ADVERTISEMENT

ಮೊಬೈಲ್‌ ತಂದಿದ್ದಕ್ಕೆ ವಿದ್ಯಾರ್ಥಿನಿ ವಿವಸ್ತ್ರಗೊಳಿಸಿದ್ದ ಶಿಕ್ಷಕಿ ಅಮಾನತು

mnd

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 13:09 IST
Last Updated 7 ಜನವರಿ 2022, 13:09 IST

ಶ್ರೀರಂಗಪಟ್ಟಣ: ಪ್ರೌಢಶಾಲಾ ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಥಳಿಸಿದ ಆರೋಪ ಎದುರಿಸುತ್ತಿದ್ದ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯೊಂದರ ಮುಖ್ಯಶಿಕ್ಷಕಿ ಸ್ನೇಹಲತಾ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಅಮಾನತುಗೊಳಿಸಿ ಶುಕ್ರವಾರ ಆದೇಶಿಸಿದ್ದಾರೆ.

ಶಾಲೆಗೆ ಮೊಬೈಲ್‌ ತಂದಿದ್ದಾಳೆ ಎಂಬ ಕಾರಣಕ್ಕೆ ಮುಖ್ಯಶಿಕ್ಷಕಿ ಸ್ನೇಹಲತಾ ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎಂದು ಆರೋಪಿಸಿ ಡಿ.23ರಂದು ವಿದ್ಯಾರ್ಥಿನಿಯ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು. ಶಿಕ್ಷಕಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಶಾಲೆ ಎದುರು ಪ್ರತಿಭಟನೆ ನಡೆಸಿದ್ದರು.

ತಹಶೀಲ್ದಾರ್‌ ಶ್ವೇತಾ ಎನ್‌.ರವೀಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ‘ಮುಖ್ಯಶಿಕ್ಷಕಿ ವಿರುದ್ಧ ಕ್ರಮ ಜರುಗಿಸದಿದ್ದರೆ ಶಾಲೆ ಬಂದ್ ಮಾಡಲಾಗುವುದು’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಡಿಡಿಪಿಐ ಟಿ.ಎನ್‌.ಜವರೇಗೌಡ ಶುಕ್ರವಾರ ಶಿಕ್ಷಕಿಯ ಅಮಾನತು ಕೋರಿ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದ್ದರು. ಇದರ ಆಧಾರದ ಮೇಲೆ ಆಯುಕ್ತರಾದ ಡಾ.ಆರ್‌.ವಿಶಾಲ್‌ ಅಮಾನತುಗೊಳಿಸಿದ್ದಾರೆ.

ADVERTISEMENT

‘ಮುಖ್ಯ ಶಿಕ್ಷಕಿ ಅಮಾನತುಗೊಂಡಿರುವ ಬಗ್ಗೆ ಪೋಷಕರು ಹಾಗೂ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿದೆ. ಶಾಲಾ ವಾತಾವರಣವನ್ನು ತಿಳಿಗೊಳಿಸಿ ಯಾವುದೇ ಆತಂಕವಿಲ್ಲದೇ ಶಾಲೆಗೆ ಬರುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಾಗುವುದು’ ಎಂದು ಡಿಡಿಪಿಐ ಜವರೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.