ADVERTISEMENT

ಶ್ರೀರಂಗಪಟ್ಟಣ: ಪಂಚಾಯಿತಿ ಅಧ್ಯಕ್ಷ ಇಲ್ಲಿ ಗ್ರಾಮ ಸೇವಕ

ಕಸ ಎತ್ತುವ, ನೀರು ತುಂಬುವ ಸಮಸ್ಯೆ ಬಗೆಹರಿಸುವ ಮಂಜುನಾಥ್‌ ನಿಸ್ವಾರ್ಥ ಸೇವೆ

ಗಣಂಗೂರು ನಂಜೇಗೌಡ
Published 26 ಮೇ 2024, 8:17 IST
Last Updated 26 ಮೇ 2024, 8:17 IST
<div class="paragraphs"><p>ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆಯಲ್ಲಿ ಕಟ್ಟಿಕೊಂಡಿದ್ದ ಚರಂಡಿಯನ್ನು ಪೌರಕಾರ್ಮಿಕ ಜತೆಗೂಡಿ ಸ್ವಚ್ಛಗೊಳಿಸುತ್ತಿರುವ ಗ್ರಾ.ಪಂ ಅಧ್ಯಕ್ಷ ಮಂಜುನಾಥ್‌</p></div>

ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆಯಲ್ಲಿ ಕಟ್ಟಿಕೊಂಡಿದ್ದ ಚರಂಡಿಯನ್ನು ಪೌರಕಾರ್ಮಿಕ ಜತೆಗೂಡಿ ಸ್ವಚ್ಛಗೊಳಿಸುತ್ತಿರುವ ಗ್ರಾ.ಪಂ ಅಧ್ಯಕ್ಷ ಮಂಜುನಾಥ್‌

   

ಶ್ರೀರಂಗಪಟ್ಟಣ: ಗ್ರಾಮದಲ್ಲಿ ನೀರಿನ ಸಮಸ್ಯೆಯಾದರೆ ಇವರೇ ನೀರುಗಂಟಿ, ಬೀದಿಯಲ್ಲಿ ಕಸ ಕಂಡು ಬಂದರೆ, ಚರಂಡಿಯಲ್ಲಿ ಹೂಳು ತುಂಬಿಕೊಂಡಿದ್ದರೆ ಇವರೇ ಪೌರ ಕಾರ್ಮಿಕ.  ಇವರು ಪೌರ ಕಾರ್ಮಿಕ, ನೀರುಗಂಟಿ ಅಲ್ಲ, ಪಂಚಾಯಿತಿ ಅಧ್ಯಕ್ಷ!

ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾದರೆ ಸಾಕು ದೊಡ್ಡ ನಾಯಕ ಎನ್ನುವಂತೆ ಓಡಾಡುವವರ ಮಧ್ಯೆ, ಅಧ್ಯಕ್ಷನಾದರೂ ಪಂಚಾಯಿತಿ ನೌಕರನಂತೆ ಕೆಲಸ ಮಾಡುತ್ತಿರುವ ತಾಲ್ಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ.ಮಂಜುನಾಥ್‌, ದಿನ ಬೆಳಗಾದರೆ ಬೀದಿ ಕಸ ಗುಡಿಸುವ, ಚರಂಡಿಯ ಕೆಸರು ಬಳಿಯುವ, ಮನೆಗಳಿಗೆ ಕುಡಿಯುವ ನೀರು ಪೂರೈಸುವ ಕಾಯಕ ಮಾಡುತ್ತಿದ್ದಾರೆ.

ADVERTISEMENT

ಮಂಜುನಾಥ್‌  ಅಧ್ಯಕ್ಷರಾಗಿ 8 ತಿಂಗಳು ಕಳೆದಿದ್ದು, ಆ ಬಳಿಕ, ‘ ಬೀದಿಯಲ್ಲಿ ಕಸ ಚೆಲ್ಲಾಡುತ್ತಿದೆ. ಚರಂಡಿ ಕಟ್ಟಿಕೊಂಡಿದೆ ’ ಎಂದು ಯಾರೊಬ್ಬರೂ ಪಂಚಾಯಿತಿ ಕಚೇರಿಗೆ ದೂರು ನೀಡಿಲ್ಲ. ಪೌರ ಕಾರ್ಮಿಕರು ಇಲ್ಲದಿದ್ದರೆ, ಮಂಜುನಾಥ್‌ ತಾವೇ ಪೊರಕೆ ಹಿಡಿದು ಕಸ ಗುಡಿಸುತ್ತಾರೆ. ಚರಂಡಿಗೆ ಇಳಿದು ಕೆಸರನ್ನೂ ಎತ್ತುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಗಿಡ ಗಂಟಿ ಬೆಳೆದಿದ್ದರೆ ಕಿತ್ತು ಹಸನು ಮಾಡುತ್ತಾರೆ. ತಾನು ಅಧ್ಯಕ್ಷನಲ್ಲ, ಸಮಾಜ ಸೇವಕ ಎಂಬ ಇವರ ಸೇವೆಗೆ ಪಕ್ಷಾತೀತವಾಗಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ.

ಎಂ.ಕೆ.ಮಂಜುನಾಥ್‌

ಅವಿವಾಹಿತರಾಗಿರುವ 53 ವರ್ಷದ ಎಂ.ಕೆ. ಮಂಜುನಾಥ್‌ ಮಂಡ್ಯಕೊಪ್ಪಲು ಕ್ಷೇತ್ರದಿಂದ ಮೂರನೇ ಬಾರಿ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಅಧ್ಯಕ್ಷ ಗಾದಿ ಸಿಕ್ಕಿದೆ. ಕೆಲಸ ಮಾಡದ ಮೈಗಳ್ಳತನದ ಮೂವರು ನೀರುಗಂಟಿಗಳನ್ನು ಮುಲಾಜಿಲ್ಲದೆ ಕೆಲಸದಿಂದ ತೆಗೆದು ಹಾಕಿ ಆ ಕೆಲಸವನ್ನು ತಾವೇ ಮಾಡುತ್ತಿದ್ದಾರೆ. ಮೂರು ಗ್ರಾಮಗಳಿಗೆ ಕೇವಲ ನಾಲ್ವರು ಪೌರಕಾರ್ಮಿಕರಿದ್ದಾರೆ.

ಹಾಗಾಗಿ ಅವರ ಜತೆಗೂಡಿ ಇವರೂ ಕಸ ಗುಡಿಸುತ್ತಾರೆ. ಇದು ಉತ್ಪ್ರೇಕ್ಷೆಯಲ್ಲ, ಸತ್ಯ.

ಅರಕೆರೆ, ಮಂಡ್ಯಕೊಪ್ಪಲು ಮತ್ತು ಚಿಂದೇಗೌಡನಕೊಪ್ಪಲು ಗ್ರಾಮಗಳು ಅರಕೆರೆ ಪಂಚಾಯಿತಿ ವ್ಯಾಪ್ತಿಗೆ ಸೇರಲಿದ್ದು, ಈ ಬಾರಿಯ ಬಿರು ಬೇಸಿಗೆಯಲ್ಲೂ ಮೂರೂ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ನೋಡಿಕೊಂಡಿದ್ದಾರೆ. ನೀರಿನ ಸಮಸ್ಯೆ ಬಗ್ಗೆ ಯಾರೇ ದೂರು ತಂದರೂ ಮಂಜುನಾಥ್‌ ತಕ್ಷಣ ಸ್ಥಳಕ್ಕೆ ಧಾವಿಸುತ್ತಾರೆ. ತಾವೇ ನೀರುಗಂಟಿ ಯ ಕೆಲಸ
ಮಾಡುತ್ತಾರೆ.

‘ಗ್ರಾ.ಪಂ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಇದು ಶಾಶ್ವತವಲ್ಲ. ಸಿಕ್ಕಿರುವ ಅವಕಾಶವನ್ನು ಜನ ಹಿತಕ್ಕೆ ಬಳಸಬೇಕು. ಗಾಂಧೀಜಿ ಆಶಯದಂತೆ ತ್ಯಾಜ್ಯಮುಕ್ತ ಪಂಚಾಯಿತಿ ಮಾಡುವುದು, ನಿವೇಶನ ರಹಿತರಿಗೆ ಸೂರು ಕಲ್ಪಿಸುವುದು ನನ್ನ ಮಹದಾಸೆ
-ಎಂ.ಕೆ. ಮಂಜುನಾಥ್‌, ಅರಕೆರೆ ಗ್ರಾ.ಪಂ ಅಧ್ಯಕ್ಷ
‘ಅಧ್ಯಕ್ಷ ಅಜಾತಶತ್ರು’
‘ಮಂಜಣ್ಣ ಕಾಂಗ್ರೆಸ್ಸಿಗ. ನಾನು ಅಪ್ಪಟ ಜೆಡಿಎಸ್‌ ಬೆಂಬಲಿಗ. ಆದರೆ, ಮಂಜಣ್ಣ ಅವರಂತೆ ಕೆಲಸ ಮಾಡುವ ಗ್ರಾಮಪಂಚಾಯಿತಿ ಅಧ್ಯಕ್ಷರನ್ನು ಇದುವರೆಗೆ ನೋಡಿಲ್ಲ. ಬೆಳಿಗ್ಗೆ 6 ಗಂಟೆ ಹೊತ್ತಿಗೆ ಪೌರಕಾರ್ಮಿಕರ ಜತೆ ತಾವೂ ಸ್ವಚ್ಛತೆ ಕಾರ್ಯದಲ್ಲಿ ತೊಡಗಿರುತ್ತಾರೆ. ಯಾರದೇ ಮನೆ, ಅಂಗಡಿ– ಮುಂಗಟ್ಟಾದರೂ ಪಕ್ಷ ಪರ ಎನ್ನದೆ ಕೆಲಸ ಮಾಡಿಸುತ್ತಾರೆ. ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ. ಲಂಚಕ್ಕೆ ಆಸೆ ಪಡುವವರಲ್ಲ. ಅರಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ವಿರೋಧಿಗಳೇ ಇಲ್ಲದ ಅಜಾತಶತ್ರು’ ಎಂದು ಜೆಡಿಎಸ್‌ ಮುಖಂಡ ಕಿಶೋರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.