ADVERTISEMENT

ಶಿಕ್ಷಕರು ರಾಜಕಾರಣಿಗಳಿಂದ ದೂರ ಇರಲಿ: ಸಿ.ಎಸ್‌.ಪುಟ್ಟರಾಜು ಸಲಹೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2018, 11:19 IST
Last Updated 5 ಸೆಪ್ಟೆಂಬರ್ 2018, 11:19 IST
ಮಂಡ್ಯದ ಕಲಾಮಂದಿರದಲ್ಲಿ ಬುಧವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಮಾಡಲಾಯಿತು
ಮಂಡ್ಯದ ಕಲಾಮಂದಿರದಲ್ಲಿ ಬುಧವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಮಂಡ್ಯ: ‘ರಾಜಕಾರಣಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಶಿಕ್ಷಕರು ಕಡೆಯ ಉಸಿರು ಇರುವವರೆಗೆ ಶಿಕ್ಷಕರಾಗಿಯೇ ಉಳಿಯುತ್ತಾರೆ. ಹೀಗಾಗಿ ಶಿಕ್ಷಕರು ವೃತ್ತಿಯ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು. ರಾಜಕಾರಣಿಗಳಿಂದ ದೂರವಿರಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದರು.

ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಕಲಾಮಂದಿರದಲ್ಲಿ ಬುಧವಾರ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ಸೃಷ್ಟಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆ ಜವಾಬ್ದಾರಿಯನ್ನು ಪ್ರಮಾಣಿಕತೆಯಿಂದ ನಿರ್ವಹಣೆ ಮಾಡಬೇಕು. ಎಷ್ಟೋ ಸಂದರ್ಭಗಳಲ್ಲಿ ರಾಜಕಾರಣಿಗಳು ಶಿಕ್ಷಕರನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಹೀಗಾಗಿ ಶಿಕ್ಷಕರು ಸದಾ ಜಾಗೃತರಾಗಿ ತಮ್ಮ ವೃತ್ತಿಯ ಗೌರವ ಕಾಪಾಡಬೇಕು. ಯಾವುದೇ ಕಾರಣಕ್ಕೂ ಶಿಕ್ಷಕರು ರಾಜಕಾರಣಿಗಳ ಜೊತೆ ಕಾಣಿಸಿಕೊಳ್ಳಬಾರದು’ ಎಂದರು.

ADVERTISEMENT

‘ ಶಾಸಕನಾಗಿ, ಸಂಸದನಾಗಿ, ಸಚಿವನಾಗಿ ಜನರ ಸೇವೆ ಮಾಡಲು ನನಗೆ ಮಾರ್ಗದರ್ಶನ ಮಾಡಿದ ಶಿಕ್ಷಕರೇ ಕಾರಣ. ಉತ್ತಮ ವ್ಯಕ್ತಿತ್ವ ರೂಪಿಸಿದ ಗುರುಗಳನ್ನು ನೆನೆಯುವುದು ನಮ್ಮ ಕರ್ತವ್ಯ. ದೇಶದ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾದುದು. ಜಿಲ್ಲೆಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಹಳೆಯ ಶಾಲಾ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದ್ದು ಈಗಾಗಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರ ಜೊತೆ ಚರ್ಚೆ ಮಾಡಲಾಗಿದೆ. ನಮ್ಮ ಜಿಲ್ಲೆಯ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವಂತಾಗಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.‌

ಭಾರತಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಮಾ.ರಾಮಕೃಷ್ಣ ಪ್ರಧಾನ ಉಪನ್ಯಾಸ ನೀಡಿ ‘ಶಿಕ್ಷಕರ ದಿನಾಚರಣೆಯ ದಿನ ನಮಗೆ ಅಕ್ಷರ ಕಲಿಸಿದ ಗುರುಗಳನ್ನು ನೆನಪು ಮಾಡಿಕೊಂಡರೆ ಅದು ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರನ್ನು ಸ್ಮರಿಸಿಕೊಂಡಂತಾಗತ್ತದೆ. ಮಕ್ಕಳಿಗೆ ಪಾಠ ಮಾಡುವುದಷ್ಟೇ ಶಿಕ್ಷಕರ ಕರ್ತವ್ಯ ಆಗಿಲ್ಲ. ಅವರಲ್ಲಿ ಚೈತನ್ಯ ಶಕ್ತಿ ತುಂಬಿ ಒಳ್ಳೆಯ ದಾರಿಯಲ್ಲಿ ನಡೆಯುವ ಮಾರ್ಗದರ್ಶನ ಮಾಡುವುದೂ ಕರ್ತವ್ಯ ಆಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಕರು ತಾಯಿಯ ಹೃದಯ ತೋರಬೇಕು’ ಎಂದು ಹೇಳಿದರು.

‘ಹೂವು ಅರಳಿದಂತೆ ಮಕ್ಕಳ ಮನಸ್ಸನ್ನು ಅರಳಿಸುವ ಗುಣ ಶಿಕ್ಷಕರಲ್ಲಿ ಇರಬೇಕು. ಕಲಿಕೆ ಎಂದರೆ ಕೇವಲ ವಿಷಯಗಳ ಬೋಧನೆಯಷ್ಟೇ ಅಲ್ಲ, ಮಕ್ಕಳಿಗೆ ನಡವಳಿಕೆಯನ್ನು ಕಲಿಸುವುದೂ ಆಗಿದೆ. ಕಲಿಕೆ ನಿರಂತರವಾಗಿದ್ದು ಶಿಕ್ಷಕ ಕೂಡ ಕಲಿಯುತ್ತಾ ತನ್ನ ನಡವಳಿಕೆಯನ್ನು ಉತ್ತಮಪಡಿಸಿಕೊಳ್ಳಬೇಕು. ಯಾವ ಶಿಕ್ಷಕನೂ ಮಕ್ಕಳನ್ನು ದಡ್ಡ, ಏನೂ ಬಾರದವನು ಎಂಬ ಶಬ್ದಗಳಿಂದ ನಿಂದನೆ ಮಾಡಬಾರದು. ಮಕ್ಕಳ ಮನಸ್ಸಿನಲ್ಲಿ ಸಕಾರಾತ್ಮಕವಾದ ಚಿಂತನೆ ಮೂಡಿಸಲು ಶ್ರಮಿಸಬೇಕು’ ಎಂದು ಹೇಳಿದರು.

‘ಕಲಿಯಲು ಆಸಕ್ತಿ ಇಲ್ಲದವನು ಏನನ್ನೂ ಕಲಿಸಲಾರ ಎಂದು ರಾಧಾಕೃಷ್ಣನ್‌ ಹೇಳಿದ್ದಾರೆ. ಕಲಿಕೆ ಎಂಬುದು ಅಧ್ಯಾಪಕನಿಗೂ ಸಂಬಂಧಿಸಿದ ವಿಷಯ. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅದನ್ನು ಬೆಳಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶೈಕ್ಷಣಿಕ ವಾತಾವರಣದಲ್ಲಿ ಶಾಲಾ ಕಟ್ಟಡ, ಪ್ರಯೋಗಾಲಯ ಇನ್ನಿತರ ಸೌಲಭ್ಯಗಳ ಜೊತೆಗೆ ಗುಣಮಟ್ಟದ ಶಿಕ್ಷಕರೂ ಪ್ರಮುಖ ಪಾತ್ರ ವಹಿಸುತ್ತಾರೆ. ಉತ್ತಮ ಶಿಕ್ಷಕರಿಂದ ಸಮಾಜ ಬದಲಾವಣೆಯತ್ತ ಸಾಗುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 24 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಧಾನ ಪರಿಷತ್‌ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್‌.ಅಪ್ಪಾಜಿಗೌಡ, ಶಾಸಕ ಎಂ.ಶ್ರೀನಿವಾಸ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಸ್‌.ನಾಗರತ್ನಾ, ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕರಿ ಶಿವಪ್ರಕಾಶ್‌ ದೇವರಾಜು, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೂರ್ಯಪ್ರಕಾಶ್‌ ಮೂರ್ತಿ ಹಾಜರಿದ್ದರು.

*****************

ಶಿಕ್ಷಕ ಸಮುದಾಯದಲ್ಲಿ ಗೊಂದಲ

‘ಸರ್ಕಾರಿ ಶಾಲಾ ಶಿಕ್ಷಕರು ಹಲವು ಬಗೆಯ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅವೈಜ್ಞಾನಿಕವಾಗಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿರುವುದು ಗೊಂದಲಕ್ಕೆ ಕಾರಣವಾಗಿದೆ. 2012ರಂತೆಯೇ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಬೇಕು ಎಂಬುದು ನನ್ನ ಒತ್ತಾಯವಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಹೇಳಿದರು.

‘ಆರನೇ ವೇತನ ಆರೋಗದ ಬಗ್ಗೆಯೂ ಸಾಕಷ್ಟು ಗೊಂದಲಗಳಿವೆ. ಬಡ್ತಿ ಶಿಕ್ಷಕರ ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯಲಿದೆ. ವರ್ಗಾವಣೆಯ ಲೋಪದೋಷಗಳನ್ನೂ ಸರಿಪಡಿಸಲಾಗುವುದು. ಹೊಸ ನಿಯಮಗಳನ್ನು ಸಡಿಲಿಸಿ ಬಡ್ತಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಜೆಒಸಿಯಿಂದ ಬಂದ ಅದ್ಯಾಪಕರು ಬಿ.ಇಡಿ ಪದವಿ ಪಡೆಯುವ ಅವಶ್ಯಕತೆ ಇಲ್ಲ ಎಂಬ ನಿಯಮಕ್ಕೆ ಒಪ್ಪಿಗೆ ಸಿಕ್ಕಿದೆ’ ಎಂದು ಹೇಳಿದರು.

ವೇದಿಕೆಗೆ ಸುಂದರ ಅಲಂಕಾರ

ಶಿಕ್ಷಕರ ದಿನಾಚರಣೆ ಅಂಗವಾಗಿ ರೂಪಿಸಲಾಗಿದ್ದ ಸುಂದರ ವೇದಿಕೆ ಪ್ರೇಕ್ಷಕರ ಗಮನ ಸೆಳೆಯಿತು. ವೇದಿಯ ಸುತ್ತಲೂ ಸರ್ಕಾರ ಶೈಕ್ಷಣಿಕ ಯೋಜನೆಗಳ ಚಿತ್ರಣವನ್ನು ಚಿತ್ರಕಲೆ ಮೂಲಕ ಚಿತ್ರಿಸಲಾಗಿತ್ತು. ಕರ್ನಾಟಕ ದರ್ಶನ, ಕ್ಷೀರ ಭಾಗ್ಯ, ಅನ್ನ ದಾಸೋಹ, ಸಮವಸ್ತ್ರ, ಪಠ್ಯ ಪುಸ್ತಕ ವಿತರಣೆ, ಸೈಕಲ್‌, ಷೂ ವಿತರಣೆ ಮುಂತಾದ ಕಾರ್ಯಕ್ರಮಗಳ ಚಿತ್ರಣವಿತ್ತು. ವೇದಿಕೆಯ ಮಧ್ಯಭಾಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಭಾವಚಿತ್ರ ಅಳವಡಿಸಿದ್ದು ಗಮನ ಸೆಳೆಯತು. ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‌ ಅಕ್ಷರಗಳ ತೋರಣ ಮೆಚ್ಚುಗೆಗೆ ಪಾತ್ರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.