ADVERTISEMENT

ಸರ್ಕಾರಿ ಶಾಲೆ ಉಳಿಸಲು ಶಿಕ್ಷಣ ಇಲಾಖೆ ಸಿಬ್ಬಂದಿ ಪಣ

ತಂಡದೊಂದಿಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 19:45 IST
Last Updated 6 ಮಾರ್ಚ್ 2021, 19:45 IST
ಗಾಣಾಳು ಹೊಸದೊಡ್ಡಿ ಗ್ರಾಮದಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮದಲ್ಲಿ ಬಿಇಒ ಚಿಕ್ಕಸ್ವಾಮಿ ನೇತೃತ್ವದ ತಂಡ
ಗಾಣಾಳು ಹೊಸದೊಡ್ಡಿ ಗ್ರಾಮದಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮದಲ್ಲಿ ಬಿಇಒ ಚಿಕ್ಕಸ್ವಾಮಿ ನೇತೃತ್ವದ ತಂಡ   

ಹಲಗೂರು: ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ್ದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಪೋಷಕರ ಮನವೊಲಿಸಿ ಪುನರಾರಂಭಿಸಿ, ಮೂಲಸೌಕರ್ಯ ಕಲ್ಪಿಸಿ ಪುನಶ್ಚೇತನಗೊಳಿಸಿ ಸರ್ಕಾರಿ ಶಾಲೆಗಳ ಉಳಿವಿಗೆ ತಾಲ್ಲೂಕಿನ ಶಿಕ್ಷಣ ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ಕರ್ತವ್ಯದ ಜೊತೆಗೆ ತಮ್ಮ ವೈಯಕ್ತಿಕ ಸಮಯದಲ್ಲೂ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ತಾಲ್ಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿ ಚಿಕ್ಕಸ್ವಾಮಿ ನೇತೃತ್ವದ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಎಂ.ಎನ್.ಯೋಗೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಯಪ್ರಕಾಶ್ ಸೇರಿದಂತೆ ಸಿಬ್ಬಂದಿಯ ತಂಡ ನಿರಂತರವಾಗಿ ನಡೆಸುತ್ತಿರುವ ಶೈಕ್ಷಣಿಕ ಚಟುವಟಿಕೆಗೆ ಸಾರ್ವಜನಿಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಳಗೆರೆದೊಡ್ಡಿ, ಕರಡಹಳ್ಳಿ, ಲಿಂಗಾಣಪುರ, ಮೇಗಳಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚಿದ್ದ ಶಾಲೆಗಳು ಮತ್ತೆ ಆರಂಭವಾಗಿವೆ. ದಾಖಲಾತಿ ಕಡಿಮೆ ಇರುವ ಕಡೆಗಳಿಗೆ ತಂಡ ತೆರಳಿ ವಿದ್ಯಾರ್ಥಿ, ಪೋಷಕರಿಗೆ ಶಿಕ್ಷಣದ ಮಹತ್ವ ತಿಳಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮನೆ ಮನೆಗೆ ರಾತ್ರಿ ಸಮಯದಲ್ಲಿ ಭೇಟಿ ನೀಡಿ ವಿಷಯವಾರು ಕುರಿತು ವಿದ್ಯಾರ್ಥಿಗಳಲ್ಲಿನ ಕಲಿಕಾಮಟ್ಟ ಗುರುತಿಸಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಒತ್ತು ನೀಡಲು ಶಾಲೆಯಲ್ಲಿ ವಾಸ್ತವ್ಯ ಹೂಡಿ ಯೋಜನೆ ರೂಪಿಸಲಾಗುತ್ತಿದೆ. ಮನರಂಜನೆ ಕಡಿಮೆ ಮಾಡಿ ಕಲಿಕೆಗೆ ಪ್ರೋತ್ಸಾಹ ತುಂಬುವ ಕೆಲಸ ಮಾಡಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.