ADVERTISEMENT

ಮಂಡ್ಯ: ಅಕ್ಷರ ಕಲಿಸಿದ ಗುರುವಿಗೆ ನಮನ

ಜಿಲ್ಲೆಯಲ್ಲಿ ಸಂಭ್ರಮದ ಶಿಕ್ಷಕರ ದಿನಾಚರಣೆ; ಶಿಕ್ಷಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 3:51 IST
Last Updated 6 ಸೆಪ್ಟೆಂಬರ್ 2022, 3:51 IST
ಮಂಡ್ಯ ನಗರದ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉತ್ತಮ ಶಿಕ್ಷಕರನ್ನು ಗೌರವಿಸಲಾಯಿತು. ಮಧು ಜಿ.ಮಾದೇಗೌಡ, ಎಂ.ಶ್ರೀನಿವಾಸ್, ಡಾ.ಎಚ್‌.ಎಲ್‌.ನಾಗರಾಜು ಇದ್ದರು
ಮಂಡ್ಯ ನಗರದ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉತ್ತಮ ಶಿಕ್ಷಕರನ್ನು ಗೌರವಿಸಲಾಯಿತು. ಮಧು ಜಿ.ಮಾದೇಗೌಡ, ಎಂ.ಶ್ರೀನಿವಾಸ್, ಡಾ.ಎಚ್‌.ಎಲ್‌.ನಾಗರಾಜು ಇದ್ದರು   

ಮಂಡ್ಯ: ಶಿಕ್ಷಕರ ಕೆಲಸ ಪುಣ್ಯದ ಕೆಲಸವಾಗಿದ್ದು, ಸಮಾಜದಲ್ಲಿ ಪೋಷಕರು ಮಕ್ಕಳ ಪಾಲನೆ ಮಾಡಿದರೆ, ಶಿಕ್ಷಕರು ಅವರ ಭವಿಷ್ಯ ರೂಪಿಸುವ ಶಿಲ್ಪಿಗಳಾಗಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಲ್ಲನ್ನು ಮೂರ್ತಿಯಾಗಿ ಹೇಗೆ ಕೆತ್ತನೆ ಮಾಡುತ್ತಾರೋ ಅದೇ ರೀತಿ ಶಿಕ್ಷಕರಾದವರು ಮಕ್ಕಳನ್ನು ಸಮಾಜದಲ್ಲಿ ಸತ್ಪ್ರಜೆ ಮಾಡುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆ. ಮಕ್ಕಳನ್ನು ಹೆತ್ತು, ಹೊತ್ತು ಪಾಲನೆ ಮಾಡುವ ಜವಾಬ್ದಾರಿ ಪೋಷಕರ ಮೇಲಿರುತ್ತದೆ. ಆದರೆ, ಅವರ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾದುದು ಎಂದು ಸ್ಮರಿಸಿದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜು ಮಾತನಾಡಿ, ಶಿಕ್ಷಣದಲ್ಲಿ ಕಟ್ಟುನಿಟ್ಟಿನ ಬದಲಾವಣೆ ಆಗಿರುವುದರಿಂದಲೇ ಸಮಾಜದಲ್ಲಿ ಕ್ರೌರ್ಯಗಳು ಹೆಚ್ಚಾಗಿವೆ. ಪ್ರಾಚೀನ ಭಾರತೀಯ ಗುರುಕುಲ ಪದ್ಧತಿಯಲ್ಲಿದ್ದ ಸತ್ಯ, ಧರ್ಮ, ನ್ಯಾಯ ನೀತಿ ಒಳಗೊಂಡ ಆಧ್ಯಾತ್ಮಿಕ ಭಾವನೆಗಳು ಮರೆಯಾಗಿವೆ ಎಂದರು.

ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದ ಶಿಕ್ಷಕರನ್ನುಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಶಾಸಕ ಎಂ.ಶ್ರೀನಿವಾಸ್, ಡಯಟ್‌ ಉಪನಿರ್ದೇಶಕ ಎಂ.ಶಿವಮಾದಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಟಿ.ಸೌಭಾಗ್ಯ, ಚಂದ್ರಕಾಂತ, ಶಿಕ್ಷಣ ಇಲಾಖೆ ಸಂಘಟಕ ಕೆ.ನಾಗೇಶ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.