
ಶ್ರೀರಂಗಪಟ್ಟಣ: ನ್ಯಾಯಾಲಯದಲ್ಲಿ ಪ್ರಕರಣ ವಿಚಾಣೆಯ ಹಂತದಲ್ಲಿದ್ದರೂ ತಾಲ್ಲೂಕಿನ ಕಿರಂಗೂರು ಗ್ರಾಮದ ಮನೆಯೊಂದಕ್ಕೆ ಮುಜರಾಯಿ ಹಾಗೂ ಪೊಲೀಸ್ ಅಧಿಕಾರಿಗಳು ಬೀಗ ಹಾಕಿ ಮನೆಯಲ್ಲಿದ್ದ ನಿವಾಸಿಗಳನ್ನು ಹೊರಗೆ ಹಾಕಿದ್ದಾರೆ ಎಂದು ಆರೋಪಿಸಿ ಕುಟುಂಬದ ಸದಸ್ಯರು ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರ ಜತೆಗೂಡಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಅಂಬೇಡ್ಕರ್ ವೃತ್ತ, ಮಿನಿ ವಿಧಾನಸೌಧ ಮತ್ತು ಟೌನ್ ಪೊಲೀಸ್ ಠಾಣೆ ಎದುರು ಅರ್ಧ ದಿನ ಸರಣಿ ಪ್ರತಿಭಟನೆ ನಡೆಸಿದರು.
ಮುಜರಾಯಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು. ಕುಟುಂಬ ಸದಸ್ಯರನ್ನು ಮನೆಯಿಂದ ಆಚೆ ಕಳುಹಿಸುವಂತೆ ನೀಡಿರುವ ಜಿಲ್ಲಾಧಿಕಾರಿ ಅವರ ಆದೇಶದ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಕಿರಂಗೂರು ಗ್ರಾಮದ ಶ್ರೀರಾಮ ದೇವರ ದೇವಾಲಯಕ್ಕೆ ಹೊಂದಿಕೊಂಡ ಮನೆಯಲ್ಲಿ ಕುಟುಂಬವೊಂದು ವಾಸ ಮಾಡುತ್ತಿರುವ ಕುರಿತ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ. ಈ ಹಂತದಲ್ಲಿ ಮನೆಯ ನಿವಾಸಿಗಳನ್ನು ಬೀದಿಗೆ ತಳ್ಳಿರುವ ಅಧಿಕಾರಿಗಳು ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.
‘ಕಿರಂಗೂರು ಗ್ರಾಮದ ಶ್ರೀರಾಮ ಮಂದಿರವನ್ನು ದಿವಂಗತ ಈರೇಗೌಡ ಅವರ ವಂಶಸ್ಥರು ಹಲವು ದಶಕಗಳ ಹಿಂದೆ ನಿರ್ಮಿಸಿ ಕಾಲ ಕಾಲಕ್ಕೆ ಅಭಿವೃದ್ಧಿಯನ್ನೂ ಮಾಡಿದ್ದಾರೆ. ನಿರ್ವಹಣೆಯ ಕಾರಣಕ್ಕೆ ದೇವಾಲಯವನ್ನು ಮುಜರಾಯಿ ಇಲಾಖೆ ತನ್ನ ಸುಪರ್ದಿಗೆ ಪಡೆದಿದೆ. ಇದೇ ದೇವಾಲಯಕ್ಕೆ ಹೊಂದಿಕೊಂಡಿರುವ ಮನೆಯಲ್ಲಿ ಈರೇಗೌಡ ಅವರ ಮಕ್ಕಳು ವಾಸ ಮಾಡುತ್ತಿದ್ದು, ದೂರೊಂದರ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಿ ಕುಟುಂಬ ಸದಸ್ಯರನ್ನು ಅಧಿಕಾರಿಗಳು ಬೀದಿಗೆ ತಳ್ಳಿದ್ದಾರೆ. ಸದರಿ ಮನೆಯ ವಾರಸುದಾರಿಕೆ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿ ಇರುವಾಗ ಅಧಿಕಾರಿಗಳ ಈ ಕ್ರಮ ಎಷ್ಟು ಸರಿ’ ಎಂದು ರೈತ ನಾಯಕ ಕೆ.ಎಸ್. ನಂಜುಂಡೇಗೌಡ ಪ್ರಶ್ನಿಸಿದರು.
‘ಹಲವು ದಶಕಗಳಿಂದ ಈರೇಗೌಡ ಅವರ ಕುಟುಂಬ ದೇವಾಲಯಕ್ಕೆ ಹೊಂದಿಕೊಂಡ ಮನೆಯಲ್ಲಿ ವಾಸ ಮಾಡುತ್ತಿದ್ದರೂ ವಾಸ್ತವಾಂಶ ತಿಳಿಯದೆ ಮಂಡ್ಯ ಜಿಲ್ಲಾಧಿಕಾರಿ ಪ್ರಭಾವಕ್ಕೆ ಮಣಿದು ಕುಟುಂಬವನ್ನು ಖಾಲಿ ಮಾಡಿಸುವ ಆದೇಶ ಮಾಡಿದ್ದಾರೆ. ಈ ಅನ್ಯಾಯ ವಿರೋಧಿಸಿ ಮೂರು ದಿನಗಳಿಂದ ಚಳವಳಿ ನಡೆಯುತ್ತಿದ್ದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಮನೆಯ ಬೀಗ ತೆಗೆಸುವವರೆಗೆ ಚಳವಳಿ ಮುಂದುವರೆಯಲಿದೆ’ ಎಂದು ಅವರು ಎಚ್ಚರಿಸಿದರು.
ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ. ಕೃಷ್ಣೇಗೌಡ, ಮುಖಂಡರಾದ ಎಂ.ವಿ. ಕೃಷ್ಣ, ಹೊಸಹಳ್ಳಿ ಸ್ವಾಮಿ, ಮಹದೇವು, ಚಂದಗಾಲು ಶಿವಣ್ಣ, ಪುಟ್ಟದಾಸೇಗೌಡ, ಕೆಂಪೇಗೌಡ, ರವಿ, ಮೇಳಾಪುರ ಜಯರಾಮೇಗೌಡ, ರವಿಲಕ್ಷ್ಮಣ, ದೇವೀರಮ್ಮ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.