ADVERTISEMENT

ಶ್ರೀರಂಗಪಟ್ಟಣ: ಕೊಳಚೆ ಗುಂಡಿಯಾದ ಗಜೇಂದ್ರ ಮೋಕ್ಷ ಕೊಳ!

ಗಣಂಗೂರು ನಂಜೇಗೌಡ
Published 15 ಅಕ್ಟೋಬರ್ 2025, 3:13 IST
Last Updated 15 ಅಕ್ಟೋಬರ್ 2025, 3:13 IST
ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸವಾಮಿ ದೇವಾಲಯದ ಪಕ್ಕದಲ್ಲಿರುವ ಗಜೇಂದ್ರ ಮೋಕ್ಷ ಕೊಳದಲ್ಲಿ ಕೊಳಚೆ ನೀರು ಮಡುಗಟ್ಟಿ ನಿಂತಿರುವುದು
ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸವಾಮಿ ದೇವಾಲಯದ ಪಕ್ಕದಲ್ಲಿರುವ ಗಜೇಂದ್ರ ಮೋಕ್ಷ ಕೊಳದಲ್ಲಿ ಕೊಳಚೆ ನೀರು ಮಡುಗಟ್ಟಿ ನಿಂತಿರುವುದು   

ಶ್ರೀರಂಗಪಟ್ಟಣ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯ ಎಡ ಪಾರ್ಶ್ವದಲ್ಲಿರುವ ಗಜೇಂದ್ರ ಮೋಕ್ಷ ಕೊಳ (ಕಲ್ಯಾಣಿ) ನಿರ್ವಹಣೆಯ ಕೊರತೆಯಿಂದಾಗಿ ಅಕ್ಷರಶಃ ಕೊಳಚೆ ಗುಂಡಿಯಾಗಿ ಮಾರ್ಪಟ್ಟಿದೆ.

ಈ ಕೊಳದಲ್ಲಿ ಮಂಡಿಯುದ್ದ ಮಲಿನ ನೀರು ಮಡುಗಟ್ಟಿ ನಿಂತಿದ್ದು, ಹುಳ, ಉಪ್ಪಟೆಗಳು ಹರಿದಾಡುತ್ತಿವೆ. ಪಕ್ಕದಲ್ಲಿ ನಿಂತಿರೆ ಗಬ್ಬು ವಾಸನೆ ಮೂಗಿಗೆ ಬಡಿಯುತ್ತದೆ. ಗಾಳಿ ಬೀಸಿದರೆ ದೇವಾಲಯದ ಪ್ರಾಂಗಣದವರೆಗೂ ಕೆಟ್ಟ ವಾಸನೆ ಬೀರುತ್ತಿದೆ. ದೇವಾಲಯಕ್ಕೆ ವಿವಿಧೆಡೆಗಳಿಂದ ಬರುವ ಭಕ್ತರು ಕೊಳದ ಈ ಅವ್ಯವಸ್ಥೆಗೆ ಮೂಗು ಮುರಿಯುತ್ತಿದ್ದಾರೆ. ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕೊಳದ ಪೂರ್ವ ತುದಿಯಲ್ಲಿರುವ ಗಜೇಂದ್ರ (ಆನೆ) ಮೂರ್ತಿಯ ಸುತ್ತಲೂ ಗಿಡ, ಗೆಂಟೆಗಳು ಬೆಳೆದಿವೆ. ಮೆಟ್ಟಲುಗಳ ಮೇಲೆ ಮುಳ್ಳು ಗಿಡಗಳು ಬೆಳೆದಿದ್ದು ಕಾಲಿಡಲು ಆಗದ ಸ್ಥಿತಿ ಬಂದೊದಗಿದೆ. ಕಲ್ಯಾಣಿಯ ಮೆಟ್ಟಿಲುಗಳ ಚಪ್ಪಡಿಗಳು ಹಾಗೂ ಸುತ್ತಲಿನ ಕಟ್ಟಡದ ಕಲ್ಲುಗಳು ಒಂದೊಂದಾಗಿ ಕುಸಿದು ಬೀಳುತ್ತಿವೆ.

ಶಿಲಾ ಶಾಸನ ನಿರ್ಲಕ್ಷ್ಯ:

ದೇವಾಲಯದ ಈಶಾನ್ಯ ಭಾಗದಲ್ಲಿರುವ ಕಲ್ಯಾಣಿಯ ಅಭಿವೃದ್ಧಿಗೆ ಸಂಬಂಧಿಸಿದ ಶಿಲಾ ಶಾಸನವನ್ನು ಅದರ ಮೆಟ್ಟಿಗಳು ಮೇಲೆ ಸ್ಥಾಪಿಸಲಾಗಿದ್ದು, ನಿರ್ಲಕ್ಷ್ಯಕ್ಕೆ ಒಳಗಾಗಿದೆ. ‘ದೇವರ ಸೇವೆಗಾಗಿ ಅಮರಂಬೋದು (ಬೇಡ) ಗ್ರಾಮದ ವೇಲಾಯುಧ ಮೊದಲಿಯಾರನ ಮಗ ನಲ್ಲತಂಬಿ ಮೊದಲಿ ಎಂಬಾತ ಕ್ರಿ.ಶ.1800ರಲ್ಲಿ ಈ ವೇದ ಪುಷ್ಕರಣಿಯನ್ನು ಕಟ್ಟಿಸಿದ’ ಎಂದು ಕಲ್ಯಾಣಿಯ ಪಶ್ಚಿಮ ಭಾಗದಲ್ಲಿರುವ ತಮಿಳು ಲಿಪಿಯ (ಎಪಿಗ್ರಾಫಿಯ ಕರ್ನಾಟಕ ಸಂಪುಟ–6, ಶ್ರೀ.ಪ– 19) ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಶಾಸನದ ಸುತ್ತಲೂ ಕಳೆ ಗಿಡಗಳು ಬೆಳೆದಿವೆ. ಬಿಸಿಲು, ಮಳೆ, ಗಾಳಿಗೆ ಶಾಸನ ಶಿಥಿಲಾವಸ್ಥೆ ತಲುಪುತ್ತಿದೆ.

ADVERTISEMENT

ರಥಸಪ್ತಮಿ ಆಚರಣೆಯ ಸಂದರ್ಭದಲ್ಲಿ, ಪುರಾಣದಲ್ಲಿ ಬರುವ ಗಜೇಂದ್ರ ಮೋಕ್ಷ ಪ್ರಸಂಗದ ಆಚರಣೆ ಈ ಕಲ್ಯಾಣಿಯಲ್ಲಿ ವೈಭವದಿಂದ ನಡೆಯುತ್ತದೆ. ಆ ವಿಶೇಷ ದಿನ ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಇತ್ತ ಯಾರೂ ಗಮನ ಹರಿಸುತ್ತಿಲ್ಲ ಎಂಬುದು ಸ್ಥಳೀಯರ ದೂರು.

ಶ್ರೀರಂಗನಾಥಸ್ವಾಮಿ ದೇವಾಲಯದ ಎಡ ಪಾರ್ಶ್ವದಲ್ಲಿರುವ ಕಲ್ಯಾಣಿಯ ಮೆಟ್ಟಿಲುಗಳ ಮೇಲೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಶಿಲಾ ಶಾಸನ
ಕೊಳಕ್ಕೆ ಕಾಯಕಲ್ಪ ನೀಡುವ ಸಂಬಂಧ ಶಾಸಕರ ಜತೆ ಚರ್ಚಿಸಲಾಗಿದೆ. ಮಾಸ್ಟರ್‌ ಪ್ಲಾನ್ ಕೂಡ ಸಿದ್ಧಪಡಿಸಲಾಗಿದೆ. ಅದನ್ನು ಪರಿಷ್ಕರಿಸಬೇಕು ಎಂಬ ಸಲಹೆ ಬಂದಿದೆ. ಒಂದೆರಡು ತಿಂಗಳಲ್ಲಿ ಈ ಕೊಳಕ್ಕೆ ಕಾಯಕಲ್ಪ ನೀಡುವ ಕಾರ್ಯ ಆರಂಭವಾಗಲಿದೆ’
ಉಮಾ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ
ಗಜೇಂದ್ರ ಮೋಕ್ಷ ಕೊಳ ಶ್ರೀರಂಗನಾಥಸ್ವಾಮಿ ದೇವಾಲಯದ ಅವಿಭಾಜ್ಯ ಅಂಗ. ಆದರೆ ಈ ಐತಿಹಾಸಿಕ ಮಹತ್ವದ ಕೊಳವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ತಿಂಗಳಿಗೆ ಒಮ್ಮೆಯಾದರೂ ಈ ಕೊಳವನ್ನು ಸ್ವಚ್ಛಗೊಳಿಸಬೇಕು
ಕೆ.ಎಸ್‌.ಜಯಶಂಕರ್‌, ಸಮರ್ಪಣಾ ಟ್ರಸ್ಟ್‌ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.