
ಮಳವಳ್ಳಿ: ಕಳೆದ ಏಳು ದಿನಗಳಿಂದ ಅದ್ದೂರಿಯಾಗಿ ನಡೆದ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಯವರ ಜಯಂತ್ಯುತ್ಸವ ಸೋಮವಾರ ಅದ್ದೂರಿಯಾಗಿ ಸಂಪನ್ನಗೊಂಡಿತ್ತು.
ಡಿ.15ರಂದು ಸುತ್ತೂರಿಂದ ಮಳವಳ್ಳಿ ಪಟ್ಟಣಕ್ಕೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಡಿ.15ರಂದು ಶಿವರಾತ್ರೀಶ್ವರ ಶಿವಯೋಗಿ ಅವರ ಉತ್ಸವಮೂರ್ತಿ ಆಗಮಿಸುವ ಮೂಲಕ ಜಯಂತ್ಯುತ್ಸವಕ್ಕೆ ಚಾಲನೆ ದೊರೆತಿತ್ತು. ಡಿ.16ರಂದು ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಪ್ರದೇಶದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಿವರಾತ್ರೀಶ್ವರ ಶಿವಯೋಗಿಯವರ 1066ನೇ ಜಯಂತ್ಯುತ್ಸವವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದ್ದರು.
ಒಂದು ವಾರದಿಂದ ನಡೆದ ಜಯಂತ್ಯುತ್ಸವದಲ್ಲಿ ಚಾಮರಾಜನಗರ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಲಕ್ಷಾಂತರ ಮಂದಿ ಭಕ್ತರು ಭಾಗಿಯಾಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿತು.
ದಾಸೋಹದಲ್ಲಿ ಬರೋಬರಿ 8 ಲಕ್ಷ ಮಂದಿ ಪ್ರಸಾದ ಸ್ವೀಕರಿಸಿದ್ದಾರೆ ಎಂದು ಅಡುಗೆ ಉಸ್ತುವಾರಿ ತೆಗೆದುಕೊಂಡವರು ಮಾಹಿತಿ ನೀಡಿದರು. ಧ್ವಜಾರೋಹಣದ ಬಾವುಟವನ್ನು ಸಂಪ್ರದಾಯಬದ್ಧವಾಗಿ ಕೆಳಗಿಳಿಸಿದ ನಂತರ ಉತ್ಸವಮೂರ್ತಿಯ ರಥ ಸುತ್ತೂರಿನತ್ತ ತೆರಳಿತು.
ಸುತ್ತೂರಿಗೆ ತೆರಳಿದ ಉತ್ಸವಮೂರ್ತಿಗೆ ರಾಗಿಬೊಮ್ಮನಹಳ್ಳಿ ಗೇಟ್ ಬಳಿ ಭಕ್ತರು ಎರಡು ಜೆಸಿಬಿಗಳ ಮೂಲಕ ಹೂವುಗಳ ಸುರಿಮಳೆಗೈದರು. ಏಳು ದಿನಗಳ ಉತ್ಸವದಲ್ಲಿ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ಗಮನ ಸೆಳೆದರೆ ಮತ್ತೊಂದೆಡೆ ವಸ್ತುಪ್ರದರ್ಶನವು ಸಾಕಷ್ಟು ಜನರನ್ನು ಆಕರ್ಷಿಸಿತು.
ಜೆ.ಎಸ್.ಎಸ್.ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ.ಮಂಜುನಾಥಸ್ವಾಮಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೆಗೌಡ, ಮಾಜಿ ಶಾಸಕ ಕೆ.ಅನ್ನದಾನಿ, ವಿವಿಧ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು.
ಮಳವಳ್ಳಿಯ ಇತಿಹಾಸದಲ್ಲಿ ಇದೊಂದು ಧಾರ್ಮಿಕ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಜಯಂತ್ಯುತ್ಸವ ನಡೆದಿದೆಶ್ರೀನಿವಾಸ್ ಕಂದೇಗಾಲ
ಪಟ್ಟಣದ ಅಶೋಕನಗರದಲ್ಲಿ ಸೋಮವಾರ ಬೆಳಿಗ್ಗೆ ಜಯಂತ್ಯುತ್ಸವದ ಭಾಗವಾಗಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಭಾವ್ಯಕ್ಯತಾ ಯಾತ್ರೆ ನಡೆಯಿತು. ಇದೇ ವೇಳೆ ಭಕ್ತರಿಗೆ ಆಶೀರ್ವಚನ ನೀಡಿದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ‘ಸಮಾಜದಲ್ಲಿ ಮನುಷ್ಯನಿಗೆ ಜ್ಞಾನ ಎನ್ನುವುದು ಮುಖ್ಯ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಶಿಕ್ಷಣ ಸಂಸ್ಕಾರ ಕೊಡಿಸಿ ಜ್ಞಾನವಂತರಾಗಿ ನೀಡಿ ಸಮಾಜ ಧಾರ್ಮಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರ ನೀಡಬೇಕು’ ಎಂದು ಕರೆ ನೀಡಿದರು. ಜಯಂತ್ಯುತ್ಸದ ಯಶಸ್ಸಿಗೆ ದುಡಿದ ಸ್ವಯಂ ಸೇವಕರು ಪೌರ ಕಾರ್ಮಿಕರು ದಾಸೋಹ ಸಿಬ್ಬಂದಿ ವಸ್ತು ಪ್ರದರ್ಶನ ಸಮಿತಿಯ ಪದಾಧಿಕಾರಿಗಳು ಪತ್ರಕರ್ತರು ಸೆಕ್ಯೂರಿಟಿ ಸಿಬ್ಬಂದಿ ವಿವಿಧ ಸಮಿತಿಯ ಪದಾದಿಕಾರಿಗಳು ಅಧಿಕಾರಿಗಳು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು.