
ಪ್ರಜಾವಾಣಿ ವಾರ್ತೆ
ಮಂಡ್ಯ: ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು ಪ್ರತಿ ಟನ್ ಕಬ್ಬಿಗೆ ₹3,500 ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ (ದಕ್ಷಿಣ ಪ್ರಾಂತ) ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಸರ್‌ಎಂ.ವಿ. ಪ್ರತಿಮೆ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು.
ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿನಿಂದ ₹14 ಸಾವಿರ ಲಾಭ ಗಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಟನ್‌ಗೆ ₹3,500 ಬೆಂಬಲ ಬೆಲೆ ನೀಡುವುದರ ಜೊತೆಗೆ ಹೊರ ರಾಜ್ಯಗಳಂತೆ ನಮ್ಮ ರಾಜ್ಯದಲ್ಲೂ ಕಬ್ಬಿಗೆ ಪ್ರೋತ್ಸಾಹ ಧನ ಘೋಷಿಸಬೇಕು. ರಾಜ್ಯದಲ್ಲಿ ಖಾಸಗಿಯಾಗಿ ನಡೆಯುತ್ತಿರುವ ಕಾರ್ಖಾನೆಗಳಲ್ಲಿ ಬಹುತೇಕ ರಾಜಕಾರಣಿಗಳೇ ನಡೆಸುತ್ತಿರುವ ಕಾರ್ಖಾನೆಗಳು ಇವೆ. ಸಕ್ಕರೆ ಕಾರ್ಖಾನೆ ಮಾಲೀಕರು ತಮ್ಮ ಹಿತಾಸಕ್ತಿಯನ್ನು ನೋಡುತ್ತಾರೆಯೇ ಹೊರತು ರೈತರ ಹಿತಾಸಕ್ತಿ ನೋಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸಕ್ಕರೆ ಕಾರ್ಖಾನೆಗಳಿಂದ ಉತ್ಪಾದನೆಯಾಗುವ ವಸ್ತುಗಳ ಮೇಲೆ ಜಿಎಸ್‌ಟಿ ತೆರಿಗೆಯನ್ನು ಸರ್ಕಾರ ಪಡೆದುಕೊಳ್ಳುತ್ತಿದೆ. ಇದರ ಸ್ವಲ್ಪ ಭಾಗವನ್ನಾದರೂ ರೈತನಿಗೆ ಕೊಟ್ಟರೆ ಉಳಿದುಕೊಳ್ಳುತ್ತಾನೆ. ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ ಎಫ್.ಆರ್.ಪಿ ದರ ₹3,550 ನಿಗದಿಪಡಿಸಿದೆ. ಸಕ್ಕರೆ ಅಂಶದ ಇಳುವರಿ ಆಧಾರದ ಮೇಲೆ ನಿಗದಿಪಡಿಸಿದ್ದರೂ, ಕಾರ್ಖಾನೆಗಳು ಪಾರದರ್ಶಕವಾಗಿ ಸಕ್ಕರೆ ಅಂಶ ತೋರಿಸದೇ ಮೋಸ ಮಾಡುತ್ತಿವೆ’ ಎಂದು ಕಿಡಿಕಾರಿದರು.
ಮೈಷುಗರ್ ಕಾರ್ಖಾನೆಯು ಕಳೆದ ಹಲವು ವರ್ಷಗಳಂತೆ ಈ ಬಾರಿಯೂ ಅತ್ಯಂತ ರೋಗಗ್ರಸ್ಥವಾಗಿ ಕುಂಟುತ್ತಾ ಸರಿಯಾಗಿ ಕಬ್ಬು ನುರಿಸಿಲ್ಲ. ಈ ಕಾರ್ಖಾನೆಯಿಂದ ಸರ್ಕಾರಕ್ಕೂ ಲಾಭವಿಲ್ಲ, ರೈತನಿಗೂ ಉಪಯೋಗವಿಲ್ಲ. ಇದರ ಬಗ್ಗೆ ಸೂಕ್ತ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್‌ರಾಜು, ಜಿಲ್ಲಾ ಘಟಕದ ಅಧ್ಯಕ್ಷ ಅಪ್ಪಾಜಿ ಬೂದನೂರು, ಗ್ರಾ.ಪಂ. ಸದಸ್ಯ ಮಹೇಶ್, ಮುಖಂಡರಾದ ನಾರಾಯಣಸ್ವಾಮಿ, ನರಸಿಂಹನ್ ಗಾಣದಾಳು, ಬಸವರಾಜು, ಜಯರಾಂ, ವಸಂತ್‌ಕುಮಾರ್, ಅಂಕಪ್ಪ, ಸಿ.ಟಿ.ಮಂಜುನಾಥ್, ಸಿದ್ದರಾಜು ಭಾಗವಹಿಸಿದ್ದರು.