ADVERTISEMENT

ಶ್ರೀರಂಗಪಟ್ಟಣ| ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ: ಎಂ.ಎಸ್‌. ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 4:09 IST
Last Updated 13 ಜನವರಿ 2026, 4:09 IST
ಶ್ರೀರಂಗಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯನ್ನು ನ್ಯಾಯಾಧೀಶೆ ಜ್ಯೋತ್ಸ್ನಾ ಡಿ ಉದ್ಘಾಟಿಸಿದರು 
ಶ್ರೀರಂಗಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯನ್ನು ನ್ಯಾಯಾಧೀಶೆ ಜ್ಯೋತ್ಸ್ನಾ ಡಿ ಉದ್ಘಾಟಿಸಿದರು    

ಶ್ರೀರಂಗಪಟ್ಟಣ: ‘ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸುವ ಅಗತ್ಯ ಇರುವ ಸಂದರ್ಭದಲ್ಲಿ ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ ಹಾಕಿ ಸ್ವಾಗತಿಸುವ ಬೆಳವಣಿಗೆಗಳು ಆತಂಕ ಹುಟ್ಟಿಸುತ್ತಿವೆ’ ಎಂದು ಸಾಹಿತಿ ಎಂ.ಎಸ್‌. ರಾಘವೇಂದ್ರ ಹೇಳಿದರು.

ಪಟ್ಟಣದಲ್ಲಿ ವಕೀಲರ ಸಂಘ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಅವರು ಮಾತನಾಡಿದರು. ‘ಸ್ವಾಮಿ ವಿವೇಕಾನಂದ ಅವರು ಯುವ ಜನತೆಯ ಮೇಲೆ ಅಪಾರ ಭರವಸೆ ಇಟ್ಟಿದ್ದರು. ಆದರೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಕೋರಮಂಗಲದ ನಡೆದ ಘಟನೆಗಳು ನಿರಾಸೆಗೊಳಿಸುತ್ತವೆ. ಸಾಮಾಜಿಕ ಮಾಧ್ಯಮಗಳು ಯುವ ಜನರ ದಾರಿ ತಪ್ಪಿಸುತ್ತಿವೆ. ಮೌಲ್ಯಗಳನ್ನು ಮೀರಿ ಸುಖ ಕಾಣುವ ಪ್ರವೃತ್ತಿ ಹೆಚ್ಚುತ್ತಿದೆ. ನೈತಿಕ ಪ್ರಜ್ಞೆ ನಗಣ್ಯವಾಗುತ್ತಿದೆ. ಬೆಂಗಳೂರಿನಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಸೈನ್ಸ್‌ ಸ್ಥಾಪಿಸಲು ಟಾಟಾ ಅವರಿಗೆ ಪ್ರೇರಣೆ ನೀಡಿದವರು ವಿವೇಕಾನಂದರು. ಸುಭಾಷ್‌ಚಂದ್ರ ಬೋಸ್‌ ಅವರಲ್ಲಿ ದೇಶಪ್ರೇಮದ ಕೆಚ್ಚು ಹೆಚ್ಚಾಗಲು ವಿವೇಕಾನಂದರ ಪ್ರಭಾವ ಕಾರಣ’ ಎಂದರು.

ನ್ಯಾಯಾಧೀಶೆ ಜ್ಯೋತ್ಸ್ನಾ ಡಿ ಕಾರ್ಯಕ್ರಮ ಉದ್ಘಾಟಿಸಿದರು. ‘ವಿವೇಕಾನಂದ ಅವರು 39 ವರ್ಷ ಬದುಕಿದರೂ ದೇಶದ ಹಿರಿಮೆಯನ್ನು ಜಗತ್ತಿಗೇ ಸಾರಿದರು. ಅವರದ್ದು ಅದ್ಭುತ ಶಕ್ತಿ. ಮನಸ್ಸು ಮತ್ತು ಹೃದಯದಿಂದ ನಾವು ವಿವೇಕಾನಂದರಾದರೆ ಈ ಆಚರಣೆಗೆ ಅರ್ಥ ಬರುತ್ತದೆ’ ಎಂದು ಹೇಳಿದರು.

ADVERTISEMENT

ನ್ಯಾಯಾಧೀಶರಾದ ಎಂ.ಇ. ಮೋಹನಗೌಡ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಎನ್‌. ಮರೀಗೌಡ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಎಂ. ಹರೀಶಕುಮಾರ್‌, ವಕೀಲರ ಸಂಘದ ಕಾರ್ಯದರ್ಶಿ ಸಿ.ಆರ್‌. ದಿನೇಶ್, ಉಪಾಧ್ಯಕ್ಷ ಎನ್‌.ಕೆ. ಶಿವರಾಮು, ಜಂಟಿ ಕಾರ್ಯದರ್ಶಿ ಡಿ.ಎಂ. ಮಂಜುನಾಥ್, ಖಜಾಂಚಿ ಜಯಂತಿ, ಎ.ಟಿ. ಜಯಕುಮಾರ್‌, ಭರತ್‌ ಭೀಮಯ್ಯ, ಶಿಲ್ಪಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.