಯನಕೊಪ್ಪಲು ಸಂಪರ್ಕ ರಸ್ತೆಯ ಪಕ್ಕದಲ್ಲಿ ರಾಶಿಗಟ್ಟಲೆ ಕಸದ ಗುಡ್ಡೆ ಬಿದ್ದಿದ್ದು ಸ್ಥಳೀಯ ಗ್ರಾಮ ಪಂಚಾಯಿತಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್ಚು ಜನ ದಟ್ಟಣೆ ಇರುವ ರಸ್ತೆಗೆ ಹೊಂದಿಕೊಂಡಂತೆ ಅಪಾರ ಪ್ರಮಾಣದ ತ್ಯಾಜ್ಯವನ್ನು ತಂದು ಸುರಿಯಲಾಗಿದೆ. ಮನೆಗಳು ಮಾತ್ರವಲ್ಲದೆ ಅಂಗಡಿ ಮತ್ತು ಹೋಟೆಲ್‌ಗಳ ತ್ಯಾಜ್ಯವನ್ನೂ ಇಲ್ಲಿ ಹಾಕಲಾಗುತ್ತಿದೆ. ‘ಕಸ ಸಂಗ್ರಹಕ್ಕೆ ತೊಟ್ಟಿ ಇಟ್ಟಿಲ್ಲದ ಕಾರಣ ತ್ಯಾಜ್ಯವನ್ನು ನಾಯಿ, ಹಂದಿ, ಕೋಳಿಗಳು ಕೆದಕಿ ಮತ್ತಷ್ಟು ಚೆಲ್ಲಾಡುವಂತೆ ಮಾಡುತ್ತಿವೆ. ಕಳೆದ ಒಂದು ತಿಂಗಳಿನಿಂದ ಕಸದ ಗುಡ್ಡೆ ಹಾಗೇ ಬಿದ್ದಿದ್ದು ಈ ಮಾರ್ಗದಲ್ಲಿ ಓಡಾಡಿದರೆ ಗಬ್ಬು ವಾಸನೆ ಮೂಗಿಗೆ ಬಡಿಯುತ್ತಿದೆ. ರಸ್ತೆ ಪಕ್ಕದ ಮನೆಗಳಿಗೆ ಕಸ ತೂರಿಕೊಂಡು ಬರುತ್ತಿದೆ’ ಎಂದು ಸ್ಥಳೀಯ ಮುಖಂಡ ಫಿಲಿಫ್ ಸಮಸ್ಯೆ ತೋಡಿಕೊಂಡಿದ್ದಾರೆ.
‘ಕಿರಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾರತಿ ಚಿತ್ರಮಂದಿರದ ಎದುರು, ಬೆಂಗಳೂರು– ಮೈಸೂರು ಹೆದ್ದಾರಿ ಪಕ್ಕದಲ್ಲಿ ಕೂಡ ಪ್ಲಾಸ್ಟಿಕ್ ಇತರ ಕಸದ ರಾಶಿ ಬಿದ್ದಿದೆ. ತ್ಯಾಜ್ಯವನ್ನು ಸಕಾಲಕ್ಕೆ ವಿಲೇವಾರಿ ಮಾಡದೆ ಕಸದ ಗುಡ್ಡೆಗೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಇದರಿಂದ ಆಸುಪಾಸಿನ ಮನೆಗಳಿಗೆ ಕೆಟ್ಟ ಹೊಗೆ ವ್ಯಾಪಿಸುತ್ತಿದ್ದು ಜನರು ಉಸಿರಾಟದ ಸಮಸ್ಯೆ ಅನುಭವಿಸುವ ಸ್ಥಿತಿ ಬಂದಿದೆ. ಕಸ ವಿಲೇವಾರಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಪ್ರಜ್ಞಾವಂತರ ವೇದಿಕೆ ಸಂಚಾಲಕ ಹಾಗೂ ವಕೀಲ ಸಿ.ಎಸ್. ವೆಂಕಟೇಶ್ ಒತ್ತಾಯಿಸಿದ್ದಾರೆ.
‘ಕಿರಂಗೂರು ಗ್ರಾ.ಪಂ.ನ ತ್ಯಾಜ್ಯ ವಿಲೇವಾರಿ ವಾಹನ ಹಲವು ದಿನಗಳಿಂದ ಕೆಟ್ಟು ನಿಂತಿದೆ. ಇದರಿಂದ ತ್ಯಾಜ್ಯ ವಿಲೇವಾರಿ ಮಾಡಲು ಸಮಸ್ಯೆಯಾಗಿದೆ. ಒಂದೆರಡು ದಿನಗಳಲ್ಲಿ ವಾಹನವನ್ನು ರಿಪೇರಿ ಮಾಡಿಸಿ ಕಸದ ಗುಡ್ಡೆಗಳನ್ನು ವಿಲೇವಾರಿ ಮಾಡಲಾಗುವುದು’ ಎಂದು ಕಿರಂಗೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗಂಗಾಧರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.