ADVERTISEMENT

ಶ್ರೀರಂಗಪಟ್ಟಣ | 'ಭತ್ತದ ಬೆಲೆ, ಬೇಡಿಕೆ ಕುಸಿತಕ್ಕೆ ಕಳಪೆ ಗುಣಮಟ್ಟ ಕಾರಣ'

ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್‌. ಅಶೋಕ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:04 IST
Last Updated 19 ಅಕ್ಟೋಬರ್ 2025, 6:04 IST
<div class="paragraphs"><p>ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿಯ ರೈತ ಪಿ.ಡಿ. ತಿಮ್ಮಪ್ಪ ಅವರ ತೋಟದಲ್ಲಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ (ಎನ್‌ಎಂಎನ್‌ಎಫ್‌) ಯೋಜನೆಯಡಿ ಕೃಷಿ ಇಲಾಖೆ ಶುಕ್ರವಾರ ಏರ್ಪಡಿಸಿದ್ದ ರೈತ ಜಾಗೃತಿ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್‌. ಅಶೋಕ್‌ ಅವರನ್ನು ರೈತರು ಸನ್ಮಾನಿಸಿದರು.</p></div>

ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿಯ ರೈತ ಪಿ.ಡಿ. ತಿಮ್ಮಪ್ಪ ಅವರ ತೋಟದಲ್ಲಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ (ಎನ್‌ಎಂಎನ್‌ಎಫ್‌) ಯೋಜನೆಯಡಿ ಕೃಷಿ ಇಲಾಖೆ ಶುಕ್ರವಾರ ಏರ್ಪಡಿಸಿದ್ದ ರೈತ ಜಾಗೃತಿ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್‌. ಅಶೋಕ್‌ ಅವರನ್ನು ರೈತರು ಸನ್ಮಾನಿಸಿದರು.

   

ಶ್ರೀರಂಗಪಟ್ಟಣ: ‘ಮಿತಿ ಮೀರಿದ ರಸಗೊಬ್ಬರ ಮತ್ತು ಕೀಟನಾಶಕ ಬಳಕೆಯಿಂದ ಭತ್ತದ ಗುಣಮಟ್ಟ ಕುಸಿಯುತ್ತಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಾಜ್ಯದಲ್ಲಿ ಬೆಳೆಯುವ ಭತ್ತಕ್ಕೆ ಬೇಡಿಕೆ ಇಲ್ಲವಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್‌. ಅಶೋಕ್‌ ಹೇಳಿದರು.

ತಾಲ್ಲೂಕಿನ ಪಾಲಹಳ್ಳಿಯಲ್ಲಿ, ನೈಸರ್ಗಿಕ ಕೃಷಿಕ ಪಿ.ಡಿ. ತಿಮ್ಮಪ್ಪ ಅವರ ತೋಟದಲ್ಲಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ಕೃಷಿ ಇಲಾಖೆ ಶುಕ್ರವಾರ ಏರ್ಪಡಿಸಿದ್ದ ರೈತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ರೈತರು ಭತ್ತ ಇತರ ಬೆಳೆಗೆ ರಸಗೊಬ್ಬರ ಮತ್ತು ಪೀಡೆನಾಶಕಗಳನ್ನು ಅವೈಜ್ಞಾನಿಕ ಕ್ರಮದಲ್ಲಿ ಬಳಸುತ್ತಿದ್ದಾರೆ. ಅಮೆರಿಕಾ ಇನ್ನಿತರ ದೇಶಗಳು ನಮ್ಮ ದೇಶದ ಭತ್ತವನ್ನು ವಾಪಸ್ ಕಳುಹಿಸುತ್ತಿವೆ. ದಶಕದ ಹಿಂದೆ 17 ಕೆ.ಜಿ. ಧಾನ್ಯ ಉತ್ಪಾದನೆಗೆ ಇಲ್ಲಿ ಒಂದು ಕೆ.ಜಿ ರಸಗೊಬ್ಬರ ಬಳಸಲಾಗುತ್ತಿತ್ತು. ಈಚಿನ ವರ್ಷಗಳಲ್ಲಿ 13 ಕೆ.ಜಿ. ಧಾನ್ಯ ಉತ್ಪಾದನೆಗೆ ಒಂದು ಕೆ.ಜಿ. ರಸಗೊಬ್ಬರ ಬಳಕೆಯಾಗುತ್ತಿದೆ. 2011ರಲ್ಲಿ ಪ್ರತಿ ಎಕರೆಗೆ 25 ಕ್ವಿಂಟಲ್‌ ಭತ್ತದ ಇಳುವರಿ ಇದ್ದದ್ದು ಈಗ 18 ಕ್ವಿಂಟಲ್‌ಗೆ ಕುಸಿದಿದೆ. ಕಬ್ಬು ಬೆಳೆಯಲ್ಲಿ ಶೇ 10ರಷ್ಟು ಇಳುವರಿ ಕುಸಿತವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯುವ ಸಂಭವವಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಮಂಡ್ಯ ಜಿಲ್ಲೆಯಲ್ಲಿ ವಾರ್ಷಿಕ ₹500ಕೋಟಿ ಬೆಲೆಯ ಭತ್ತ ಮಾರಾಟವಾಗುತ್ತದೆ. ಅದೇ ಭತ್ತ ಖರೀದಿಸುವ ವ್ಯಾಪಾರಿಗಳು ₹700 ಕೋಟಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ರೈತರು ತಮ್ಮ ಉತ್ಪನ್ನಗಳಿಗೆ ತಾವೇ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು. ಮೈಸೂರಿನಲ್ಲಿ ರೈತರೇ ಕಟ್ಟಿಕೊಂಡಿರುವ ಸಹಜ ಸಮೃದ್ಧಿ ಕೃಷಿ ಸಂಸ್ಥೆ ನೂರಾರು ಕೋಟಿ ವ್ಯವಹಾರ ನಡೆಸುತ್ತಿದೆ. ಕಾರವಾರದ ಕದಂಬ ಸಂಸ್ಥೆ ಕೂಡ ಯಶಸ್ವಿಯಾಗಿ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ದ್ರಾಕ್ಷಿ ಮತ್ತು ಕಬ್ಬು ಬೆಳೆಗಾರರ ಸಂಘ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿ ಲಾಭ ಗಳಿಸುತ್ತಿದೆ. ಇಲ್ಲಿನ ರೈತರೂ ಇದೇ ಮಾರ್ಗ ಅನುಸರಿಸಬೇಕು’ ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಮೂರ್ತಿ ಮಾತನಾಡಿ, ‘ನೈಸರ್ಗಿಕ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಸಿಗುತ್ತಿದೆ. ಪರಿಸರದಲ್ಲಿ ಸಿಗುವ ಸಸ್ಯಗಳಿಂದ ಗೊಬ್ಬರ ಮತ್ತು ಪೀಡೆನಾಶಕ ಉತ್ಪಾದಿಸಿ ಬಳಸಿದರೆ ಮಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ. ಸಮಗ್ರ, ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ದತಿಗಳನ್ನು ನುಸರಿಸುವುದು ಒಳಿತು’ ಎಂದು ಹೇಳಿದರು.

ಪ್ರಗತಿಪರ ರೈತ ಮಂಜುನಾಥ್, ‘ಬೆಳೆಗಳಿಗೆ ಬೀಜಾಮೃತ ಮತ್ತು ಜೀವಾಮೃತ ಬಳಸುವುದರಿಂದ ಕಡಿಮೆ ಖರ್ಚಿನಲ್ಲಿ ನಿರೀಕ್ಷಿತ ಆದಾಯ ಗಳಿಸಬಹುದು. ಹಸಿರು ಹೊದಿಕೆ ಪದ್ಧತಿ ಹೆಚ್ಚು ಅನುಕೂಲ’ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ, ರೈತರಾದ ಪಿ.ಡಿ. ತಿಮ್ಮಪ್ಪ, ವೆಂಕಟೇಶ್, ಪಿ.ಡಿ. ಕುಮಾರ್‌ ಮಾತನಾಡಿದರು. ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕಡತನಾಳು ಬಾಲಕೃಷ್ಣ, ಕೃಷಿ ಅಧಿಕಾರಿ ಶಿಲ್ಪಾ, ಇಲ್ಯಾಸ್‌ ಅಹಮದ್‌ಖಾನ್‌, ಪೈ.ವಿಜೇಂದ್ರು, ಹರವು ದೇವೇಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.