ADVERTISEMENT

ಮದ್ದೂರು: ತೊರೆಶೆಟ್ಟಿಹಳ್ಳಿಯಲ್ಲಿ ಕುಡಿಯುವ ನೀರಿಗೆ ಪರದಾಟ

ಒಂದು ವಾರದಿಂದ ಹಾಹಾಕಾರ: ಪಂಪ್‌ಸೆಟ್‌ಗಳ ಮೊರೆ ಹೋದ ಗ್ರಾಮಸ್ಥರು

ಎಂ.ಆರ್.ಅಶೋಕ್ ಕುಮಾರ್
Published 5 ಏಪ್ರಿಲ್ 2025, 6:58 IST
Last Updated 5 ಏಪ್ರಿಲ್ 2025, 6:58 IST
ಮದ್ದೂರು ತಾಲ್ಲೂಕಿನ ಆತಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊರೆಶೆಟ್ಟಿಹಳ್ಳಿಯ ದಲಿತರ ಬೀದಿಯ ನಿವಾಸಿಗಳು ಕುಡಿಯುವ ನೀರಿಗಾಗಿ ಬಿಂದಿಗೆಗಳನ್ನು ಹಿಡಿದು ನಿಂತಿರುವುದು
ಮದ್ದೂರು ತಾಲ್ಲೂಕಿನ ಆತಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊರೆಶೆಟ್ಟಿಹಳ್ಳಿಯ ದಲಿತರ ಬೀದಿಯ ನಿವಾಸಿಗಳು ಕುಡಿಯುವ ನೀರಿಗಾಗಿ ಬಿಂದಿಗೆಗಳನ್ನು ಹಿಡಿದು ನಿಂತಿರುವುದು   

ಮದ್ದೂರು: ತಾಲ್ಲೂಕಿನ ತೊರೆಶೆಟ್ಟಿಹಳ್ಳಿಯಲ್ಲಿ ಒಂದು ವಾರದಿಂದ ಕುಡಿಯುವ ನೀರಿಗೆ ಕೊರತೆಯಾಗಿದ್ದು, ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತುಮಕೂರು– ಕೊಳ್ಳೇಗಾಲ ಹೆದ್ದಾರಿಯ ಬಳಿಯೇ ಇರುವ ಗ್ರಾಮದ ಸುಮಾರು ಅರ್ಧದಷ್ಟು ಜನರು ನೀರಿಗಾಗಿ ಅಲೆದಾಡುತ್ತಿದ್ದು, ಅದರಲ್ಲೂ ಪರಿಶಿಷ್ಟ ಜಾತಿಯವರು ವಾಸಿಸುವ ಬೀದಿಗಳಲ್ಲಿ ಸಮಸ್ಯೆ ತೀವ್ರವಾಗಿದೆ. ನೀರಿಗಾಗಿ ಗ್ರಾಮದ ಕೆಲವರ ಜಮೀನುಗಳಲ್ಲಿರುವ ಬೋರ್ವೆಲ್‌ಗಳ ಮೊರೆಹೋಗುತ್ತಿದ್ದಾರೆ.

‘ನಾವು ವಿದ್ಯುತ್ ಬಿಲ್ ಕಟ್ಟಬೇಕಾಗಿರುವುದರಿಂದ 2ರಿಂದ 3 ಬಿಂದಿಗೆ ಮಾತ್ರ ತೆಗೆದುಕೊಳ್ಳಿ’ ಎಂದು ಬೋರ್ವೆಲ್ ಮಾಲೀಕರು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ನಾವು ನೀರು ತರಲು ಹೋದಾಗ ಕೆಲವರು ನೀರು ಕೊಡುತ್ತಾರೆ. ಇನ್ನೂ ಕೆಲವರು ನೆಪ ಹೇಳುತ್ತಾರೆ’ ಎಂದು ದಲಿತರ ಕೇರಿಯ ವೃದ್ಧೆ ಪಾರ್ವತಮ್ಮ ಅಳಲು ತೋಡಿಕೊಂಡರು.

ADVERTISEMENT

‘ತೊರೆಶೆಟ್ಟಿಹಳ್ಳಿ ವ್ಯಾಪ್ತಿಯ ಆತಗೂರು ಗ್ರಾಮ ಪಂಚಾಯತಿ ಪಿಡಿಒ ಶಶಿಧರ್ ಅವರ ಹತ್ತಿರ ಸಮಸ್ಯೆ ಪರಿಹರಿಸಲು ಕೊರಲು ಹೋದರೆ ಕಚೇರಿಯಲ್ಲೇ ಸಿಗುವುದೇ ಇಲ್ಲ. ಅಷ್ಟೇ ಅಲ್ಲದೇ ಮೊಬೈಲ್ ಕರೆಯನ್ನೂ ಸ್ವೀಕರಿಸುವುದಿಲ್ಲ ಎಂದು ಗ್ರಾಮಸ್ಥರು ದೂರಿದರು.

‘ಗ್ರಾಮ ಪಂಚಾಯಿತಿ ಸಿಬ್ಬಂದಿ ಕೇಳಲು ಹೋದರೆ ಗ್ರಾಮದಲ್ಲಿರುವ ಎರಡು ಬೋರ್ವೆಲ್‌ಗಳಲ್ಲಿ ಒಂದು ಕೆಟ್ಟು ಹೋಗಿದೆ. ಆದರೆ ಬೋರ್ವೆಲ್‌ ಅನ್ನು ದುರಸ್ತಿಪಡಿಸುವ ಗೋಜಿಗೆ ಹೋಗಿಲ್ಲ’ ಎಂದು ಗ್ರಾಮಸ್ಥರು ದೂರುತ್ತಾರೆ.

‘ಒಂದು ವಾರದಿಂದ ಸಮಸ್ಯೆಯಾಗಿದ್ದು, ನಾಲ್ಕು ದಿನಗಳ ಹಿಂದೆ ಗ್ರಾಮದಲ್ಲಿ ಚಾಮುಂಡೇಶ್ವರಿ ಹಬ್ಬವಿದ್ದರೂ ಕುಡಿಯುವ ನೀರು ಪೂರೈಕೆಯಾಗಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳು 2 ದಿನಗಳ ಹಿಂದಷ್ಟೇ ನೀರಿನ ಟ್ಯಾಂಕರ್‌ನಲ್ಲಿ ಒಂದಷ್ಟು ನೀರು ಪೂರೈಸಿದ್ದಾರೆ.

‘ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕೂಡಲೇ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಮತ್ತೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಗ್ರಾಮದ ಮಹೇಶ್, ರಮೇಶ್, ಪಾರ್ವತಮ್ಮ, ಅಂಜನಾ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಹಿತಿ ಕೇಳಲು ಆತಗೂರು ಗ್ರಾಮ ಪಂಚಾಯಿತಿ ಪಿಡಿಒ ಶಶಿಧರ್ ಅವರನ್ನು ಸಂಪರ್ಕಿಸಲು ಹೋದರೆ ಕರೆಯನ್ನು ಸ್ವೀಕರಿಸಲಿಲ್ಲ.

‘ಬೋರ್ವೆಲ್ ದುರಸ್ತಿಪಡಿಸಿ’

‘ಒಂದು ವಾರದಿಂದ ಪರಿಶಿಷ್ಟ ಜಾತಿಯವರ ಬೀದಿಗಳಲ್ಲಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಸಂಬಂಧಪಟ್ಟ ಅಧಿಕಾರಿಗಳು ಬೋರ್‌ವೆಲ್ ಕೆಟ್ಟು ಹೋಗಿದೆ ಎಂಬ ಸಬೂಬು ಹೇಳುತ್ತಿದ್ದಾರೆಯೇ ಹೊರತು ಅದನ್ನು ದುರಸ್ತಿ ಮಾಡಿಸಿಲ್ಲ. ಕೂಡಲೇ ಮೇಲಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕು’ ಎಂದು ಪರಿಶಿಷ್ಟ ಜಾತಿಯ ಮುಖಂಡ ಮಹೇಶ್ ಆಗ್ರಹಿಸಿದರು.

ಮದ್ದೂರು ತಾಲ್ಲೂಕಿನ ಆತಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊರೆಶೆಟ್ಟಿಹಳ್ಳಿಯ ದಲಿತರ ಬೀದಿಯ ನಿವಾಸಿಗಳು ಕುಡಿಯುವ ನೀರಿಗಾಗಿ ಬಿಂದಿಗೆಗಳನ್ನು ಹಿಡಿದು ನಿಂತಿರುವುದು
ಮದ್ದೂರು ತಾಲ್ಲೂಕಿನ ಆತಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊರೆಶೆಟ್ಟಿಹಳ್ಳಿಯ ದಲಿತರ ಬೀದಿಯ ನಿವಾಸಿಗಳು ಕುಡಿಯುವ ನೀರಿಗಾಗಿ ಬಿಂದಿಗೆಗಳನ್ನು ಹಿಡಿದು ನಿಂತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.