ADVERTISEMENT

ಮದ್ದೂರು: ಟಿಎಪಿಸಿಎಂಎಸ್‌ಗೆ ₹18 ಲಕ್ಷ ಹೆಚ್ಚುವರಿ ಆದಾಯ

ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಎಸ್.ಬಿ. ಮಹದೇವು ಮಾಹಿತಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 4:28 IST
Last Updated 27 ಸೆಪ್ಟೆಂಬರ್ 2025, 4:28 IST
ಮದ್ದೂರು ಪಟ್ಟಣದ ಟಿ ಎ ಪಿ ಸಿ ಎಂ ನ ಗೋದಾಮಿನ ಆವರಣದಲ್ಲಿ ನಡೆದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷರಾದ ಮಹದೇವು ಉದ್ಘಾಟಿಸಿದರು, ಸಂಘದ ನಿರ್ದೇಶಕರು ಹಾಗೂ ಸದಸ್ಯರುಗಳು ಹಾಜರಿದ್ದರು.
ಮದ್ದೂರು ಪಟ್ಟಣದ ಟಿ ಎ ಪಿ ಸಿ ಎಂ ನ ಗೋದಾಮಿನ ಆವರಣದಲ್ಲಿ ನಡೆದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷರಾದ ಮಹದೇವು ಉದ್ಘಾಟಿಸಿದರು, ಸಂಘದ ನಿರ್ದೇಶಕರು ಹಾಗೂ ಸದಸ್ಯರುಗಳು ಹಾಜರಿದ್ದರು.   

ಮದ್ದೂರು: ಇಲ್ಲಿನ ಟಿಎಪಿಸಿಎಂಎಸ್‌ ಪ್ರಸಕ್ತ ಸಾಲಿನಲ್ಲಿ ₹25,11,425 ಲಾಭದಲ್ಲಿದ್ದು, ಮುಂದಿನ ವರ್ಷ ಹೆಚ್ಚುವರಿ ₹ 18 ಲಕ್ಷ ಲಾಭ ಹೆಚ್ಚಿಸಿಕೊಳ್ಳಲಿದೆ ಎಂದು ಟಿಎಪಿಸಿಎಂಎಸ್‌ ಅಧ್ಯಕ್ಷ ಎಸ್.ಬಿ. ಮಹದೇವು ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ನಡೆದ ಪ್ರಸಕ್ತ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ರೈತ ಸಮುದಾಯ ಭವನ ನಿರ್ಮಿಸಲು ಸರ್ವ ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡಿದ್ದೇವೆ. ಇದರಿಂದಾಗಿ ಸಂಘದ ಸದಸ್ಯರಾದ ರೈತರಿಗೆ ಅನುಕೂಲವಾಗಲಿದೆ ಎಂದರು.

ADVERTISEMENT

ಸಹಕಾರ ಸಂಘವು ಆರ್ಥಿಕವಾಗಿ ಪ್ರಗತಿ ಹಂತದಲ್ಲಿದೆ. ಸಂಘದ ವಜ್ರ ಮಹೋತ್ಸವದ ಅಂಗವಾಗಿ ಏಳು ಅಂಗಡಿ ಮಳಿಗೆಗಳನ್ನು ನೂತನವಾಗಿ ನಿರ್ಮಿಸಿರುವುದರ ಜೊತೆಗೆ ಸ್ಥಳೀಯರಿಗೆ ಅನುಕೂಲ ಮಾಡಿಕೊಡಲು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿರುವುದಾಗಿ ತಿಳಿಸಿದರು.

ಸಂಘವು ಹೋಟೆಲ್‌ಗೆ ನೀಡಿರುವ ನೆಲಬಾಡಿಗೆ ಮತ್ತು ಹೊಸ ಮಳಿಗೆಗಳಿಂದ ಮುಂದಿನ ವರ್ಷದಿಂದ ₹18 ಲಕ್ಷ ಹೆಚ್ಚುವರಿ ಆದಾಯ ಬರಲಿದೆ. ಹಲವೆಡೆ ಸಂಘದ ಆಸ್ತಿಗಳನ್ನು ಹದ್ದು ಬಸ್ತು ಮಾಡಿಸಿ ತಂತಿ ಬೇಲಿ ಹಾಕಿಸಿ ರಕ್ಷಣೆ ಮಾಡಿರುವುದಾಗಿ ತಿಳಿಸಿದರು.

ಸರ್ವ ಸದಸ್ಯರ ಆಹ್ವಾನ ಪತ್ರಿಕೆ ಕೆಲ ಸದಸ್ಯರಿಗೆ ತಲುಪದೆ ಸಭೆ ಆರಂಭಕ್ಕೂ ಮುನ್ನ ಆಡಳಿತ ಮಂಡಳಿ ಸದಸ್ಯರೊಂದಿಗೆ ಷೇರುದಾರರು ಮಾತಿನ ಚಕಮಕಿ ನಡೆಸಿದರು. ಮಾಹಿತಿ ನೀಡುವವರೆಗೂ ಸಭೆ ನಡೆಸದಂತೆ ಕೆಲ ಸದಸ್ಯರು ಆಧಿಕಾರಿಗಳು ಹಾಗೂ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.

ಸರ್ವ ಸದಸ್ಯರ ಆಹ್ವಾನ ಪತ್ರಿಕೆಯನ್ನು ಅಂಚೆ ಮೂಲಕ ವಾರ ಮುಂಚಿತವಾಗಿ ತಲುಪಿಸಲು ಕ್ರಮ ವಹಿಸಲಾಗಿತ್ತು. ಕೆಲ ಸದಸ್ಯರ ವಿಳಾಸ ತಪ್ಪಾಗಿ ಆಹ್ವಾನ ಪತ್ರಿಕೆ ತಲುಪಿಲ್ಲ. ಸಭೆ ಬಗ್ಗೆ ಕೆಲವು ದಿನಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡಲಾಗಿದೆ ಎಂದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಷೇರುದಾರರ ಮಕ್ಕಳನ್ನು ಅಭಿನಂದಿಸಲಾಯಿತು. ಟಿಎಪಿಸಿಎಂಎಸ್‌ ಉಪಾಧ್ಯಕ್ಷ ಪಿ.ರಾಘವ, ನಿರ್ದೇಶಕರಾದ ಕೆ.ಟಿ.ಶೇಖರ್, ಎಚ್.ಕೆ.ಕರಿಯಪ್ಪ, ಸಿ.ಪಿ.ಸುಧಾ, ಕೆ.ಎಂ.ಅಮೂಲ್ಯ, ಕೆ.ಎಚ್.ಇಂದಿರಾ, ಚಂದ್ರನಾಯಕ್, ಜಯಕೃಷ್ಣ, ಟಿ.ಗೋಪಿ, ಕೆ.ಅನಿತ, ಕಾರ್ಯದರ್ಶಿ ಸಿ.ಪಿ.ಯೋಗಾನಂದ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.