ADVERTISEMENT

‘ಕೆಸರಕ್ಕಿ ಹಳ್ಳ’ದಿಂದ ಮುತ್ತತ್ತಿ ಜನರಿಗೆ ಸಂಕಷ್ಟ

ಎತ್ತರ ಸೇತುವೆ ನಿರ್ಮಿಸಲು ನಿವಾಸಿಗಳ ಆಗ್ರಹ

ಪ್ರಜಾವಾಣಿ ವಿಶೇಷ
Published 31 ಜುಲೈ 2024, 6:23 IST
Last Updated 31 ಜುಲೈ 2024, 6:23 IST
ಹಲಗೂರಿನಿಂದ ಮುತ್ತತ್ತಿಗೆ ತೆರಳುವ ಮಾರ್ಗ ಮಧ್ಯೆ ಇರುವ ಕೆಸರಕ್ಕಿ ಹಳ್ಳ ಕಾವೇರಿ ನದಿಯ ಹಿನ್ನೀರಿನಿಂದ ಜಲಾವೃತವಾಗಿದ್ದು, ಸಾರ್ವಜನಿಕರು ಆತಂಕದಿಂದ ಸೇತುವೆ ದಾಟುತ್ತಿರುವ ದೃಶ್ಯ.
ಹಲಗೂರಿನಿಂದ ಮುತ್ತತ್ತಿಗೆ ತೆರಳುವ ಮಾರ್ಗ ಮಧ್ಯೆ ಇರುವ ಕೆಸರಕ್ಕಿ ಹಳ್ಳ ಕಾವೇರಿ ನದಿಯ ಹಿನ್ನೀರಿನಿಂದ ಜಲಾವೃತವಾಗಿದ್ದು, ಸಾರ್ವಜನಿಕರು ಆತಂಕದಿಂದ ಸೇತುವೆ ದಾಟುತ್ತಿರುವ ದೃಶ್ಯ.   

ಮಂಡ್ಯ: ವಾಯುಪುತ್ರನು ಸೀತಾ ದೇವಿಗೆ ಮೂಗುತಿ ಎತ್ತಿಕೊಟ್ಟು ಮುತ್ತೆತ್ತರಾಯ ಎಂಬ ಬಿರುದು ಪಡೆದ ಸ್ಥಳವಾದ ‘ಮುತ್ತತ್ತಿ’ ಗ್ರಾಮಕ್ಕೆ ಹೋಗಲು ‘ಕೆಸರಕ್ಕಿ ಹಳ್ಳ’ದಿಂದ ಅಡ್ಡಿ ಉಂಟಾಗಿ ಇದನ್ನು ದಾಟಿ ಹೋಗಲು ಹರಸಾಹಸ ಪಡಬೇಕಿದೆ.

–ಹೌದು, ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರಿನಿಂದ ಸುಮಾರು 22 ಕಿ.ಮಿ. ದೂರದಲ್ಲಿ ಮುತ್ತತ್ತಿ ಗ್ರಾಮವಿದ್ದು, ಪ್ರತಿ ವರ್ಷ ಮಳೆಗಾಲದಲ್ಲಿ ತುಂಬಿ ಹರಿಯುವ ಕೆಸರಕ್ಕಿ ಹಳ್ಳ ದಾಟಿ ಹೋಗಬೇಕಾದ ಪರಿಪಾಟಲು ತಪ್ಪಿದ್ದಲ್ಲ.

ಪುರಾಣ ಇತಿಹಾಸವಷ್ಟೇ ಅಲ್ಲ, ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿಯೂ ಒಂದಾಗಿರುವ ಕಾವೇರಿ ಮತ್ತು ವನ್ಯಜೀವಿ ಮತ್ತು ಹಸಿರು ಕಾಡನ್ನು ತನ್ನ ಸುತ್ತ ಆವರಿಸಿಕೊಂಡ ‘ಮುತ್ತತ್ತಿ’ಯು ತನ್ನದೇ ಆದ ಸ್ಥಾನ ಪಡೆಯುವ ಮೂಲಕ ಜನಮಾನಸದಲ್ಲಿ ಪ್ರಖ್ಯಾತಿ ಪಡೆದಿದೆ.

ADVERTISEMENT

ಜೀವನಾವಶ್ಯಕ ಆಹಾರ ಪದಾರ್ಥಗಳನ್ನು ಖರೀದಿಸಲು ಹಲಗೂರು ಪಟ್ಟಣಕ್ಕೆ ಬರಬೇಕಾಗಿದೆ. ಆದರೆ ಕಾವೇರಿ ನದಿ ಪಾತ್ರದಲ್ಲಿ ಹೆಚ್ಚು ಮಳೆಯಾದರೆ ನದಿಯ ಹಿನ್ನೀರು ರಸ್ತೆಗೆ ಹೊಂದಿಕೊಂಡಂತಿರುವ 'ಕೆಸರಕ್ಕಿ ಹಳ್ಳ'ಕ್ಕೆ ನಿರ್ಮಿಸಿರುವ ಸೇತುವೆ ಮೇಲೆ ನೀರು ತುಂಬಿಕೊಂಡು ಗ್ರಾಮಸ್ಥರು ಹೋಗಲು ಕಷ್ಟವಾಗುತ್ತದೆ.

ಇಷ್ಟು ಸಾಲದೇ ವಸತಿ ಪ್ರದೇಶ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್, ಅರಣ್ಯ ಇಲಾಖೆಯ ಪ್ರಕೃತಿ ಶಿಬಿರಕ್ಕೆ ಜಲ ದಿಗ್ಭಬಂಧನ ಹಾಕಿದಂತಾಗಿ ಪ್ರಾಣಾಪಾಯಕ್ಕೆ ಆಹ್ವಾನ ನೀಡುತ್ತದೆ. ಇಷ್ಟೆಲ್ಲಾ ಸೊಬಗು ಬಿನ್ನಾಣಗಳನ್ನೊಳಗೊಂಡ ಊರಿಗೆ ಹೋಗಲು ಗ್ರಾಮಸ್ಥರು ಹೈರಾಣಾಗಿದ್ದರೂ ಬದಲಿ ಸೇತುವೆ ವ್ಯವಸ್ಥೆ ಕಲ್ಪಿಸಿಕೊಡುವ ಆಗ್ರಹ ಕೇಳಿ ಬರುತ್ತಿದೆ.

ಇಲ್ಲಿನ ಕಾವೇರಿ ನದಿ ತಟದಲ್ಲಿ ಪುರಾಣ ಪ್ರಸಿದ್ಧ ಅಂಜನೇಯ ಸ್ವಾಮಿ ದೇವಾಲಯವಿದ್ದು, ರಾಜ್ಯದಾದ್ಯಂತ ಅಪಾರ ಭಕ್ತ ಸಮೂಹವನ್ನು ಒಳಗೊಂಡಿದೆ. ಶ್ರಾವಣ ಮಾಸದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ, ಅದ್ಧೂರಿ ಜಾತ್ರೋತ್ಸವ ನಡೆಯುವುದು ವಿಶೇಷ. ಕಾವೇರಿ ನದಿ ದಡದಲ್ಲಿರುವ ಈ ಪ್ರಸಿದ್ದ ಪ್ರವಾಸಿ ಸ್ಥಳಕ್ಕೆ ಬರುವ ಪ್ರವಾಸಿಗರನ್ನೇ ನೆಚ್ಚಿಕೊಂಡು ನೂರಾರು ಕುಟುಂಬಗಳು ವ್ಯಾಪಾರ ಮಾಡಿ ಜೀವನ ನಡೆಸುತ್ತಿವೆ. ವ್ಯಾಪಾರಕ್ಕೂ ಕಲ್ಲು ಬೀಳುವ ಆತಂಕ ಎದುರಾಗಿದೆ.

ಪ್ರವಾಹ ಪರಿಸ್ಥಿತಿಯ ಮುನ್ನೆಚ್ಚರಿಕೆಯಿಂದಾಗಿ ಮಳವಳ್ಳಿ ತಹಶೀಲ್ದಾರ್ ಅವರ ಅದೇಶದಂತೆ ಜುಲೈ 26ರಿಂದಲೂ ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಅಂಗಡಿಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಇದರಿಂದಾಗಿ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿ ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ.

ಮಳೆಗಾಲದ ಸಂದರ್ಭದಲ್ಲಿ ಮಕ್ಕಳು ಶಾಲೆಗೆ ತೆರಳಲು ತ್ರಾಸ ಪಡುವಂತಾಗಿದೆ. ವೃದ್ಧರು, ಮಹಿಳೆಯರು ಅನಾರೋಗ್ಯಕ್ಕೆ ಸಿಲುಕಿದಾಗ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿ ಜೀವ ಭಯದಿಂದ ನೀರು ದಾಟಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದನ್ನು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ರಕ್ಷಿತ್ ಮುತ್ತತ್ತಿ ನಿವಾಸಿ
ಪ್ರತಿ ಆಗಸ್ಟ್ ತಿಂಗಳಲ್ಲಿಯೂ ಮಳೆ ಬಿದ್ದು ಕಾವೇರಿ ನದಿ ಉಕ್ಕಿ ಹರಿಯುವುದರಿಂದ ಕೆಸರಕ್ಕಿ ಹಳ್ಳ ನೀರಿನಿಂದ ತುಂಬಿಕೊಳ್ಳುತ್ತಿದೆ. ಇದರಿಂದಾಗಿ ಮಳೆಗಾಲದಲ್ಲಿ ಜನರು ಸಮಸ್ಯೆ ಎದುರಿಸಬೇಕಿದೆ. ಜನಪ್ರತಿನಿಧಿಗಳು ಸಮಸ್ಯೆ ಅರಿತು ಕೆಸರಕ್ಕಿ ಹಳ್ಳಕ್ಕೆ ಎತ್ತರದ ಸೇತುವೆ ನಿರ್ಮಿಸಬೇಕು.
-ರಕ್ಷಿತ್ ಮುತ್ತತ್ತಿ ನಿವಾಸಿ.
ಕೆಸರಕ್ಕಿ ಹಳ್ಳದ ಸೇತುವೆ ಪರಿಸ್ಥಿತಿ ಕುರಿತು ಇಲಾಖೆ ವತಿಯಿಂದ ಸ್ಥಳ ಪರಿಶೀಲನೆ ನಡೆಸಲಾಗುವುದು ಅಗತ್ಯ ಕಂಡು ಬಂದಲ್ಲಿ ಸರ್ಕಾರಕ್ಕೆ ಪತ್ರ ಬರೆದು ಸೇತುವೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಮುತ್ತತ್ತಿ ಜನರಿಗೆ ಆತಂಕ ಬೇಡ.
-ಸೋಮಶೇಖರ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.