ಶ್ರೀರಂಗಪಟ್ಟಣ: ‘ಮಂಡ್ಯ ಜಿಲ್ಲೆಯ ಸರ್ಕಾರಿ ಮತ್ತು ಸಹಕಾರಿ ಕ್ಷೇತ್ರದ ಸಕ್ಕರೆ ಕಾರ್ಖಾನೆಗಳ ದುಃಸ್ಥಿತಿಗೆ ಆಳುವವರ ಇಚ್ಛಾಸಕ್ತಿಯ ಕೊರತೆಯೇ ಕಾರಣ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್. ಕೆಂಪೂಗೌಡ ಟೀಕಿಸಿದರು.
ಪಟ್ಟಣದಲ್ಲಿ, ದಸರಾ ಉತ್ಸವದ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಏರ್ಪಡಿಸಿದ್ದ ‘ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಸ್ಥಿತಿಗತಿ ಮತ್ತು ರೈತರ ಸಂಕಷ್ಟಗಳು’ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
‘1933ರಲ್ಲಿ ಸ್ಥಾಪನೆಯಾದ ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆ ಹೊಸತರಲ್ಲಿ ದಿನ ಒಂದಕ್ಕೆ 400 ಟನ್ ಕಬ್ಬು ಅರೆಯುತ್ತಿತ್ತು. ನಂತರ ಅದರ ಸಾಮರ್ಥ್ಯ 1500 ಟನ್‌ಗೆ ಹೆಚ್ಚಿತು. 1960ರ ಬಳಿಕ ದಿನಕ್ಕೆ 5000 ಸಾವಿರ ಟನ್ ಕಬ್ಬು ಅರೆಯುತ್ತಿತ್ತು. ಸಕ್ಕರೆ ಕಾರ್ಖಾನೆಯ ಲಾಭದ ಹಣದಲ್ಲಿ ಶಾಲೆ, ಕಲ್ಯಾಣ ಮಂಟಪಗಳೂ ಆರಂಭವಾದವು. ಆದರೆ 1990ರ ದಶಕದ ಬಳಿಕ ಈ ಕಾರ್ಖಾನೆ ಕುಂಟುತ್ತಾ ಸಾಗಿದೆ’ ಎಂದರು.
ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಸ್ಥಾಪನೆಯಲ್ಲಿ ಬಿ.ವೈ. ನೀಲೇಗೌಡ, ವೈ.ಸಿ. ಮರಿಯಪ್ಪ, ಡಾ.ಸಿ. ಬಂದೀಗೌಡ, ಎನ್.ಎ. ಚನ್ನೇಗೌಡ ಮಹತ್ವದ ಪಾತ್ರ ವಹಿಸಿದರು. 1959ರಲ್ಲಿ ಸ್ಥಾಪನೆಯಾದ ಈ ಕಾರ್ಖಾನೆ ಲಾಭದಲ್ಲಿ ನಡೆಯುತ್ತಿತ್ತು. ಈಚಿನ ವರ್ಷಗಳಲ್ಲಿ ಇದೂ ಕೂಡ ನಷ್ಟದ ಸುಳಿಗೆ ಸಿಕ್ಕಿದ್ದು, ಖಾಸಗಿಯವರ ಪಾಲಾಗಿದೆ. ಆಡಳಿತ ಮಂಡಳಿಯ ಅದಕ್ಷತೆಯಿಂದಾಗಿ ಕಾರ್ಖಾನೆಗಳು ಅಧೋಗತಿಗೆ ತಲುಪಿವೆ. ಒಂದು ಟನ್ ಕಬ್ಬಿನ ಸಿಪ್ಪೆಗೆ ರೂ. 2600 ಮತ್ತು ಒಂದು ಟನ್ ಮೊಲಾಸಿಸ್‌ಗೆ ರೂ. 15 ಸಾವಿರ ಬೆಲೆ ಇದೆ. ಆದರೆ ಕಬ್ಬಿಗೆ ಮಾತ್ರ 10 ವರ್ಷಗಳ ಹಿಂದೆ ಇದ್ದ ಬೆಲೆಯೇ ಇದೆ. ಕೃಷಿ ವೆಚ್ಚ ದುಬಾರಿಯಾಗಿದ್ದು, ಕಬ್ಬು ಬೆಳೆಗಾರ ಸಂಕಷ್ಟದಲ್ಲಿದ್ದಾನೆ’ ಎಂದು ಸಮಸ್ಯೆ ಬಿಚ್ಚಿಟ್ಟರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸುಧಾಕರ್ ಹೊಸಳ್ಳಿ ಮಾತನಾಡಿ, ‘ಜಿಲ್ಲೆಯಲ್ಲಿ 5 ಸಕ್ಕರೆ ಕಾರ್ಖಾನೆಗಳಿದ್ದು, ಖಾಸಗಿ ಕಾರ್ಖಾನೆಗಳು ಇಂದಿಗೂ ಲಾಭದಲ್ಲಿ ನಡೆಯುತ್ತಿವೆ. ಆದರೆ ಸರ್ಕಾರಿ ಮತ್ತು ಸಹಕಾರಿ ಸಕ್ಕರೆ ಕಾರ್ಖಾನೆಗಳು ರೈತರ ಪಾಲಿಗೆ ಕಹಿಯಾಗಿ ಪರಿಣಮಿಸಿವೆ. ಬೋನಸ್ ಕೊಡುತ್ತಿದ್ದ ಕಾರ್ಖಾನೆಗಳು ದುಡಿಯುವ ಬಂಡವಾಳಕ್ಕಾಗಿ ಸರ್ಕಾರದ ಮುಂದೆ ಅಂಗಲಾಚುವ ದುಸ್ಥಿತಿ ಬಂದೊದಗಿದೆ. ವಿದ್ಯುತ್, ಮದ್ಯ ಸಾರ ಇತರ ಉಪ ಉತ್ಪನ್ನಗಳನ್ನು ಸಮರ್ಪಕವಾಗಿ ಉತ್ಪಾದಿಸುವಲ್ಲಿ ವಿಫಲವಾದ ಪರಿಣಾಮ ನಷ್ಟ ಅನುಭವಿಸುತ್ತಿವೆ. ಕಾರ್ಖಾನೆಗಳ ಉಳಿವಿಗೆ ಸರ್ಕಾರ ಶಾಶ್ವತ ಪರಿಹಾರ ರೂಪಿಸಬೇಕು’ ಎಂದು ಆಗ್ರಹಿಸಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಂಭುಗೌಡ, ಮಳವಳ್ಳಿ ಮಹಾಲಿಂಗಯ್ಯ, ನಾಗಮಂಗಲದ ನಾಗರಾಜು, ಮದ್ದೂರಿನ ಗೋವಿಂದು ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.