ADVERTISEMENT

ಪ್ರಸಾದ ಸೇವನೆ: ಇರಲಿ ಎಚ್ಚರಿಕೆ

ದೇವಸ್ಥಾನದಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ಶಾಸಕ ಡಾ.ಕೆ.ಅನ್ನದಾನಿ ಬೇಸರ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 10:27 IST
Last Updated 30 ಅಕ್ಟೋಬರ್ 2020, 10:27 IST
ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸಾದ ಸೇವನೆಯಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯವನ್ನು ಶಾಸಕ ಡಾ.ಕೆ.ಅನ್ನದಾನಿ ವಿಚಾರಿಸಿದರು.
ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸಾದ ಸೇವನೆಯಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯವನ್ನು ಶಾಸಕ ಡಾ.ಕೆ.ಅನ್ನದಾನಿ ವಿಚಾರಿಸಿದರು.   

ಮಳವಳ್ಳಿ: ತಾಲ್ಲೂಕಿನ ಹಲಗೂರು ಹೋಬಳಿಯ ಲಿಂಗಪಟ್ಟಣ ಮಾರಮ್ಮ ದೇವಸ್ಥಾನದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಪ್ರಸಾದ ವಿತರಿಸಿರುವುದು ಸರಿಯಲ್ಲ ಎಂದು ಶಾಸಕ ಡಾ.ಕೆ.ಅನ್ನದಾನಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಘಟನೆಯಿಂದ ಅಸ್ವಸ್ಥರಾಗಿರುವ ರೋಗಿಗಳ ಆರೋಗ್ಯ ವಿಚಾರಿಸಿ ನಂತರ ಅವರು ಮಾತನಾಡಿದರು.

‘ಕೋವಿಡ್-19ನಿಂದಾಗಿ ತೀರ್ಥ ಪ್ರಸಾದ ವಿತರಣೆಯನ್ನು ಸರ್ಕಾರ ನಿಷೇಧ ಮಾಡಿದ್ದರೂ ಸಹ ಅದನ್ನು ಉಲ್ಲಂಘನೆ ಮಾಡಿ ವೈದ್ಯಾಧಿಕಾರಿಗಳ ಕುಟುಂಬದವರು ಪ್ರಸಾದ ವಿತರಿಸಿರುವುದು ಸರಿಯಲ್ಲ. ಕಾನೂನನ್ನು ಪಾಲಿಸಬೇಕಾಗಿರುವವರೇ ಈ ರೀತಿ ಮಾಡಿದರೆ ಹೇಗೆ’ ಎಂದು ಪ್ರಶ್ನಿಸಿದರು.

ADVERTISEMENT

‘ಈ ಘಟನೆಯಲ್ಲಿ 70 ಮಂದಿ ಅಸ್ವಸ್ಥರಾಗಿದ್ದು, ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕಾನೂನು ರೀತಿಯಲ್ಲಿ ಕ್ರಮ ಆಗಬೇಕು. ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಪ್ರಕರಣ ನಂತರ ರಾಜ್ಯದಲ್ಲಿ ಇದು ನಾಲ್ಕನೇ ಪ್ರಕರಣವಾಗಿದೆ. ಸಾರ್ವಜನಿಕರು ಪ್ರಸಾದ ಸೇವನೆ ವೇಳೆ ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದರು.

‘ಪ್ರಸಾದ ಸೇವನೆಯಿಂದ ಅಸ್ವಸ್ಥಗೊಂಡವರಲ್ಲಿ 8 ಮಂದಿಯನ್ನು ಹಲಗೂರಿನಿಂದ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಉತ್ತಮವಾದ ಚಿಕಿತ್ಸೆ ನೀಡುತ್ತಿದ್ದು, ಎಲ್ಲರೂ ಆರೋಗ್ಯವಾಗಿ ಇದ್ದಾರೆ’ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ ಮಾತನಾಡಿ, ‘ಅ.27ರಂದು ಸಂಜೆ ಪ್ರಸಾದ ತಯಾರಿಸಿ ವಿತರಣೆ ಮಾಡಿದ್ದು, ನಂತರ ಬೆಳಿಗ್ಗೆ ವಾಂತಿಭೇದಿಯಾಗಿದೆ. ಮೊದಲಿಗೆ 11 ಮಂದಿ ಹಲಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಾಹಿತಿ ತಿಳಿದ ನಮ್ಮ ಇಲಾಖೆ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಸುಮಾರು 60 ಮಂದಿ ಪ್ರಸಾದ ಸೇವಿಸಿದ್ದು, ಪ್ರಸಾದ ವಿಷಾಹಾರವಾಗಿರುವ ಸಾಧ್ಯತೆ ಇದೆ. ಎಲ್ಲರಿಗೂ ಗ್ರಾಮದ ಶಾಲೆಯ ಆವರಣದಲ್ಲಿ ಚಿಕಿತ್ಸೆ ನೀಡಿದ್ದು, ಅವರಲ್ಲಿ ಹತ್ತು ಮಂದಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ’ ಎಂದರು.

‘ಪ್ರಸಾದ ತಯಾರಿಸಿದ ಕುಟುಂಬದ ವೈದ್ಯರು ರಾಮನಗರದ ಚನ್ನಪಟ್ಟಣದವರ ಎನ್ನಲಾಗಿದ್ದು, ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ಕಾನೂನು ಕ್ರಮದ ಚಿಂತನೆ ನಡೆಸಲಾಗುವುದು. ಲಿಂಗಪಟ್ಟಣ ಗ್ರಾಮದಲ್ಲಿಯೇ ಆರೋಗ್ಯ ತಂಡವೊಂದು ಮೊಕ್ಕಂ ಹೂಡಿದ್ದು, ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ನೇತೃತ್ವದಲ್ಲಿ ನಾಲ್ವರು ವೈದ್ಯರು, 9 ಮಂದಿ ಆರೋಗ್ಯ ಸಹಾಯಕರು, 30 ಆಶಾ ಮನೆ-ಮನೆಗೆ ತೆರಳಿ ಎಲ್ಲರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಎಲ್ಲರೂ ಆರೋಗ್ಯವಾಗಿ ಇದ್ದಾರೆ’ ಎಂದು ಮಾಹಿತಿ ನೀಡಿದರು.

ಕಾರ್ಯಕರ್ತೆಯರು ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮಾಧವ ನಾಯಕ, ಪುರಸಭೆ ಉಪಾಧ್ಯಕ್ಷ ನಂದಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಮಲ್ಲೇಗೌಡ, ಮುಖಂಡರಾದ ನಾಗರಾಜು, ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.