ADVERTISEMENT

ಪೌರಕಾರ್ಮಿಕ ಆತ್ಮಹತ್ಯೆ: ಅಧಿಕಾರಿಗಳ ಒತ್ತಡ ಕಾರಣ?

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 11:44 IST
Last Updated 23 ಫೆಬ್ರುವರಿ 2021, 11:44 IST
ನಾರಾಯಣ
ನಾರಾಯಣ   

ಮದ್ದೂರು (ಮಂಡ್ಯ ಜಿಲ್ಲೆ): ಪುರಸಭೆ ಪೌರಕಾರ್ಮಿಕರೊಬ್ಬರು ಸೋಮವಾರ ರಾತ್ರಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಪುರಸಭೆ ಮುಖ್ಯಾಧಿಕಾರಿ, ಪರಿಸರ ಎಂಜಿನಿಯರ್‌ ಕಾರಣ ಎಂದು ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾರೆ.

ನಾರಾಯಣ (40) ಆತ್ಮಹತ್ಯೆ ಮಾಡಿಕೊಂಡ ಪೌರ ಕಾರ್ಮಿಕ. ಕೆಲ ದಿನಗಳ ಹಿಂದೆ ನಾರಾಯಣ್‌ರನ್ನು ಪುರಸಭೆ ಮುಖ್ಯಾಧಿಕಾರಿ ಮುರುಗೇಶ್‌, ಪರಿಸರ ಎಂಜಿನಿಯರ್‌ ಜಾಸ್ಮಿನ್‌ ಖಾನ್‌ ಬಲವಂತವಾಗಿ ಮ್ಯಾನ್‌ಹೋಲ್‌ಗಿಳಿಸಿ ಮಲ ಸ್ವಚ್ಛಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಮ್ಯಾನ್‌ಹೋಲ್‌ ಒಳಗೆ ಇಳಿದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಸ್ವಯಂ ಪ್ರೇರಿತವಾಗಿ ಮ್ಯಾನ್‌ಹೋಲ್‌ನೊಳಗೆ ಇಳಿದಿರುವುದಾಗಿ ನಾರಾಯಣ ಹೇಳಿಕೆ ನೀಡಿದ್ದರು. ಇದಕ್ಕೆ ಅಧಿಕಾರಿಗಳ ಒತ್ತಡ ಕಾರಣ ಎಂಬ ಆರೋಪ ಕೇಳಿಬಂದಿತ್ತು. ವಿಡಿಯೊ ಸೋರಿಕೆಯಾಗಲು ವಾಹನ ಚಾಲಕ ಶ್ರೀನಿವಾಸ್‌ ಕಾರಣ ಎಂಬ ಆರೋಪದ ಮೇಲೆ ಶ್ರೀನಿವಾಸ್‌ರನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದರ ವಿರುದ್ಧ ಕಾರ್ಮಿಕ ಸಂಘಟನೆ ಸದಸ್ಯರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಘಟನೆಯಿಂದ ಮನನೊಂದಿದ್ದ ನಾರಾಯಣ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ADVERTISEMENT

‘ಪ್ರಾಮಾಣಿಕವಾಗಿ, ನೀತಿನಿಯಮ ಅನುಸರಿಸಿ ಕೆಲಸ ಮಾಡಿದರೆ ಅವರಿಗೆ ತೊಂದರೆ ಕೊಡುತ್ತಾರೆ. ನಾರಾಯಣ ಸಾವಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಡೆತ್‌ನೋಟ್‌ನಲ್ಲಿ ದಿನಾಂಕ, ಸಹಿ ಇಲ್ಲ. ಬೇರೆ ಯಾರೋ ನಮ್ಮ ಹೆಸರು ಬರೆದು ಹೆದರಿಸುತ್ತಿದ್ದಾರೆ’ ಎಂದು ಮುಖ್ಯಾಧಿಕಾರಿ ಮುರುಗೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.