ADVERTISEMENT

ಶ್ರೀರಂಗಪಟ್ಟಣ: ಹಕ್ಕಿಪಿಕ್ಕಿ ಜನರ ಬಡಾವಣೆ ಅಭಿವೃದ್ಧಿಗೆ ಕ್ರಮ ವಹಿಸಿ– ಪಲ್ಲವಿ

ಚನ್ನಹಳ್ಳಿ ಬೋರೆಯಲ್ಲಿರುವ ಕಾಲೊನಿಗೆಭೇಟಿ: ಜಿ. ಪಲ್ಲವಿ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:04 IST
Last Updated 27 ಫೆಬ್ರುವರಿ 2026, 7:04 IST
ಶ್ರೀರಂಗಪಟ್ಟಣ ತಾಲ್ಲೂಕಿನ ಚನ್ನಹಳ್ಳಿ ಬೋರೆ ಬಳಿಯ ಹಕ್ಕಿಪಿಕ್ಕಿ ಜನರ ಕಾಲೊನಿಗೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಬುಧವಾರ ಸಂಜೆ ಭೇಟಿ ನೀಡಿ ಅಹವಾಲು ಆಲಿಸಿದರು. ತಹಶೀಲ್ದಾರ್‌ ಚೇತನಾ ಯಾದವ್, ತಾ.ಪಂ. ಇಒ ಚಂದ್ರ ಪಾಲ್ಗೊಂಡಿದ್ದರು
ಶ್ರೀರಂಗಪಟ್ಟಣ ತಾಲ್ಲೂಕಿನ ಚನ್ನಹಳ್ಳಿ ಬೋರೆ ಬಳಿಯ ಹಕ್ಕಿಪಿಕ್ಕಿ ಜನರ ಕಾಲೊನಿಗೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಬುಧವಾರ ಸಂಜೆ ಭೇಟಿ ನೀಡಿ ಅಹವಾಲು ಆಲಿಸಿದರು. ತಹಶೀಲ್ದಾರ್‌ ಚೇತನಾ ಯಾದವ್, ತಾ.ಪಂ. ಇಒ ಚಂದ್ರ ಪಾಲ್ಗೊಂಡಿದ್ದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಚನ್ನಹಳ್ಳಿ ಬೋರೆ ಮತ್ತು ಗಾಮನಹಳ್ಳಿ ಬಳಿ ನೆಲೆ ನಿಂತಿರುವ ಅಲೆಮಾರಿ ಹಕ್ಕಿಪಿಕ್ಕಿ ಜನರಿಗೆ ವಸತಿ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸೌಲಭ್ಯ ಕಲ್ಪಿಸಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಮಹದೇವಪುರ ಗ್ರಾ.ಪಂ. ವ್ಯಾಪ್ತಿಯ ಚನ್ನಹಳ್ಳಿ ಬೋರೆಯಲ್ಲಿರುವ ಹಕ್ಕಿಪಿಕ್ಕಿ ಜನರ ಕಾಲೊನಿಗೆ ಬುಧವಾರ ಭೇಟಿ ನೀಡಿದರು. ಚನ್ನಹಳ್ಳಿ ಬೋರೆ ಬಳಿ ಸ.ನಂ. 342ರಲ್ಲಿರುವ ಎರಡು ಎಕರೆ ಸರ್ಕಾರಿ ಜಾಗದಲ್ಲಿ 34 ಮಂದಿಗೆ ನಿವೇಶನ ನೀಡಲಾಗಿದೆ. ಇನ್ನೂ 11 ಮಂದಿಗೆ ನಿವೇಶನ ಕೊಟ್ಟಿಲ್ಲ. ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಿಲ್ಲ. ರಸ್ತೆ, ಚರಂಡಿ, ವಿದ್ಯುತ್‌ ಸಂಪರ್ಕ ಇಲ್ಲ. ಹಾವು ಹಲ್ಲಿಗಳು ಹರಿದಾಡುವ ಸ್ಥಳದಲ್ಲಿ ಐದಾರು ವರ್ಷಗಳಿಂದ ಭಯದಿಂದ ವಾಸ ಮಾಡುತ್ತಿದ್ದೇವೆ ಎಂದು ಅಲೆಮಾರಿ ಜನರು ಸಮಸ್ಯೆ ತೋಡಿಕೊಂಡರು.

ಅಹವಾಲು ಆಲಿಸಿದ ಪಲ್ಲವಿ, ನಿವೇಶನ ಹಂಚಿಕೆ ಮಾಡಿರುವ 34 ಮಂದಿಗೆ ಮನೆ ಕಟ್ಟಿಕೊಳ್ಳಲು ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಅನುದಾನ ಕೊಡಿಸಬೇಕು. ನಿವೇಶನ ರಹಿತ ಇತರ 11 ಮಂದಿ ಅರ್ಹರಿಂದ ದಾಖಲೆಗಳನ್ನು ಪಡೆದು ನಿವೇಶನ ಮಂಜೂರು ಮಾಡಬೇಕು. ಬಡಾವಣೆ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಲೆಮಾರಿ ಜನಾಂಗದ ಎಲ್ಲ ಮಕ್ಕಳನ್ನೂ ಶಾಲೆಗೆ ಸೇರಿಸಬೇಕು ಎಂದು ತಹಶೀಲ್ದಾರ್‌ ಚೇತನಾ ಯಾದವ್ ಅವರಿಗೆ ತಿಳಿಸಿದರು.

ADVERTISEMENT

ತಾಲ್ಲೂಕಿನ ಗಾಮನಹಳ್ಳಿ ಸ.ನಂ.667ರಲ್ಲಿ ಅಲೆಮಾರಿ ಜನರಿಗೆ 16 ಗುಂಟೆ ಜಾಗ ನೀಡಿದ್ದು, 11 ಮಂದಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಈ ಪೈಕಿ 9 ಕುಟುಂಬಗಳಿಗೆ ವಸತಿ ಯೋಜನೆಯಡಿ ಮನೆ ಕಟ್ಟಿಸಿಕೊಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ಮಾಹಿತಿ ನೀಡಿದರು.

ಚನ್ನಹಳ್ಳಿ ಬೋರೆ ಮತ್ತು ಗಾಮನಹಳ್ಳಿ ಬಳಿ ಇರುವ ಅಲೆಮಾರಿ ಜನರಿಗೆ ಅವರ ವೃತ್ತಿ ಕೌಶಲಕ್ಕೆ ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಸಹಾಯ ಧನ ಮತ್ತು ಸಾಲ ಸೌಲಭ್ಯ ಕಲ್ಪಿಸಲಾಗುವುದು. ಜೀವನ ಮಟ್ಟ ಸುಧಾರಣೆ ಎಲ್ಲ ನೆರವು ನೀಡಲಾಗುವುದು ಎಂದು ಜಿ. ಪಲ್ಲವಿ ಭರವಸೆ ನೀಡಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಚಂದ್ರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ ಕೆ.ಎಸ್‌, ಮಹದೇವಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಾಗೇಂದ್ರ, ಮಂಜುನಾಥ್ ಇದ್ದರು.

ನಿವೇಶನ ಹೊಂದಿರುವವರಿಗೆ ಮನೆ ನಿರ್ಮಿಸಿಕೊಡಲು ಸೂಚನೆ ನಿವೇಶನ ಇಲ್ಲದಿರುವವರಿಗೆ ಮಂಜೂರು ಮಾಡಲು ತಾಕೀತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.