ADVERTISEMENT

ವಿದ್ಯಾವಂತರಲ್ಲೇ ಮೂಢನಂಬಿಕೆ ಹೆಚ್ಚು: ಲಿಂಗರಾಜು ವಿಷಾದ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 2:37 IST
Last Updated 11 ನವೆಂಬರ್ 2025, 2:37 IST
ಮಳವಳ್ಳಿ ಪಟ್ಟಣದ ಹೊರವಲಯದ ಆದರ್ಶ ವಿದ್ಯಾಲಯದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ನಂಜರಾಜು ಮಾತನಾಡಿದರು
ಮಳವಳ್ಳಿ ಪಟ್ಟಣದ ಹೊರವಲಯದ ಆದರ್ಶ ವಿದ್ಯಾಲಯದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ನಂಜರಾಜು ಮಾತನಾಡಿದರು   

ಮಳವಳ್ಳಿ: ಪ್ರಸ್ತುತದ ಸಮಾಜದಲ್ಲಿ ವಿದ್ಯಾವಂತರೇ ಮೂಢನಂಬಿಕೆಗಳಿಗೆ ಮೊರೆ ಹೋಗುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಹೊರವಲಯದ ಮಾರೇಹಳ್ಳಿ ಆದರ್ಶ ವಿದ್ಯಾಲಯದಲ್ಲಿ ಸೋಮವಾರ ನಡೆದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದೇಶಗಳಲ್ಲಿ ವಿಜ್ಞಾನವನ್ನು ಬಳಸಿಕೊಂಡು ಜ್ಞಾನದ ಮೂಲಕ ದೇಶವನ್ನು ಅಭಿವೃದ್ಧಿಪಡಿಸುತ್ತಿದ್ದರೆ. ಇತ್ತ ನಮ್ಮ ದೇಶದಲ್ಲಿ ಶಾಶ್ವತವಾಗಿ ಮೂಢನಂಬಿಕೆಯನ್ನು ಉಳಿಸುವ ಪಿತೂರಿ ನಡೆಯುತ್ತಿದೆ. ವಿದ್ಯಾರ್ಥಿಗಳು ತಮ್ಮ ಕೌಶಲದ ಮೂಲಕ ವಿಜ್ಞಾನ ಮಾದರಿಗಳನ್ನು ತಯಾರಿಸುತ್ತಿರುವುದು ವೈಜ್ಞಾನಿಕ ಮನೋಭಾವನೆಗೆ ದಾರಿಯಾಗುತ್ತಿದೆ. ವಿಜ್ಞಾನದಲ್ಲಿ ಪ್ರಶ್ನಿಸಿದರೇ ಮಾತ್ರ ವಾಸ್ತವದ ಸತ್ಯ ಮತ್ತು ನಿಖರತೆ ತಿಳಿಯಬಹುದಾಗಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಬೆಳೆಸಬೇಕು’ ಎಂದು ಹೇಳಿದರು.

ADVERTISEMENT

ನಿವೃತ್ತ ಶಿಕ್ಷಕ ನಂಜರಾಜು ಮಾತನಾಡಿ, ‘ಅಡುಗೆ ಮನೆಯೇ ಮೂಲ ವಿಜ್ಞಾನದ ಪ್ರಭಾವಶಾಲಿ ಪ್ರಯೋಗ ಶಾಲೆಯಾಗಿದ್ದು, ವಿಜ್ಞಾನ ಕ್ಷೇತ್ರದಲ್ಲಿ ಅನ್ವೇಷಣೆ, ಸಂಶೋಧನೆಗಳಿಗೆ ಹೆಚ್ಚಿನ ಅವಕಾಶಗಳಿವೆ. ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ಪ್ರತಿಯೊಂದು ವಿಷಯವನ್ನು ವೈಜ್ಞಾನಿಕವಾಗಿ ವಿಶ್ಲೇಶಿಸಿ, ತಾರ್ಕಿಕವಾಗಿ ವಿಜ್ಞಾನದ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಎಸ್ಡಿಎಂಸಿ ಅಧ್ಯಕ್ಷ ಟಿ.ಎಂ.ಪ್ರಕಾಶ್ ಮಾತನಾಡಿ, ‘ಶಿಕ್ಷಕರು ವಿಜ್ಞಾನವನ್ನು ವಿದ್ಯಾರ್ಥಿಗಳ ದೈನಂದಿನ ಜೀವನಕ್ಕೆ ಅನ್ವಯಿಸುವಂತೆ ಪರಿಣಾಮಕಾರಿಯಾಗಿ ಬೋಧಿಸಿ ಅವರಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಮೂಡಿಸಬೇಕು’ ಎಂದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳ ವಿಜ್ಞಾನದ ಮಾದರಿಗಳ ವಿಜ್ಞಾನ ವಸ್ತು ಪ್ರದರ್ಶನ ಗಮನ ಸೆಳೆಯಿತು.
ಮುಖ್ಯ ಶಿಕ್ಷಕ ಶಿವರಾಜು ಸೇರಿದಂತೆ ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.