
ಮಂಡ್ಯ: ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ವಿನೂತನವಾಗಿ ‘ಮಿಷನ್ 40 ಫಾರ್ 90 ಡೇಸ್’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಸದರಿ ಅಭಿಯಾನದ ಪರಿಶೀಲನಾ ಸಭೆಯನ್ನು ಜಿ.ಪಂ. ಸಿಇಒ ನಂದಿನಿ ಕೆ.ಆರ್. ನಡೆಸಿದರು.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರತಿ ವಿದ್ಯಾರ್ಥಿಯು 90 ದಿನಗಳಲ್ಲಿ ಕನಿಷ್ಠ 40 ಅಂಕಗಳನ್ನು ಪಡೆಯುವಂತೆ ಮಾಡಲು ಕ್ರಮವಹಿಸಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಫಲಿತಾಂಶ ಉತ್ತಮಗೊಳಿಸಲು ನೇಮಕ ಮಾಡಲಾಗಿರುವ 56 ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.
ಡಿಸೆಂಬರ್ 18, 19 &20ರಂದು ಜಿಲ್ಲೆಯ ಎಲ್ಲಾ ಹೈಸ್ಕೂಲ್‌ಗಳಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ 40 ಅಂಕಗಳಿಗೆ ಅಭ್ಯಾಸ ಪರೀಕ್ಷೆ ನೀಡುವಂತೆ ಸೂಚಿಸಲಾಗಿದ್ದು, ಸದರಿ ಪರೀಕ್ಷೆಯಲ್ಲಿ ಶೇ 50ಕ್ಕಿಂತ ಕಡಿಮೆ ಅಂಕ ಪಡೆದ 5,221 ವಿದ್ಯಾರ್ಥಿಗಳಿಗೆ ಹೆಚ್ಚಿನ ವಿಶೇಷ ಗಮನ ಹರಿಸಿ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಸಿ.ಎಸ್.ಆರ್. ಅನುದಾನದಡಿ ನೋಟ್ ಬುಕ್‌ಗಳನ್ನು ಪಡೆದು ಶಾಲೆಗೆ ವಿತರಿಸಲು ಪ್ರಯತ್ನಿಸಲಾಗುವುದು. ವಿವಿಧ ಇಲಾಖೆಗಳ ಮುಖ್ಯಸ್ಥರನ್ನು ಒಳಗೊಂಡ ಮೇಲ್ವಿಚಾರಣಾ ಸಮಿತಿ ರಚಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಅಭ್ಯಾಸ ಪರೀಕ್ಷೆಯಲ್ಲಿ ಕೆ.ಆರ್.ಪೇಟೆ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಶಾಲೆಗಳಲ್ಲಿ ಶೇಕಡ 50ಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದ್ದು, ಈ ತಾಲ್ಲೂಕುಗಳಲ್ಲಿ ವಿಶೇಷ ಗಮನ ಹರಿಸಿ. ಮಂಡ್ಯ ಉತ್ತರ ಮತ್ತು ದಕ್ಷಿಣ ವಲಯದಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ಶೇ 90ಕ್ಕೆ ಪ್ರಗತಿಯನ್ನು ಹೆಚ್ಚಿಸುವಂತೆ ಸಂಬಂಧಪಟ್ಟ ಬಿಇಒ ಮತ್ತು ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.
ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಲೋಕೇಶ್ ಜಿ, ಡಯಟ್ ಪ್ರಾಂಶುಪಾಲರಾದ ಯೋಗೇಶ್, ಮಧ್ಯಾಹ್ನದ ಬಿಸಿಯೂಟ ಯೋಜನೆಯ ಶಿಕ್ಷಣಾಧಿಕಾರಿ ರವಿಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸಿದ್ದರು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಮುಖ್ಯಶಿಕ್ಷಕರು ನೋಡಲ್ ಅಧಿಕಾರಿಗಳು ಮತ್ತು ಬಿಇಒಗಳಿಗೆ ವಿಶೇಷ ಬಹುಮಾನ ನೀಡಲಾಗುವುದುಕೆ.ಆರ್.ನಂದಿನಿ ಸಿಇಒ ಮಂಡ್ಯ ಜಿಲ್ಲಾ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.