
ನಾಗಮಂಗಲ: ತಂದೆ, ತಾಯಿ ಮತ್ತು ಗುರುವನ್ನು ಗೌರವಿಸುವವನು ದೇಶದ ಸತ್ಪ್ರಜೆಯಾಗಿ ಉತ್ತಮ ಸಾಧಕನಾಗುತ್ತಾನೆ ಎಂದು ಆದಿಚುಂಚನಗಿರಿ ಮಠದ ಸತ್‌ಕೀರ್ತಿನಾಥ ಸ್ವಾಮೀಜಿ ನುಡಿದರು.
ತಾಲ್ಲೂಕಿನ ಬಿ.ಜಿ. ನಗರದ ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಕಲಾ ಪ್ರದರ್ಶನ ಮತ್ತು ಜಿಯೋ ಮೆಟ್ರೋ ಸಿಟಿ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗೆ ಸತ್ಯದ ದಾರಿ ತೋರಿಸುವವನೇ ನಿಜವಾದ ಗುರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇಂದಿನ ಈ ಕಲಾ ಪ್ರದರ್ಶನವನ್ನು ನೋಡಿದರೆ ಮಕ್ಕಳ ಪ್ರತಿಭೆಯ ಪ್ರೌಢಿಮೆ ವೇದ್ಯವಾಗುತ್ತಿದೆ. ಈ ಶಾಲೆ ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಪೂರಕ ವಾತಾವರಣ ನಿರ್ಮಿಸಿರುವುದು ಸಾಕ್ಷಿಯಾಗಿದೆ. ಮಕ್ಕಳು ಪಠ್ಯ, ಪಠ್ಯೇತರ ಮತ್ತು ಕಲಾ ಕೌಶಲ್ಯಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡಿದರೆ ಶೈಕ್ಷಣಿಕವಾಗಿ ಬೆಳವಣಿಗೆಯಾಗುತ್ತಾರೆ. ಈ ನಿಟ್ಟಿನಲ್ಲಿ ಪರಿಶ್ರಮಿಸಿ ಉತ್ತಮ ಸಾಧಕರಾಗಿ ಎಂದು ಹರಸಿದರು.
ಸಾಹಿತಿ ನಾ.ಸು. ನಾಗೇಶ್ ಮಾತನಾಡಿ, ‘ಈ ಶಾಲೆ ನನಗೆ ಸ್ವರ್ಗದಂತೆ ಭಾಸವಾಗುತ್ತಿದೆ. ಮಕ್ಕಳಿಂದ ಪ್ರದರ್ಶನಗೊಂಡ ಕಲೆ, ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನದ ಪ್ರತಿಭಾ ಪೂರ್ಣ ಚಿತ್ರಗಳು ಮತ್ತು ಮಾದರಿಗಳು ಪ್ರಬುದ್ಧರ ಗಮನವನ್ನೂ ಸೆಳೆಯುತ್ತಿವೆ. ಶಿಕ್ಷಕರು ಮತ್ತು ಮಕ್ಕಳ ಕಲಾ ಪ್ರೌಢಿಮೆ ಹಾಗೂ ಆಸಕ್ತಿಯನ್ನು ಕಂಡು ಮೂಕವಿಸ್ಮಿತ ಭಾವ ಒಡಮೂಡಿದೆ. ಅರಿವನ್ನು ಭಿತ್ತಿ ತಿಳಿವನು ಮೂಡಿಸುವುದೇ ಶಿಕ್ಷಣ. ಈ ರೂಪಕ ಕೇವಲ ಭ್ರಮೆಯಾಗಬಾರದು. ಶಾಲೆಯನ್ನು ಸ್ವರ್ಗದ ಕಲ್ಪನೆಯಲ್ಲಿ ಕಾಪಾಡುವುದು ಹಿರಿಯರಾದ ನಮ್ಮೆಲ್ಲರ ಜವಾಬ್ದಾರಿ. ನಾವು ಈ ಮಕ್ಕಳ ಮೂಲಕ ಭವಿಷ್ಯಕ್ಕಾಗಿ ಬದಲಾಗಬೇಕು. ನಮ್ಮ ಆತ್ಮಾಭಿಮಾನ ಮಕ್ಕಳಿಗೆ ಮಾದರಿಯಾಗಬೇಕು’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್. ಲೋಕೇಶ್ ಪ್ರೋತ್ಸಾಹಕ ನುಡಿಗಳಾಡಿದರು. ಆದಿಚುಂಚನಗಿರಿ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಮಾನ್ಯತಾ ವಿಭಾಗದ ಡೀನ್ ಪ್ರೊ.ಬಿ. ರಮೇಶ್ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕೆ. ರವೀಶ್, ಮಾಡಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ವಿ. ಪುಟ್ಟಸ್ವಾಮಿ, ಶಾಲೆಯ ಸಂಯೋಜಕರು, ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು.