ADVERTISEMENT

ವಿಜ್ಞಾತಂ ಪ್ರಶಸ್ತಿಗೆ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಭಾಜನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 13:07 IST
Last Updated 15 ಫೆಬ್ರುವರಿ 2025, 13:07 IST
<div class="paragraphs"><p>ಅವಧೇಶಾನಂದ ಗಿರಿ ಮಹಾರಾಜ್</p></div>

ಅವಧೇಶಾನಂದ ಗಿರಿ ಮಹಾರಾಜ್

   

ನಾಗಮಂಗಲ (ಮಂಡ್ಯ): ತಾಲ್ಲೂಕಿನ ಆದಿಚುಂಚನಗಿರಿ ಮಠದಿಂದ ಕೊಡಲಾಗುವ ‘ವಿಜ್ಞಾತಂ ಪ್ರಶಸ್ತಿ’ಗೆ 2025ನೇ ಸಾಲಿಗೆ ಆಚಾರ್ಯ ಮಹಾಮಂಡಲೇಶ್ವರ ಜುನಾ ಅಖಾಡ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಭಾಜನರಾಗಿದ್ದಾರೆ ಎಂದು ಆದಿಚುಂಚನಗಿರಿ ಮಠ ತಿಳಿಸಿದೆ.

ಆಧ್ಯಾತ್ಮಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಬೆಳಗಿಸುತ್ತಿರುವ ಇವರ ಸಾಧನೆಯನ್ನು ಗುರುತಿಸಿ ಆದಿಚುಂಚನಗಿರಿ ಮಠವು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ADVERTISEMENT

ಅವಧೇಶಾನಂದ ಸ್ವಾಮೀಜಿ ಅವರು 1962ರ ನವೆಂಬರ್ 24ರಂದು ಉತ್ತರ ಪ್ರದೇಶದ ಬುಂದೇಲ್ ಶಹರ್ ಜಿಲ್ಲೆಯ ಖುರ್ಜಾದಲ್ಲಿ ಜನಿಸಿದ್ದು, 17ನೇ ವಯಸ್ಸಿಗೆ ಆಧ್ಯಾತ್ಮಿಕ ಜ್ಞಾನವನ್ನು ಅರಸುತ್ತಾ ದೇಶದಾದ್ಯಂತ ಧರ್ಮ ಬೋಧನೆ ಮಾಡುತ್ತಾ ಸಂಚರಿಸಿ ಹಿಮಾಲಯಕ್ಕೆ ತೆರಳಿ ಅಲ್ಲಿ ಆಳವಾದ ಧ್ಯಾನ ಮತ್ತು ತಪಸ್ ಸಾಧನೆಗಳಲ್ಲಿ ತೊಡಗಿಸಿಕೊಂಡಿದ್ದರು.

1985ರಲ್ಲಿ ಹರಿದ್ವಾರದ ಭಾರತಮಾತಾ ಮಂದಿರದ ಸ್ಥಾಪಕ ಸತ್ಯ ಮಿತ್ರಾನಂದಗಿರಿ ಸ್ವಾಮೀಜಿ ಅವರ ಶಿಷ್ಯರಾಗಿ ದಶನಾಮ ಸನ್ಯಾಸ ಸಂಪ್ರದಾಯ ಅಡಿಯಲ್ಲಿ ದೀಕ್ಷೆ ಪಡೆದು ಸ್ವಾಮಿ ‘ಅವದೇಶಾನಂದ ಗಿರಿ’ ಎಂಬ ಅಭಿದಾನವನ್ನು ಪಡೆದುಕೊಂಡಿದ್ದಾರೆ.

1998ರಲ್ಲಿ ಹರಿದ್ವಾರದ ಕುಂಭಮೇಳದ ಸಮಯದಲ್ಲಿ ಸ್ವಾಮಿ ಅವಧೇಶಾನಂದಗಿರಿ ಅವರನ್ನು ಜುನಾ ಅಖಾಡದ ಆಚಾರ್ಯ ಮಹಾಮಂಡಲೇಶ್ವರನ್ನಾಗಿ ನೇಮಿಸಲಾಗಿದ್ದು, ಅಂದಿನಿಂದಲೂ ಅತ್ಯಂತ ಪ್ರಾಚೀನ ಪರಂಪರೆಯನ್ನು ಹೊಂದಿರುವ ಜುನಾ ಅಖಾಡಾ ಸಂಘಟನೆಯನ್ನು ಇವರು ಮುನ್ನಡೆಸುತ್ತಿದ್ದಾರೆ.

ಇಲ್ಲಿಯವರೆಗೂ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸನ್ಯಾಸಿಗಳಿಗೆ ದೀಕ್ಷೆ ನೀಡಿದ್ದು, ವೇದಾಂತ ಬೋಧನೆಗಳ ಮೂಲಕ ಸಂಖ್ಯಾತ ಅನ್ವೇಷಕರಲ್ಲಿ ಸ್ಫೂರ್ತಿಯನ್ನು ತುಂಬುತ್ತಾ ಬಂದಿದ್ದಾರೆ. ಜೊತೆಗೆ ಶಿಕ್ಷಣ, ಆರೋಗ್ಯ, ರಕ್ಷಣೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಮೀಸಲಾಗಿರುವ ಸಂಘಟನೆಯಾದ ಸಮನ್ವಯ ಸೇವಾ ಟ್ರಸ್ಟ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ವಿಶ್ವಸಂಸ್ಥೆ ಸೇರಿದಂತೆ ಅನೇಕ ಜಾಗತಿಕ ವೇದಿಕೆಗಳಲ್ಲಿ ಸನಾತನ ಧರ್ಮವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೇ ಸಾರ್ವತ್ರಿಕ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುವ ವಿವಿಧ ಅಂತರ್‌ ಧರ್ಮೀಯ ಸಂವಾದಗಳಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.