ADVERTISEMENT

ಶ್ರೀರಂಗಪಟ್ಟಣ | ಕಳಪೆ ಕಾಮಗಾರಿ ಸಹಿಸುವುದಿಲ್ಲ: ರಮೇಶ ಬಂಡಿಸಿದ್ದೇಗೌಡ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:29 IST
Last Updated 19 ಫೆಬ್ರುವರಿ 2026, 5:29 IST
ಶ್ರೀರಂಗಪಟ್ಟಣ ತಾಲ್ಲೂಕಿನ ಬಿದರಹಳ್ಳಿಹುಂಡಿ ಗ್ರಾಮದಲ್ಲಿ ಸಿದ್ದಪ್ಪಾಜಿ ದೇವಾಲಯ ನಿರ್ಮಾಣ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಬುಧವಾರ ಭೂಮಿಪೂಜೆ ನೆರವೇರಿಸಿದರು. ರಾಜ ಬೊಪ್ಪೇಗೌಡನಪುರದ ಸಿದ್ದಪ್ಪಾಜಿ ದೇವಾಲಯದ ಆಡಳಿತಾಧಿಕಾರಿ ಭರತರಾಜ ಅರಸ್ ಪಾಲ್ಗೊಂಡಿದ್ದರು
ಶ್ರೀರಂಗಪಟ್ಟಣ ತಾಲ್ಲೂಕಿನ ಬಿದರಹಳ್ಳಿಹುಂಡಿ ಗ್ರಾಮದಲ್ಲಿ ಸಿದ್ದಪ್ಪಾಜಿ ದೇವಾಲಯ ನಿರ್ಮಾಣ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಬುಧವಾರ ಭೂಮಿಪೂಜೆ ನೆರವೇರಿಸಿದರು. ರಾಜ ಬೊಪ್ಪೇಗೌಡನಪುರದ ಸಿದ್ದಪ್ಪಾಜಿ ದೇವಾಲಯದ ಆಡಳಿತಾಧಿಕಾರಿ ಭರತರಾಜ ಅರಸ್ ಪಾಲ್ಗೊಂಡಿದ್ದರು   

ಶ್ರೀರಂಗಪಟ್ಟಣ: ‘ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದಲ್ಲಿ ಕಳಪೆ ಕಂಡುಬಂದರೆ ಸಹಿಸುವುದಿಲ್ಲ’ ಎಂದು ಸೆಸ್ಕ್‌ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ಎಚ್ಚರಿಸಿದರು.

ತಾಲ್ಲೂಕಿನ ಚನ್ನಹಳ್ಳಿ ಗ್ರಾಮದ ಅಡ್ಡಹಳ್ಳಕ್ಕೆ ಸೇತುವೆ, ಬಿದರಹಳ್ಳಿಹುಂಡಿ ಗ್ರಾಮದ ಪಿಕಪ್‌ ನಾಲೆ ಅಭಿವೃದ್ಧಿ ಹಾಗೂ ಬಿದರಹಳ್ಳಿ ಸಿದ್ದಪ್ಪಾಜಿ ದೇವಾಲಯ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಕ್ಷೇತ್ರದಲ್ಲಿ ₹100 ಕೋಟಿಗೂ ಹೆಚ್ಚು ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದೀಗ ಚನ್ನಹಳ್ಳಿಯ ಅಡ್ಡಹಳ್ಳಕ್ಕೆ ₹5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಬಿದರಹಳ್ಳಿಹುಂಡಿ ಬಳಿಯ ಪಿಕಪ್‌ ನಾಲೆಯನ್ನು ₹7.5 ಕೋಟಿ ವೆಚ್ಚದಲ್ಲಿ ಆಧುನೀಕರಣ ಮಾಡಲಾಗುತ್ತಿದೆ. ಬಿದರಹಳ್ಳಿಹುಂಡಿ ಗ್ರಾಮದ ಸಿದ್ದಪ್ಪಾಜಿ ದೇವಾಲಯ ನಿರ್ಮಾಣಕ್ಕೂ ಸಾಕಷ್ಟು ಅನುದಾನ ನೀಡಲಾಗಿದೆ. ಕಾಮಗಾರಿಗಳ ಗುಣಮಟ್ಟದಲ್ಲಿ ಲೋಪ ಬಾರದಂತೆ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ADVERTISEMENT

‘ಗಾಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳ ಎಲ್ಲ ಕೆರೆ– ಕಟ್ಟೆಗಳಿಗೆ ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ ಹಾಗೂ ಮಾರಸಿಂಗನಹಳ್ಳಿ –ವಿಶ್ವೇಶ್ವರಯ್ಯ ನಾಲೆ ಏರಿ ಸಂಪರ್ಕ ರಸ್ತೆ ಅಭಿವೃದ್ಧಿ ಸೇರಿದಂತೆ ಒಟ್ಟು ₹35 ಕೋಟಿ ವೆಚ್ಚದ ಕಾಮಗಾರಿಗಳಿಗೆ ಫೆ.20ರಂದು ಚಾಲನೆ ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಉದ್ಯೋಗ ಮೇಳ: ಫೆ.21ರಂದು ಮಂಡ್ಯದಲ್ಲಿ ಸರ್ಕಾರದಿಂದ ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗಿದೆ. 50ಕ್ಕೂ ಹೆಚ್ಚು ಕಂಪನಿಗಳು ಬರುತ್ತಿದ್ದು, ಪಿಯುಸಿ, ಪದವಿ, ಎಂಜಿನಿಯರಿಂಗ್‌, ಡಿಪ್ಲೊಮಾ ಇತರ ತಾಂತ್ರಿಕ ಶಿಕ್ಷಣ ಪಡೆದವರು ಈ ಮೇಳದಲ್ಲಿ ಪಾಲ್ಗೊಂಡು ಉದ್ಯೋಗಾವಕಾಶ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ರಾಜಬೊಪ್ಪೇಗೌಡನಪುರದ ಸಿದ್ದಪ್ಪಾಜಿ ದೇವಾಲಯದ ಆಡಳಿತಾಧಿಕಾರಿ ಭರತರಾಜ ಅರಸ್‌, ಎಂಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಬಸವರಾಜು, ತಾ.ಪಂ. ಮಾಜಿ ಸದಸ್ಯರಾದ ತಮ್ಮೇಗೌಡ, ಎಸ್‌. ಕಾಳೇಗೌಡ, ದೊಡ್ಡ ಯಜಮಾನ್‌ ಶಿವಣ್ಣ, ಬಿ.ಎಂ. ನಾಗರಾಜು, ಯುವ ಕಾಂಗ್ರೆಸ್‌ ಘಟಕದ ಪ್ರಧಾನ ಕಾರ್ಯದರ್ಶಿ ಬಿ. ಶಿವಶಂಕರ್‌, ಬಾಬು ಜಗಜೀವನರಾಂ ವಿಚಾರ ವೇದಿಕೆ ಅಧ್ಯಕ್ಷ ಅರಕೆರೆ ಸಿದ್ದರಾಜು, ಗೌರವಾಧ್ಯಕ್ಷ ಕೆ.ಟಿ. ರಂಗಯ್ಯ, ಎಂ. ಶಿವಣ್ಣ, ಗುರುಮಲ್ಲಯ್ಯ, ಮಹದೇವು, ರಾಮಲಿಂಗು ಇದ್ದರು.

ಚನ್ನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖಂಡರಾದ ಮಣಿಕಂಠ, ಗೋಪಾಲ್‌, ಚೇತನ್‌ಕುಮಾರ್‌, ಕುಮಾರ್‌, ಸೋಮಣ್ಣ, ಎಂಪಿಸಿಎಸ್‌ ಅಧ್ಯಕ್ಷ ಹರೀಶ್, ಎಂಜಿನಿಯರ್‌ಗಳಾದ ಕಿಶೋರ್‌, ಲೋಹಿತ್‌, ಶಿವಕುಮಾರ್‌ ಇದ್ದರು.

‘ನೀರಿನ ಸಮಸ್ಯೆ ಬಗ್ಗೆ ಗಮನವಿರಲಿ’
‘ಬೇಸಿಗೆ ಸಮೀಪಿಸುತ್ತಿದ್ದು ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಗ್ರಾಮ ಪಂಚಾಯಿತಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಕೊಳವೆ ಬಾವಿಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಜನರಿಂದ ದೂರು ಬಂದ ತಕ್ಷಣ ಸ್ಪಂದಿಸಬೇಕು. ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಸಾರ್ವಜನಿಕರು ನನ್ನ ಗಮನಕ್ಕೆ ತರಬೇಕು’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.